Home ರಾಜಕೀಯ ನಮ್ಮ ಮಕ್ಕಳಿಗೆ ಲಸಿಕೆ ಎಲ್ಲಿ ಡಿ.ಕೆ.ಶಿವಕುಮಾರ್??

ನಮ್ಮ ಮಕ್ಕಳಿಗೆ ಲಸಿಕೆ ಎಲ್ಲಿ ಡಿ.ಕೆ.ಶಿವಕುಮಾರ್??

66
0
Prakash Sesharaghavachar

ಇಪ್ಪತ್ತು ದಿನದ ಹಿಂದೆ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನೂರು ಕೋಟಿ ರೂಪಾಯಿಗಳನ್ನು ವೆಚ್ಚಮಾಡಿ ರಾಜ್ಯದ ಜನತೆಗೆ ಕೋವಿಡ್ ಲಸಿಕೆಯನ್ನು ನಾವೇ ಹಾಕಿಸುತ್ತೇವೆ ಎಂದು ಘೋಷಿಸಿದರು. ಟಿವಿ ಚಾನಲ್‍ಗಳಲ್ಲಿ ಮತ್ತು ಸ್ಥಳೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಈ ಸುದ್ದಿಯು ದೊಡ್ಡ ಸದ್ದು ಮಾಡಿತು.

ರಾಜ್ಯದಲ್ಲಿ ಅಂದು ದಿನನಿತ್ಯ 50ಸಾವಿರ ಪ್ರಕರಣಗಳು ಕಂಡು ಬರುತ್ತಿದ್ದ ದಿನಗಳು ಮತ್ತು 500ಕ್ಕೂ ಹೆಚ್ಚು ಸಾವು ಸಂಭವಿಸಿ ಜನರು ಭಯಭೀತರಾಗಿದ್ದ ಸಮಯ. ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಲಸಿಕೆಯೊಂದೇ ದಾರಿ ಎಂದು ಎಲ್ಲರಿಗೂ ಮನದಟ್ಟಾಗಿತ್ತು.

ಅಲ್ಲಿಯವರೆಗೂ ಲಸಿಕೆಯ ಬಗ್ಗೆ ಉದಾಸೀನ ಮಾಡಿದ್ದ ಜನರು ಲಸಿಕಾ ಕೇಂದ್ರಗಳತ್ತ ದೌಡಾಯಿಸಲು ಆರಂಭಿಸಿದರು.

ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ದಮ್ಮಯ್ಯ ಗುಡ್ಡೆ ಹಾಕಿದರು ಬಾರದ ಜನ ಈಗ ಒಮ್ಮಿಂದೊಮ್ಮಿಗೆ ಲಸಿಕೆಗೆ ಬರ ತೊಡಗಿದಾಗ ಸಹಜವಾಗಿ ಬೇಡಿಕೆಯ ತಕ್ಕ ಹಾಗೆ ಲಸಿಕೆಯು ರಾಜ್ಯ ಸರ್ಕಾರದ ಬಳಿ ಇರದ ಕಾರಣ ಪರಿಸ್ಥಿತಿಯು ಸೂಕ್ಷ್ಮವಾಯಿತು. ಇಂತಹ ಸಂದರ್ಭದಲ್ಲಿ ರಾಜಕೀಯ ನಾಯಕರುಗಳು ಜನರಿಗೆ ಧೈರ್ಯ ತುಂಬಿ ಆತಂಕಕ್ಕೆ ಒಳಗಾಗ ಬೇಡಿ ಎಂದು ಮನವಿ ಮಾಡಬೇಕಿತ್ತು ಆದರೆ ಕಾಂಗ್ರೆಸ್ ಪಾರ್ಟಿಯು ಈ ಪರಿಸ್ಥಿತಿಯನ್ನು ರಾಜಕೀಯ ಲಾಭ ಪಡೆಯುವ ಸದಾವಕಾಶ ಎಂದು ಲೆಕ್ಕಾಚಾರ ಹಾಕಿ ಲಸಿಕೆ ದಾಳವನ್ನು ಉರುಳಿಸಿತು.

ರಾಜ್ಯ ಸರ್ಕಾರ ಲಸಿಕೆ ನೀಡಲು ವಿಫಲವಾಗಿದೆ ಜನರ ಪ್ರಾಣ ಕಾಪಾಡುವುದರಲ್ಲಿ ನಿರ್ಲಕ್ಷ್ಯ ತೋರುತ್ತಿದೆ ದೇಶದಲ್ಲಿ ನೀಡಬೇಕಿದ್ದ ಲಸಿಕೆಯನ್ನು ಹೊರದೇಶಗಳಿಗೆ ರಫ್ತು ಮಾಡಿ ನಮ್ಮ ಮಕ್ಕಳಿಗೆ ಲಸಿಕೆ ದೊರೆಯದಂತಾಗಿದೆ ಎಂದು ಸಾಮಾಜಿಕ ತಾಣಗಳಲ್ಲಿ
ಪ್ರಚಾರ ಮಾಡುತ್ತಾ ಕಾಂಗ್ರೆಸ್‍ಗೆ ಲಸಿಕೆ ನೀಡಲು ಅವಕಾಶ ನೀಡಿ ಎಂದು ಒತ್ತಾಯಿಸಿದರು.

DK Shivakumar second dose vacciantion
ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೇಂದ್ರ ಸರ್ಕಾರವು ಮುಂಚಿತವಾಗಿ ಲಸಿಕೆಗೆ ಕಾರ್ಯಾದೇಶ ನೀಡಲು ವಿಫಲವಾಗಿ ಇಂದು ಲಸಿಕೆಯ ಅಭಾವವುಂಟಾಗಿದೆ ಮತ್ತು ಕೇಂದ್ರದ ಲಸಿಕೆ ನೀಡುವ ನೀತಿಯು ದೋಷಪೂರ್ಣವಾಗಿದೆ ಎಂದು ಪುಂಖಾನುಪುಂಖ ಆರೋಪಗಳನ್ನು ಹೊರೆಸುತ್ತಿದ್ದಾರೆ. ಮತ್ತೊಂದೆಡೆ ತಾವೇ ಸ್ವಯಂ ಪ್ರೇರಣೆಯಿಂದ ಲಸಿಕೆ ನೀಡುತ್ತೇವೆ ಎಂದು ಪ್ರಕಟಿಸಿದ ಕಾರ್ಯಕ್ರಮದ ವಿವರವು ಮಾತ್ರ ಇನ್ನೂ ನಿಗೂಢವಾಗಿಯೇ ಇರುವುದು. ಲಸಿಕೆಯನ್ನು ನೀಡುವ ಗಂಭೀರ ವಿಚಾರವು ಕಾಂಗ್ರೆಸ್ ಮುಖಂಡರುಗಳಿಗೆ ಇತ್ತಾ ಎಂಬ ಅನುಮಾನ ಅವರ ಸಿದ್ದತೆಯನ್ನು ಕಂಡು ಕಾಡುತ್ತಿದೆ. ಲಸಿಕೆಯ ಕಾರ್ಯಕ್ರಮ ಆರಂಭಿಸಲು ಕಾಂಗ್ರೆಸ್ ಹಲವಾರು ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿತ್ತು.

ಪತ್ರಿಕಾಗೋಷ್ಟಿಯನ್ನು ಕರೆಯುವ ಮುನ್ನ ರಾಜ್ಯ ಸರ್ಕಾರದೊಂದಿಗೆ ಮಾತುಕತೆಯನ್ನು ನಡೆಸಿ
⚫ ಪಕ್ಷದ ಲಸಿಕಾ ಅಭಿಯಾನಕ್ಕೆ ಅನುಮತಿಯನ್ನು ಪಡೆಯಬೇಕಿತ್ತು.
⚫ ಲಸಿಕೆ ಉತ್ಪಾದನಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಲಸಿಕೆಯ ಸರಬರಾಜಿಗೆ ಆಶ್ವಾಸನೆ ಮತ್ತು ಲಸಿಕೆಯನ್ನು ಪಡೆಯುವ ಮಾರ್ಗೋಪಾಯಗಳ ಕುರಿತು ಸ್ಪಷ್ಟನೆ ಪಡೆದುಕೊಳ್ಳಬೇಕಿತ್ತು.
⚫ ಲಸಿಕಾ ಅಭಿಯಾನಕ್ಕೆ ಪಕ್ಷದವತಿಯಿಂದ ರೂ 10 ಕೋಟಿ ಗಳನ್ನು ನೀಡುವ ವಾಗ್ದಾನದಂತೆ
⚫ ಹಣವನ್ನು ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಬೇಕಿತ್ತು.
⚫ 90 ಕೋಟಿ ಹಣವನ್ನು ಶಾಸಕರ ಮತ್ತು ಸಂಸದರ ನಿಧಿಯಿಂದ ನೀಡಲಾಗುವುದು ಎಂದ ಸಿದ್ದರಾಮಯ್ಯನವರು ಹೇಳಿದ್ದರು ಅದು ಕಾರ್ಯಗತವಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಕಾನೂನಾತ್ಮಕವಾಗಿ ಪಡೆಯಲು ಮಾರ್ಗೋಪಾಯಗಳನ್ನು ಚರ್ಚಿಸಬೇಕಿತ್ತು.
⚫ ಸರ್ಕಾರದ ಹಣದಿಂದ ರಾಜಕೀಯ ಪಕ್ಷವು ಲಸಿಕೆಯ ಅಭಿಯಾನ ಮಾಡಲು ಸಾಧ್ಯವಾ ಇದಕ್ಕೆ ಸಂವಿಧಾನದಲ್ಲಿ ಅವಕಾಶವಿರುವುದಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಿತ್ತು.
⚫ ಸರ್ಕಾರದ ಹಣದಲ್ಲಿ ರಾಜಕೀಯ ಪಕ್ಷವು ಲಸಿಕೆಯ ಯೋಜನೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂಬುದನ್ನು 6 ದಶಕಗಳ ಕಾಲ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಾರ್ಟಿಗೆ ತಿಳಿಯದ ವಿಚಾರವಾ? ಹೀಗಾಗಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಿತ್ತು.
⚫ ಲಸಿಕೆ ನೀಡುವ ಭರವಸೆಯನ್ನು ಈಡೇರಿಸಲು ತಮ್ಮದೆ ಪಕ್ಷದ ಹಲವು ಮುಖಂಡರುಗಳ ಖಾಸಗಿ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನ ನೆರವು ಪಡೆಯುವುದು ಅತ್ಯಾವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಯಾವ ಪ್ರಯತ್ನ ಕಾಂಗ್ರೆಸ್ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಕಾಂಗ್ರೆಸ್ ವತಿಯಿಂದ ಕೈಗೊಳ್ಳಲು ಉದ್ದೇಶಿಸಿದ್ದ ಲಸಿಕಾ ಅಭಿಯಾನದ ನೀಲಿ ನಕಾಶೆಯನ್ನು ಬಿಡುಗಡೆ ಮಾಡಿ ಲಸಿಕೆ ನೀಡಲು ಕೈಗೊಂಡಿರುವ ಪೂರ್ವಾಭಾವಿ ಸಿದ್ದತೆಯ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದರೆ ಕಾರ್ಯಕ್ರಮದ ವಿಶ್ವಾಸಾರ್ಹತೆ ಹೆಚ್ಚುತ್ತಿತ್ತು.

ಪತ್ರಿಕಾಗೋಷ್ಠಿಯನ್ನು ಕರೆದು ರಾಜಕೀಯ ಹೋರಾಟದ ಕಾರ್ಯಕ್ರಮದ ವಿವರಗಳನ್ನು ನೀಡುವ

ಹಾಗೆ ಕಾಂಗ್ರೆಸ್ ಪಾರ್ಟಿ ಲಸಿಕೆ ನೀಡುತ್ತೇವೆ ಎಂದು ಹೇಳಿರುವುದು ಗಂಭೀರತೆಗಿಂತ ಮಿಗಿಲಾಗಿ ಉಢಾಪೆಯೇ ಹೆಚ್ಚು ಗೋಚರಿಸುತ್ತಿರುವುದಲ್ಲದೆ ಜನರ ಕಾಳಜಿಗಿಂತ ಹೆಚ್ಚಾಗಿ ರಾಜಕೀಯ ಲಾಭದ ಕಮುಟು ವಾಸನೆ ಬಡಿಯುತ್ತಿದೆ.

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಕಳೆದ ನಾಲ್ಕೂವರೆ ತಿಂಗಳಿನಿಂದ ನಡೆಯತ್ತಿರುವ ಲಸಿಕೆಯ ಅಭಿಯಾನದಲ್ಲಿ ಜನರು ಭಾಗಿಯಾಗಬೇಕು ಎಂದು ಒಂದೇ ಒಂದು ಟ್ವೀಟ್ ಏಪ್ರಿಲ್ ತಿಂಗಳಿನವರೆಗೆ ಮಾಡಿಯೇ ಇಲ್ಲ. ಇದಕ್ಕೆ ವಿರುದ್ದವಾಗಿ ಪೌರಕಾರ್ಮಿಕರಿಗೆ ಲಸಿಕೆ ಹಾಕುವ ಮೊದಲು ಪ್ರಧಾನಿಯವರು ಹಾಕಿಕೊಳ್ಳಬೇಕಿತ್ತು ಎಂದು ಲಸಿಕೆಯ ಬಗ್ಗೆ ಭೀತಿ ಹುಟ್ಟಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಡಿ.ಕೆ.ಶಿವಕುಮಾರ್‍ರವರ ಕೋವಿಡ್ ಜ್ಞಾನ ಯಾವ ಪರಿಯಲ್ಲಿದೆ ಎಂದರೆ “ನೆನ್ನೆ 411 ಜನರು ಕೋವಿಡ್‍ಗೆ ಬಲಿಯಾಗಿದ್ದಾರೆ. ಸರ್ಕಾರವು ರಾಜ್ಯದ ಸಂಕಷ್ಟ ಪರಿಸ್ಥಿತಿಯ ಕುರಿತು ನಿರಾಸಕ್ತಿ ತೋರುತ್ತಿರುವುದು ನಾಚಿಗೇಡಿನ ಸಂಗತಿ. ಜನರ ಜೀವ ಉಳಿಸಲು ಲಸಿಕೆಗಳನ್ನು ನೀಡಲೇಬೇಕಾದ್ದು ಈ ಹೊತ್ತಿನ ಅವಶ್ಯಕತೆ ಇನ್ನೂ ತಡ ಮಾಡುವುದನ್ನೂ ಸಹಿಸಲಾಗುವುದಿಲ್ಲ.” ಎಂದು ಟ್ವೀಟರ್ ನಲ್ಲಿ ಬೇಕಾಬಿಟ್ಟಿ ಬರೆಯುತ್ತಾರೆ.

ಭಾರತ ಸರ್ಕಾರವು ವ್ಯಾಕ್ಸಿನ್ ಉತ್ಪಾದಕರಿಂದ ಶೇಕಡಾ 50 ರಷ್ಟು ಶೇಕಡಾ 25 ರಷ್ಟು ರಾಜ್ಯ ಸರ್ಕಾರ ಮತ್ತು 25% ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ಖರೀದಿಸಲು ಅವಕಾಶ ನೀಡಿದೆ. ದೇಶದಲ್ಲಿ ದಿನ ನಿತ್ಯ 30 ಲಕ್ಷ ಜನರಿಗೆ ಲಸಿಕೆಯನ್ನು ಹಾಕಲಾಗುತ್ತಿದೆ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ಸಂಖ್ಯೆಯಲ್ಲಿ 10ಲಕ್ಷ ಹೆಚ್ಚಳವಾಗಿದೆ.

ದೇಶದಲ್ಲಿ ಈಗಾಗಲೇ 21.6 ಕೋಟಿ ಜನರಿಗೆ ಲಸಿಕೆಯನ್ನು ಹಾಕಲಾಗಿದೆ. ಜೂನ್ ತಿಂಗಳಿನಲ್ಲಿ 12ಕೋಟಿ ಲಸಿಕೆಯು ಲಭ್ಯವಿರುತ್ತದೆ ಅದಕ್ಕೆ ಸಿದ್ದತೆ ಮಾಡಿಕೊಳ್ಳಿ ಎಂದು ರಾಜ್ಯ ಗಳಿಗೆ ಕೇಂದ್ರ ಸರ್ಕಾರವು ಸೂಚನೆಯನ್ನೂ ನೀಡಿದೆ.

ಅನೇಕ ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಉಚಿತವಾಗಿ ವ್ಯಾಕ್ಸೀನ್ ನೀಡುವ. ವ್ಯವಸ್ಥೆಯನ್ನು ಮಾಡಿಕೊಂಡ ಪರಿಣಾಮ ಸಹಸ್ರಾರು ಉದ್ಯೋಗಿಗಳಿಗೆ ಲಸಿಕೆ ಸುಲಭವಾಗಿ. ದೊರೆಯುವಂತಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪತ್ರಿಕೆಗಳೊಂದಿಗೆ ಮಾತನಾಡುತ್ತಾ ಹಲವಾರು ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಸಿ.ಆರ್ ನಿಧಿಯಲ್ಲಿ ರೂ175 ಕೋಟಿ ಉಚಿತ ಲಸಿಕೆಗಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ನೂರು ಕೋಟಿ ವೆಚ್ಚ ಮಾಡುತ್ತೇವೆ ಎಂದ ಕಾಂಗ್ರೆಸ್ ಪಾರ್ಟಿಯ ಲಸಿಕೆ ಕಾರ್ಯಕ್ರಮವನ್ನು ಇನ್ನೂ ಗುಪ್ತವಾಗಿಯೇ ಇರುವುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 45 ವರ್ಷಕ್ಕೆ ಮೇಲ್ಪಟ್ಟ ಜನರಿಗೆ ಯಾವುದೆ ಗೊಂದಲ ಮತ್ತು ಗಡಿಬಿಡಿ ಇಲ್ಲದೆ ಲಸಿಕೆಯನ್ನು ನೀಡುತ್ತಿದ್ದಾರೆ. ರಾಜ್ಯಸರ್ಕಾರವು 18 ರಿಂದ 45 ವಯಸ್ಸಿನವರಿಗೆ ಉಚಿತ ಲಸಿಕೆ ನೀಡಲಾಗುವುದು ಎಂದು ತಿಳಿಸಿದೆ ಮತ್ತು ಈಗಾಗಲೇ ಕೋವಿಡ್ ಮೂಂಚೂಣ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲು ಆರಂಭಿಸಿದೆ. ದೇಶವ್ಯಾಪಿ ಅತ್ಯಂತ ಶಾಂತವಾಗಿ ಲಸಿಕೆಯ ಅಭಿಯಾನ ಸುಗುಮವಾಗಿ ನಡೆಯುತ್ತಿರುವ ವೇಳೆ ಕಾಂಗ್ರೆಸ್ ಅನಗತ್ಯವಾಗಿ ವಾಸ್ತವಿಕತೆಯ ಮಾಹಿತಿ ಇಲ್ಲದೆ ಜನರಲ್ಲಿ ಆತಂಕ ಸೃಷ್ಟಿಸುವ ಕೆಲಸವನ್ನು ಮಾಡಲು ಮುಂದಾಗಬಾರದು.

ತಾವು ಉದ್ದೇಶಿಸಿರುವ ಯೋಜನೆಯಿಂದ ಹೇಗೆ ರಾಜ್ಯ ಸರ್ಕಾರಕ್ಕಿಂತ ವೇಗವಾಗಿ ಲಸಿಕೆಯನ್ನು ನೀಡಲು ಸಾಧ್ಯವಿದೆ ಎಂಬುದನ್ನು ಮನವರಿಕೆ ಮಾಡಬೇಕು.ಸದ್ಯದ ಇವರ ಧೋರಣೆ ನೋಡಿದರೆ ಲಸಿಕೆ ಹಾಕುವುದು ಚುನವಾಣೆಯಲ್ಲಿ ಕರಪತ್ರ ಹಂಚಿದಷ್ಟೇ ಸುಲಭ ಎಂದು ಕೆ.ಪಿ.ಸಿ.ಸಿ. ಭಾವಿಸಿರುವಂತಿದೆ. ಅಬ್ಬರದ ಪ್ರಚಾರದ ನಡುವೆ ಪ್ರಕಟ ಮಾಡಿದ ಲಸಿಕೆ ಎಂದು ದೊರೆಯುತ್ತದೆ ಎಂದು ಮಕ್ಕಳು ಕೇಳುವ ಮುನ್ನ ಕಾಂಗ್ರೆಸ್ ತಾನು ನೀಡಿರುವ ವಾಗ್ದಾನವನ್ನು ಉಳಿಸಿಕೊಳ್ಳಬೇಕು ಇಲ್ಲವಾದರೆ ಇವರ ಪೊಳ್ಳು ಭರವಸೆಯು ಪಕ್ಷಕ್ಕೆ ತಿರುಗುಬಾಣವಾಗಬಹುದು.

ಪ್ರಕಾಶ್ ಶೇಷರಾಘವಾಚಾರ್,
sprakashbjp@gmail.com

Prakash Sesharaghavachar is a Joint Spokesperson of Karnataka BJP

Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

LEAVE A REPLY

Please enter your comment!
Please enter your name here