ಮಂಗಳೂರು:
ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಂಡು ಬಂದಿರುವ ದೇಶದ್ರೋಹದ ಗೋಡೆ ಬರಹದ ಹಿಂದಿನ ಷಡ್ಯಂತ್ರ ಬಹಿರಂಗ ಪಡಿಸಬೇಕು. ಇಂತಹ ದೇಶದ್ರೋಹಿಗಳನ್ನು ಗಡೀಪಾರು ಮಾಡಬೇಕು. 15 ದಿನಗಳ ಒಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇಂತಹ ದೇಶ ದ್ರೋಹಿಗಳನ್ನು ಗಡಿಪಾರು ಮಾಡುವ ಹೊಣೆಗಾರಿಕೆ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸೇರಿದ್ದು, ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿ ಹಾಗೂ ಕೇಂದ್ರ ಸರಕಾರವನ್ನು ತನಿಖೆಗೆ ಆಗ್ರಹಿಸುತ್ತೇನೆ ಎಂದರು.
ಈ ಹಿಂದೆಯೂ ಮಂಗಳೂರು ವಿಮಾನ ನಿಲ್ದಾಣದ ಬಳಿ ಬಾಂಬ್ ಇಟ್ಟ ಬಗ್ಗೆ ಸುದ್ದಿಯಾಯಿತು. ಬಳಿಕ ಈ ಬಗ್ಗೆ ಸಾಕಷ್ಟು ವದಂತಿ ಹಬ್ಬಿತ್ತು. ಇದಕ್ಕೊಂದು ತಾರ್ಕಿಕ ಅಂತ್ಯ ಕಂಡು ಹಿಡಿಯಲು ಸಾಧ್ಯವಾಗಿಲ್ಲ, ಇದರಿಂದ ಜನರು ಪರಸ್ಪರ ಅನುಮಾನ ಪಡುವಂತಾಗಿದೆ. ಈಗ ಮತ್ತೆ ಗೋಡೆ ಬರಹ ಅದು ಜಿಲ್ಲೆಯ ಹೃದಯ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದೆ. ಈ ರೀತಿಯ ಕೃತ್ಯ ನಡೆಸುವುದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ತ್ವರಿತವಾಗಿ ಬಹಿರಂಗ ಪಡಿಸಬೇಕು. ಇಂತಹ ದೇಶ ದ್ರೋಹಿ ಕ್ರತ್ಯದಲ್ಲಿ ತೊಡಗಿರುವವರನ್ನು ದೇಶದಿಂದಲೇ ಗಡಿಪಾರು ಮಾಡುವುದು ಸೂಕ್ತ.
ಸರಕಾರದ ಗುಪ್ತಚರ ಇಲಾಖೆಗಳಿಗೆ ಇದರ ಹಿಂದೆ ಯಾರಿದ್ದಾರೆ ಎಂದು ಏಕೆ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ನಗರದ ಜನರ ಮಧ್ಯೆ ಸಂಶಯ ಮೂಡಿಸುವ ಕೆಲಸ ನಡೆಸುವವರನ್ನು ತಕ್ಷಣ ಬಂಧಿಸಿ ಜನರ ಸಂಶಯ ನಿವಾರಣೆ ಮಾಡಬೇಕು.
ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಕೋಮಾದಲ್ಲಿದೆ. ಬಡವರ ಪಡಿತರ ಚೀಟಿ ಸಮಸ್ಯೆ, ಮಳೆಹಾನಿ ಪರಿಹಾರದ ಬಗ್ಗೆ ಯಾವೂದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಪಿಂಚಣಿ ಹಣ ಪಾವತಿಯಾಗದೆ ಜನರು ಸಂಕಷ್ಟದಲ್ಲಿದ್ದಾರೆ ಎಂದು ಖಾದರ್ ಹೇಳಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ https://kannada.thebengalurulive.com/pro-terrorist-write-up-on-wall-in-mangaluru/
ಇದನ್ನೂ ಓದಿ: ‘ಪ್ರವಾದಿಗಳಿಗೆ ಕೋಪ ಬಂದರೆ ತಲೆ ದೇಹದಿಂದ ಬೇರ್ಪಡುವುದೊಂದೇ ಶಿಕ್ಷೆ’ https://kannada.thebengalurulive.com/provocative-jihadi-slogan-in-mangalore/