Home ಬೆಂಗಳೂರು ನಗರ ಮಾರ್ಗೋಸಾ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆಉಬ್ಬು: ಬಿಬಿಎಂಪಿ ಎಂಜಿನಿಯರ್ ಗಳಿಗೆ ಸಚಿವ ಅಶ್ವತ್ಥನಾರಾಯಣರಿಂದ ತೀವ್ರ ತರಾಟೆ

ಮಾರ್ಗೋಸಾ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆಉಬ್ಬು: ಬಿಬಿಎಂಪಿ ಎಂಜಿನಿಯರ್ ಗಳಿಗೆ ಸಚಿವ ಅಶ್ವತ್ಥನಾರಾಯಣರಿಂದ ತೀವ್ರ ತರಾಟೆ

119
0
Unscientific Road Humps on Margosa Road in Malleswaram Karnataka Minister Ashwathanarayan warns BBMP engineers
ಚಿತ್ರ ಮೂಲ: ಮಹೇಶ್ ಕಿರಣ್ ಬಿ ಅವರ ಟ್ವಿಟರ್ ಹ್ಯಾಂಡಲ್ @maheshlaxs

ಬೆಂಗಳೂರು:

ಮಲ್ಲೇಶ್ವರದ ಮಾರ್ಗೋಸಾ ರಸ್ತೆಯ 15ನೇ ಅಡ್ಡರಸ್ತೆಯ ಸಿಗ್ನಲ್ ಬಳಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ಹಾಕಿರುವ ಬಿಬಿಎಂಪಿ ಅಧಿಕಾರಿಗಳನ್ನು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, `ಮಾರ್ಗೋಸಾ ರಸ್ತೆಯ ವೀಣಾ ಸ್ಟೋರ್ಸ್ ಜಂಕ್ಷನ್ ಸಮೀಪ ಹಾಕಿರುವ ರಸ್ತೆ ಉಬ್ಬು ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ರಸ್ತೆ ನಿರ್ಮಾಣದ ನಿಯಮಗಳಿಗೆ ತದ್ವಿರುದ್ಧವಾಗಿ ಮಾಡಿರುವ ಈ ರಸ್ತೆ ಉಬ್ಬಿನಿಂದಾಗಿ ಇಲ್ಲಿ ಹಲವು ಅಪಘಾತಗಳಾಗಿವೆ. ಇದನ್ನು ತ್ವರಿತವಾಗಿ ಸರಿಪಡಿಸದಿದ್ದರೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು’ ಎಂದು ಬಿಬಿಎಂಪಿ ಬೃಹತ್ ರಸ್ತೆಗಳ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರವೀಣ್ ಅವರಿಗೆ ಎಚ್ಚರಿಕೆ ನೀಡಿದರು.

`ಈ ರಸ್ತೆ ಉಬ್ಬಿಗೆ ಬಿಳಿ ಬಣ್ಣದ ಪಟ್ಟೆಗಳನ್ನಾಗಲಿ, ರಾತ್ರಿ ಹೊತ್ತು ಈ ಉಬ್ಬು ಇರುವುದು ಗೊತ್ತಾಗುವಂತೆ ರೇಡಿಯಂ ಫಲಕಗಳನ್ನಾಗಲಿ ಅಳವಡಿಸಿಲ್ಲ. ಜೊತೆಗೆ, ಸಿಗ್ನಲ್ ಸಮೀಪದಲ್ಲೇ ಇದನ್ನು ಹಾಕಲಾಗಿದೆ. ಇಲ್ಲಿ ಅಪಘಾತಗಳು ಸಂಭವಿಸಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದರೂ ಅಧಿಕಾರಿಯಾದ ನೀವು ಸ್ಥಳಕ್ಕೆ ಭೇಟಿ ನೀಡದೆ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದೀರಿ. ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಬಿಬಿಎಂಪಿ ಅಧಿಕಾರಿಗಳು ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ಬಿಡಬೇಕು’ ಎಂದು ಅವರು ಹರಿಹಾಯ್ದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳ ತಂಡವು ಸಬೂಬು ಹೇಳಲು ಮುಂದಾಯಿತು. ಇದನ್ನು ಒಪ್ಪದ ಸಚಿವರು, ದಿನವೂ ಹತ್ತಾರು ಸಾವಿರ ವಾಹನಗಳು ಚಲಿಸುವ ನಿಬಿಡ ರಸ್ತೆಯಾಗಿರುವ ಮಾರ್ಗೋಸಾ ರಸ್ತೆಯಲ್ಲಿ ಇತ್ತೀಚೆಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ಆ ಸಂದರ್ಭದಲ್ಲೇ ಯೋಜನೆ ಪ್ರಕಾರ ವೈಜ್ಞಾನಿಕ ರಸ್ತೆ ಉಬ್ಬು ಹಾಕಬೇಕಿತ್ತು. ಆ ಕೆಲಸ ಮಾಡದ ಕಾರಣಕ್ಕೆ ಹಲವು ವಾಹನ ಸವಾರರು ರಾತ್ರಿ ವೇಳೆ ಬೀಳುತ್ತಿದ್ದಾರೆ. ಈ ರೀತಿ ಇನ್ನು ಮುಂದೆ ಆಗದಂತೆ ನೋಡಿಕೊಳ್ಳಬೇಕು. ಕ್ಷೇತ್ರ ವ್ಯಾಪ್ತಿಯ ಈ ರೀತಿಯ ಕಪ್ಪು ಸ್ಥಳಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಈ ರಸ್ತೆ ಉಬ್ಬಿನ ಸಮೀಪ ಇತ್ತೀಚೆಗೆ ಹಲವು ಅಪಘಾತಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಾರ್ವಜನಿಕರು ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಿದ್ದರು. ಇದಾದಮೇಲೆ ಸಚಿವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಇದರ ಜತೆಗೆ, ಸ್ಥಳಕ್ಕೆ ಭೇಟಿ ನೀಡದೆ ಕರ್ತವ್ಯಲೋಪ ಎಸಗಿರುವ ಎಂಜಿನಿಯರ್ ಪ್ರವೀಣ್ ಅವರನ್ನೂ ಸಚಿವರು ತರಾಟೆಗೆ ಕೂಡ ಎಚ್ಚರಿಕೆ ನೀಡಿದರು.

ಮಲ್ಲೇಶ್ವರಂ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಜಯಶಂಕರ್, ಬಾಲಾಜಿ, ಸಹಾಯಕ ಎಂಜಿನಿಯರ್ ಮಾರ್ಕಂಡಯ್ಯ ಇದ್ದರು.

LEAVE A REPLY

Please enter your comment!
Please enter your name here