Home ಆರೋಗ್ಯ ಜೀವರಕ್ಷಕ ಆಕ್ಸಿಜನ್ ಇವರಿಗೆ ರಾಜಕೀಯ ಸರಕಾ?

ಜೀವರಕ್ಷಕ ಆಕ್ಸಿಜನ್ ಇವರಿಗೆ ರಾಜಕೀಯ ಸರಕಾ?

89
0
Prakash Sesharaghavachar

ಮೇ 3 ನೇ ತಾರೀಖು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನೌಕರರ ಹೊಣಗೇಡಿತನ ಮತ್ತು ಜಿಲ್ಲಾಧಿಕಾರಿಯ ಸ್ವಪ್ರತಿಷ್ಠೆಗೆ 24 ಕೋವಿಡ್ ಸೋಂಕಿತರು ಆಕ್ಸಿಜನ್ ಸರಬರಾಜು ಸ್ಥಗಿತಗೊಂಡು ಸಾವನ್ನಪ್ಪಿದರು. ಜಿಲ್ಲಾಸ್ಪತ್ರೆಯ ಅಧೀಕ್ಷರು ಮತ್ತು ಆಕ್ಸಿಜನ್ ನಿರ್ವಹಣೆ ಮಾಡುವ ಸಿಬ್ಬಂದಿಗಳ ಬೇಜವಾಬ್ದಾರಿತನಕ್ಕೆ ಅಮಾಯಕರು ಪ್ರಾಣ ಕಳೆದುಕೊಂಡರು.

ಈ ಘಟನೆಯ ಹಿನ್ನಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಮಾಡಲು ತಾಕೀತು ಮಾಡುತ್ತದೆ. ಕೋವಿಡ್ 2ನೆಯ ಅಲೆಯು ಆರಂಭವಾದ ತರುವಾಯ ಆಕ್ಸಿಜನ್ ಬೇಡಿಕೆಯು ಮುಗಿಲು ಮುಟ್ಟಿದೆ. ದೆಹಲಿಯ ಕೆಲವು ಆಸ್ಪತ್ರೆಗಳು ತಮಗೆ ಆಕ್ಸಿಜನ್ ಕೊಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲನ್ನು ಏರಿದರು.

Suresh Kumar Oxygen Plant in Chamarajanagar

ಇದನ್ನೇ ಆಧಾರವಾಗಿಟ್ಟು ಕೊಂಡು ಕೆಲವು ರಾಜ್ಯ ಸರ್ಕಾರಗಳು ನ್ಯಾಯಾಲಯದ ಬಾಗಿಲು ತಟ್ಟ ತೊಡಗಿದವು. ಸಂವಿಧಾನದ ಮೂಲ ರಚನೆಯಲ್ಲಿ ಶಾಸಕಾಂಗ ನ್ಯಾಯಾಂಗ ಮತ್ತು ಕಾರ್ಯಾಂಗಗಳಿಗೆ ಅವರವರ ಅಧಿಕಾರ ವ್ಯಾಪ್ತಿಯ ಬಗ್ಗೆ ಸ್ಪಷ್ಟ ಗೆರೆಯನ್ನು ಎಳೆದಿದೆ. ಒಬ್ಬರು ಮತ್ತೊಬ್ಬರ ಮೇಲೆ ಸವಾರಿ ಮಾಡಬಾರದು ಎಂಬುವುದೇ ಇದರ ಹಿಂದಿನ ಸದುದ್ದೇಶ. ಈ ಹಿನ್ನಲೆಯಲ್ಲಿ ಆಡಳಿತಾತ್ಮಕ ವಿಚಾರದಲ್ಲಿ ಶಾಸಕಾಂಗದ ಕರ್ತವ್ಯವನ್ನು ನ್ಯಾಯಾಂಗ ಕೈಗೆತ್ತಿಕೊಳ್ಳುವುದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುತ್ತದೆ. ಕೊರೊನ ವೈರಸ್ ರಾಷ್ಟ್ರೀಯ ವಿಪತ್ತಿನ ನಿರ್ವಹಣೆಯ ವೇಳೆ ನ್ಯಾಯಾಂಗವು ಕೂಡಾ ಸಂಯಮದಿಂದ ವರ್ತಿಸಬೇಕಾಗುತ್ತದೆ. ಅತಿಯಾದ ನ್ಯಾಯಾಂಗ ಕ್ರೀಯಾಶೀಲತೆಗೆ ಇದು ಸಂದರ್ಭವಲ್ಲ.

ಹಾಗಿದ್ದರೂ ದೇಶದ ಆಕ್ಸಿಜನ್ ಬೇಡಿಕೆ ಮತ್ತು ಲಭ್ಯತೆಯ ಮಾಹಿತಿ ಇಲ್ಲದೆ ನ್ಯಾಯಾಲಯಗಳು ಕೇಂದ್ರ ಸರ್ಕಾರಕ್ಕೆ ಇಂತಿಷ್ಟು ಆಕ್ಸಿಜನ್ ಸರಬರಾಜು ಮಾಡಬೇಕು ಎಂದು ಕಾರ್ಯಸಾಧುವಲ್ಲದ ಆದೇಶ ಹೊರಡಿಸಲು ಮುಂದಾಯಿತು. ಆಡಳಿತಾತ್ಮಕ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಇಲ್ಲದೆ ಏಕಪಕ್ಷೀಯವಾಗಿ ನ್ಯಾಯಾಲಯ ಆಕ್ಸಿಜನ್ ಸರಬರಾಜು ಪ್ರಮಾಣವನ್ನು ನಿಗದಿಪಡಿಸಿ ಮಾಡುತ್ತಿದ್ದ ಆದೇಶಗಳು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದು ಸುಳ್ಳಲ್ಲ.

Karnataka High Court

ಈ ಹಿನ್ನಲೆಯಲ್ಲಿ ಆಡಳಿತಾತ್ಮಕ ವಿಚಾರಗಳಲ್ಲಿ ನ್ಯಾಯಾಂಗ ಮೂಗು ತೂರಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ದ ಕೇಂದ್ರ ಸರ್ಕಾರ ಮನವಿಯನ್ನು ಸಲ್ಲಿಸಿತೇ ವಿನಹ ಯಾವುದೇ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಿರುವ ಆಕ್ಸಿಜನ್ ನೀಡಲು ಸಾಧ್ಯವಿಲ್ಲ ಎಂದು ಹೇಳಿಲ್ಲ. ಮೇಲ್ಮನವಿ ಸಲ್ಲಿಸಿದ ಹಿನ್ನಲೆಯನ್ನು ರಾಜ್ಯದ ಜನತೆಗೆ ಸರ್ಕಾರ ಮತ್ತು ಪಕ್ಷವು ಸ್ಪಷ್ಟೀಕರಣ ನೀಡದೆ ದಿವ್ಯ ಮೌನವಹಿಸಿದ ಕಾರಣ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವಂತಾಯಿತು.

ಹಾಗಾದರೆ 12 ಜನರ ತಜ್ಞರ ಸಮಿತಿ ಸುಪ್ರೀಂ ಕೋರ್ಟ್ ರಚನೆ ಯಾಕೆ ಮಾಡಿದರು ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರವು ಸ್ಪಷ್ಟ ಶಬ್ದಗಳಲ್ಲಿ ಸುಪ್ರೀಂ ಕೋರ್ಟ್‍ಗೆ ನೀವು ದೈನಂದಿನ ನಿರ್ವಹಣೆಯಲ್ಲಿ ಮಧ್ಯಪ್ರವೇಶಿಸುವುದು ಕೋವಿಡ್ ಹೋರಾಟಕ್ಕೆ ಹಿನ್ನಡೆಯಾಗುವುದು ತಾವು ಸಮಿತಿಯೊಂದು ರಚಿಸಿ ಅವರು ಸರ್ಕಾರಕ್ಕೆ ಸಲಹೆ ನೀಡಲಿ ಎಂದು ಕೇಂದ್ರ ಸರ್ಕಾರವೇ ಸೂಚಿಸಿದ ಪರಿಣಾಮ 12 ಜನರ ಸಲಹಾ ಸಮಿತಿ ರಚಿನೆಯಾಗಿರುವುದು.

ಕೋವಿಡ್ ಹೋರಾಟದಲ್ಲಿ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಮಾಡದೆ ತನ್ನ ಸಹಾಯ ಹಸ್ತವನ್ನು ಚಾಚಿದೆ ಅದು ಕೇಂದ್ರ ಸರ್ಕಾರದ ಕರ್ತವ್ಯವೂ ಹೌದು. ದೌರ್ಭಾಗ್ಯವೆಂದರೆ ವಿರೋಧ ಪಕ್ಷಗಳಿಗೆ ಜೀವ ರಕ್ಷಕ ಆಕ್ಸಿಜನ್ ಸರಬರಾಜು ರಾಜಕೀಯ ಮಾಡುವವಸ್ತುವಾಗಬಾರದಿತ್ತು. ರಾಜ್ಯದ ಜನತೆಯ ಸಂಕಟದ ಮೇಲೆ ತಮ್ಮ ರಾಜಕೀಯ ಭವಿಷ್ಯವನ್ನು ಮತ್ತೇ ಕಟ್ಟಿಕೊಳ್ಳಲು ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆದಿರುವಂತೆ ಭಾಸವಾಗುತ್ತಿದೆ.

ವಿರೋಧ ಪಕ್ಷದ ನಾಯಕರುಗಳು ರಾಜಕೀಯ ಕಾರಣಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯವನ್ನು ಕಡೆಗಣಿಸಿದೆ ಎಂದು ಯಾವುದೇ ದಾಖಲೆಯಾಗಲಿ ಮತ್ತು ಸಾಕ್ಷ್ಯವಿಲ್ಲದೆ ಸುಖಾಸುಮ್ಮನೆ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ.

ಕುಮಾರಸ್ವಾಮಿಯವರ ಆತುರ ಹೇಗಿದೆಯೆಂದರೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಕೇಂದ್ರ ಸರಬರಾಜು ಮಾಡಿಲ್ಲ ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕು ಎಂದು ಟ್ವೀಟ್ ಮಾಡುತ್ತಾರೆ. ಆದರೆ ಇದು ನ್ಯಾಯಾಂಗ ನಿಂದನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯದ ಆದೇಶದ ಬಗ್ಗೆ ಮಾಹಿತಿಯೇ ಇಲ್ಲದೆ ಉಢಾಫೆಯಿಂದ ಪುಕ್ಕಟ್ಟೆ ಸಲಹೆ ನೀಡುತ್ತಾ ಸರ್ಕಾರದ ಮೇಲೆ ಹರಿಹಾಯುತ್ತಾರೆ.

ರಾಜ್ಯದಲ್ಲಿ ಆಕ್ಸಿಜನ್ ಸರಬರಾಜು ಮತ್ತು ಉತ್ಪಾದನೆಯ ಬಗ್ಗೆ ವಿಶೇಷ ಗಮನ ನೀಡಿದ್ದೇವೆ ಮತ್ತು ಕೇಂದ್ರದೊಡನೆ ನಿರಂತರ ಸಂಪರ್ಕ ಸಾಧಿಸಿ ರಾಜ್ಯದ ಬೇಡಿಕೆಗನುಗುಣವಾಗಿ ಆಕ್ಸಿಜನ್ ಸರಬರಾಜು ಪಡೆಯಲು ನಾವು ಯಶಸ್ವಿಯಾಗಿದ್ದೇವೆ ಎನ್ನುತ್ತಾರೆ ಕೈಗಾರಿಕಾ
ಸಚಿವ ಜಗದೀಶ್ ಶೆಟ್ಟರ್ ರವರು.

ರಾಜ್ಯದ ಆಕ್ಸಿಜನ್ ಕೋಟಾ 800 ಮೆಟ್ರಿಕ್ ಟನ್ ನಿಂದ 1050 ಟನ್‍ಗೆ ಏರಿಕೆಯಾಗಿದೆ ಇದಲ್ಲದೆ ರಾಜ್ಯಕ್ಕೆ ಬಹ್ರೇನ್‍ನಿಂದ 140 ಮೆಟ್ರಿಕ್ ಟನ್ ಮತ್ತು ಸಿಂಗಾಪುರದಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಮಂಗಳೂರು ಬಂದರನ್ನು ತಲುಪಿದೆ. ವಿದೇಶದಿಂದ ದೇಶಕ್ಕೆ ಬಂದ ಆಮ್ಲಜನಕ ಸಾಂದ್ರಕದಲ್ಲಿ 2,600 ಆಕ್ಸಿಜನ್ ಸಾಂದ್ರಕವನ್ನು ರಾಜ್ಯಕ್ಕೆ ನೀಡಿದೆ. ಆಕ್ಸಿಜನ್ ಸಾಂದ್ರಕವು ತುರ್ತು ಉಪಯೋಗಕ್ಕೆ ವಿಶೇಷವಾಗಿ ಮನೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರಿಗೆ ತಾತ್ಕಾಲಿಕವಾಗಿ ಸಹಾಯಕವಾಗುವುದು.

ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಿಮಿಷಕ್ಕೆ 1000 ಲೀಟರ್ ಉತ್ಪಾದಿಸುವ 34 ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಈಗಾಗಲೆ ಕೇಂದ್ರ ಸರ್ಕಾರ ಪಿ.ಎಂ.ಕೇರ್ ನಿಧಿಯಿಂದ ಅನುಮೋದನೆ ನೀಡಿದೆ ಮತ್ತು ಇದಲ್ಲದೆ ಎಂ.ಆರ್.ಪಿ.ಎಲ್ ಕರ್ನಾಟಕದಲ್ಲಿ 6 ಆಕ್ಸಿಜನ್
ಘಟಕಗಳನ್ನು ತ್ವರಿತವಾಗಿ ಸ್ಥಾಪಿಸಲು ಕ್ರಮ ಜರುಗಿಸಿದೆ.ಆಕ್ಸಿಜನ್ ಸಾಗಿಸಲು ವಿಶೇಷ ಟ್ಯಾಂಕರ್‍ಗಳ ಅವಶ್ಯಕತೆ ಇರುವುದು ಆರಂಭದಲ್ಲಿ ಟ್ಯಾಂಕರ್ ಕೊರತೆಯಿಂದ ಸರÀಬರಾಜು ವಿಳಂಬವಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರ 12 ಟ್ಯಾಂಕರ್ ಗಳನ್ನು ರಾಜ್ಯಕ್ಕೆ ನೀಡಿರುವ ಕಾರಣ ಸರಬರಾಜಿನ ಒತ್ತಡವು ಕಡಿಮೆಯಾಗಿದೆ.

ಮಂಡ್ಯ, ಚಿಕ್ಕಮಗಳೂರು,ಹಾವೇರಿ, ಮತ್ತು ಮಡಿಕೇರಿಗಳಲ್ಲಿ ಕೇವಲ 6 ಟನ್ ಆಕ್ಸಿಜನ್ ಸಂಗ್ರಹಿಸುವ ಟ್ಯಾಂಕರ್‍ಗಳು ಇರುವುದರಿಂದ 20 ಟನ್ ಟ್ಯಾಂಕರ್ ಪದೇ ಪದೇ ಈ ಜಿಲ್ಲೆಗಳಿಗೆ ಸರಬರಾಜು ಮಾಡುತ್ತಿರಬೇಕು ಕೊಂಚ ತಡವಾದರು ರೋಗಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ.

ಆಕ್ಸಿಜನ್ ಸರಬರಾಜು ಮತ್ತು ಲಭ್ಯತೆಯ ವಿವರಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಒಂದು ದೂರವಾಣ ಕರೆ ಮಾಡಿದ್ದರೆ ಮಾಹಿತಿ ದೊರೆಯುತ್ತಿತ್ತು. ಆದರೆ ಪತ್ರಿಕಾ ಮಾಹಿತಿಯ ಆಧಾರದ ಮೇಲೆ ರಾಜಕೀಯ ಕಾರಣಕ್ಕಾಗಿ ರಾಜ್ಯಕ್ಕೆ ದ್ರೋಹವಾಗುತ್ತಿದೆ ಎಂದು ಗಂಭೀರ ಆರೋಪವನ್ನು ಟ್ವೀಟ್ ಮೂಲಕ ಮಾಡಿರುವುದು ಇವರಿಗೆ ಪರಿಸ್ಥಿತಿಯ ಗಂಭೀರತೆಗಿಂತ ತಮ್ಮ ರಾಜಕೀಯ ಅಜೆಂಡಾ ಮುಖ್ಯವಾದಂತಿದೆ.

ಇವರ ಮತ್ತೊಂದು ಬೇಡಿಕೆ ನಮ್ಮ ರಾಜ್ಯದ ಉತ್ಪಾದನೆ ನಮ್ಮ ಬಳಕೆಗೆ ಅವಕಾಶ ನೀಡಿ ಎಂದು. ವಾಸ್ತವವಾಗಿ ಕರ್ನಾಟಕಕ್ಕೆ 150 ಮೆಟ್ರಿಕ್ ಟನ್ ಆಕ್ಸಿಜನ್ ಒಡಿಶಾದಿಂದ ನಮಗೆ ದೊರೆಯುತ್ತಿದೆ 20ಟನ್ ಕೋಯಿಕೋಡ್ ನಿಂದ ಬರುತ್ತಿದೆ. ತಜ್ಞರ ಸಮಿತಿಯು ರಾಜ್ಯಕ್ಕೆ ಬೇಕಾದ ಆಕ್ಸಿಜನ್ ವೈಜ್ಞಾನಿಕವಾಗಿ ಲೆಕ್ಕ ಹಾಕಿ ಆಕ್ಸಿಜನ್ ಕೋಟಾ ನಿಗದಿ ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ರವರು ಈಗಾಗಲೇ ಆಕ್ಸಿಜನ್ ಕೋಟಾ ಹೆಚ್ಚಿಸಲು ಕೇಂದ್ರಕ್ಕೆ ಕೋರಿದ್ದಾರೆ ನಿಶ್ಚಿತವಾಗಿ ಕರ್ನಾಟಕಕ್ಕೆ ಅಗತ್ಯವಿರುವಷ್ಟು ಸರಬರಾಜು ಬರುವುದರಲ್ಲಿ ಸಂದೇಹವಿಲ್ಲ.

ದೇಶದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಪ್ರಮಾಣ 8,331 ಟನ್ ಇದನ್ನು ಎಲ್ಲಾ ರಾಜ್ಯಗಳಿಗೂ ಹಂಚಬೇಕಾಗುತ್ತದೆ ಪ್ರತಿಯೊಬ್ಬರ ಪ್ರಾಣವು ಅಮೂಲ್ಯವಾದ್ದು ಇಲ್ಲಿ ತಾರತಮ್ಯದ ಪ್ರಶ್ನೆಯೇ ಉದ್ಭವಿಸದು ಅಗತ್ಯವಿರುವಷ್ಟು ಆಕ್ಸಿಜನ್ ಕೋಟಾ ಎಲ್ಲಾ ರಾಜ್ಯಗಳಿಗೂ ದೊರೆಯುತ್ತಿದೆ. ದೇಶವು ಸೋಂಕಿನ ವಿಪತ್ತಿನಿಂದ ನರಳುತ್ತಿರುವಾಗ ಪ್ರತಿಯೊಬ್ಬರ ಪ್ರಾಣ ಮತ್ತು ಆರೋಗ್ಯ ಕಾಪಾಡುವುದು ಸರ್ಕಾರಗಳ ಆದ್ಯ ಕರ್ತವ್ಯ. ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಪ್ರತಿಯೊಂದು ರಾಜ್ಯ ಸರ್ಕಾರಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ರಾಜ್ಯಗಳ ಅವಶ್ಯಕತೆಗಳನ್ನು ವಿಳಂಬವಿಲ್ಲದೆ ಪೂರೈಕೆ ಮಾಡುತ್ತಿದ್ದಾರೆ.

ದುರ್ದೈವವೆಂದರೆ ಮಾಜಿ ಮುಖ್ಯಮಂತ್ರಿಗಳಿಬ್ಬರು ಸರ್ಕಾರದ ಜೊತೆ ಕೈಜೋಡಿಸುವುದು ದೂರದ ಮಾತು ಚುನಾವಣಾ ಪ್ರಚಾರದ ವೈಖರಿಯಲ್ಲಿ ವಾಗ್ದಾಳಿಯಲ್ಲಿ ತೊಡಗಿದ್ದಾರೆ. ಕೇವಲ ಟೀಕೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ಪ್ರಬುದ್ಧತೆಯು ಇವರಿಬ್ಬರಿಗೆ ಇಲ್ಲವಾಗಿದೆ.

ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಹೆಚ್ಚು ಮಾಡಲು ಹಲವಾರು ಗಟ್ಟಿಯಾದ ಕ್ರಮಗಳನ್ನು ಶೆಟ್ಟರ್ ರವರ ನೇತೃತ್ವದ ತಂಡ ತೆಗೆದುಕೊಂಡಿದೆ. ಭದ್ರಾವತಿಯಲ್ಲಿ ಸ್ಥಗಿತಗೊಂಡಿರುವ ಉಕ್ಕು ಕಾರ್ಖಾನೆಯಲ್ಲಿ ಈಗಾಗಲೇ ಆಕ್ಸಿಜನ್ ಉತ್ಪಾದನೆ ಆರಂಭವಾಗಿದೆ. ಇಲ್ಲಿರುವ
ಎರಡು ಘಟಕಗಳ ಪೈಕಿ ಒಂದಕ್ಕೆ ಚಾಲನೆ ನೀಡಲಾಗಿದೆ. ಮತ್ತೊಂದು ಘಟಕಕ್ಕೆ ಕಂಪ್ರೇಸರ್ ಅಗತ್ಯವಿರುವುದರಿಂದ ಅದರ ಖರೀದಿಗೆ ಪ್ರಯತ್ನ ನಡೆಸಿತ್ತಿದ್ದಾರೆ. ಹೊಸಪೇಟೆಯ ಕಲ್ಯಾಣ ಸ್ಟೀಲ್ಸ್‍ನಲ್ಲಿ ಆಕ್ಸಿಜನ್ ಉತ್ಪಾದಿಸಲು ಈಗಾಗಲೇ ಸಿದ್ದತೆ ನಡೆದಿರುವುದು.

ಮೂಲ ಸಮಸ್ಯೆಯು ಇರುವುದು ಶೇಕಡಾ 50 ರಷ್ಟು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಯಾಗದಿರುವುದು. ಇನ್ನು ಕೆಲವು ಆಸ್ಪತ್ರೆಗಳ್ಳಲ್ಲಿ ಆಕ್ಸಿಜನ್ ಶೇಖರಿಸಲು ಸೌಲಭ್ಯವಿಲ್ಲ. ಪ್ರತ್ಯೇಕ ಸಿಲಿಂಡರ್ ಮೂಲಕ ಆಕ್ಸಿಜನ್ ಪಡೆಯುತ್ತಾರೆ. ಒಂದು ಟ್ಯಾಂಕರ್‍ನಲ್ಲಿ 10 ರಿಂದ 20 ಟನ್ ಸಂಗ್ರಹಿಸಬಹದು ಆದರೆ ಸಿಲಿಂಡರ್‍ನಲ್ಲಿ ಕೇವಲ 17ಕೆಜಿ ಮಾತ್ರ ತುಂಬಲು ಸಾಧ್ಯ. ರಾಜ್ಯದಲ್ಲಿ ಸಿಲಿಂಡರ್ ಉತ್ಪಾದನಾ ಕೈಗಾರಿಕೆಗಳು ಇಲ್ಲದ ಕಾರಣ ಹೊರ ರಾಜ್ಯಗಳಿಂದ ಖರೀದಿಸಬೇಕು ಈಗ ಬೇಡಿಕೆಯು ಹೆಚ್ಚಾಗಿ ಸಿಲಿಂಡರ್‍ಗಳು ದೊರೆಯುವುದು ಕಷ್ಟವಾಗಿದೆಯಂತೆ. ಸಾಮಾನ್ಯ ಟ್ಯಾಂಕರ್ ಗಳಲ್ಲಿ ಆಕ್ಸಿಜನ್ ಸಾಗಿಸಲು ಸಾಧ್ಯವಿಲ್ಲ. ದ್ರವರೂಪದ ಆಕ್ಸಿಜನ್ ಸಾಗಿಸಲು -170ಡಿಗ್ರಿ ತಾಪಮಾನವಿರುವ ಟ್ಯಾಂಕರ್‍ಗಳಲ್ಲಿ ಸಾಗಿಸಬೇಕಾಗುತ್ತದೆ.ಆಕ್ಸಿಜನ್ ನಿರ್ವಹಣೆಯಲ್ಲಿ ಸರಬರಾಜು ಮತ್ತು ಸಂಗ್ರಹ ವ್ಯವಸ್ಥೆಯು ಬಹು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.

WhatsApp Image 2021 05 17 at 19.01.09

ಕಳೆದ ವರ್ಷದ ಅನುಭವದ ಆಧಾರದ ಮೇಲೆ 50 ಬೆಡ್ ಇರುವ ಆಸ್ಪತ್ರೆಗಳಿಗೆ ತಮ್ಮದೆ ಆಕ್ಸಿಜನ್ ಉತ್ಪಾದಿಸುವ ಘಟಕ ಮತ್ತು ಕನಿಷ್ಠ 5ಟನ್ ಆಕ್ಸಿಜನ್ ಸಂಗ್ರಹವಾಗುವ ಟ್ಯಾಂಕರ್ ನಿರ್ಮಿಸಿಕೊಳ್ಳಲು ಆರೋಗ್ಯ ಇಲಾಖೆಯು ಕಡ್ಡಾಯಗೊಳಿಸಬೇಕಿತ್ತು. ಕೇವಲ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಅಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಬಹುದು ಇದು ಖಾಸಗಿ ಆಸ್ಪತ್ರೆಗಳಿಗೆ ದೊಡ್ಡ ಹೊರೆಯಾಗುತ್ತಿರಲಿಲ್ಲ. ಇದರ ಜೊತೆ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಉತ್ಪಾದಿಸುವ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಬೇಕಿತ್ತು ಇವುಗಳ ಕಡೆ ಲಕ್ಷ್ಯ ನೀಡದೆ ಆರೋಗ್ಯ ಇಲಾಖೆಯು ಎಡವಿದೆ.

ಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷ ಸಿ.ಪ್ರಕಾಶ್ ರವರ ಪ್ರಕಾರ ಕೈಗಾರಿಕಾ ಉದ್ದೇಶಗಳಿಗೆ ಆಕ್ಸಿಜನ್ ಉತ್ಪಾದಿಸುತ್ತಿದ್ದ ಘಟಕಗಳು ಈಗ ವೈದ್ಯಕೀಯ ದರ್ಜೆ ಆಕ್ಸಿಜನ್ ಉತ್ಪಾದಿಸುತ್ತಿವೆ. ಆದ್ದರಿಂದ ಶೇಕಡಾ 35 ರಷ್ಟು ಸಣ್ಣ ಕೈಗಾರಿಕೆಗಳು ಬಾಗಿಲು ಹಾಕಿವೆ. ಜೀವವಿದ್ದರೆ ತಾನೆ ಜೀವನ ಹೀಗಾಗಿ ಈ ಸಂಕಟವನ್ನು ಉದ್ದಿಮೆಗಳು ಒಪ್ಪಿಕೊಂಡಿವೆ ಎನ್ನುತ್ತಾರೆ ಪ್ರಕಾಶ್‍ರವರು.

ರಾಜಕೀಯ ದುರುದ್ದೇಶದಿಂದ ಮಾಡುವ ಬುಡವಿಲ್ಲದ ಆರೋಪಗಳು ಕೊರೋನಾ ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು. ಜೀವ ರಕ್ಷಿಸುವ ಆಮ್ಲಜನಕವನ್ನು ರಾಜಕೀಯ ವಸ್ತುವಾಗಿ ಉಪಯೋಗಿಸುವ ಪ್ರಲೋಭನೆಗೆ ಒಳಗಾಗದೆ ಮತ್ತೊಬ್ಬರ ಜೀವದ ಪ್ರಶ್ನೆಯು ಇದರಲ್ಲಿ ಅಡಗಿರುವುದನ್ನು ಅರಿತು ಹೊಣೆಗಾರಿಕೆಯಿಂದ ವರ್ತಿಸುವುದು ಎಲ್ಲರ ಕರ್ತವ್ಯವಾಗಿದೆ.

ಪ್ರಕಾಶ್ ಶೇಷರಾಘವಾಚಾರ್

Prakash Sesharaghavachar is a Joint Spokesperson of Karnataka BJP

Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

LEAVE A REPLY

Please enter your comment!
Please enter your name here