2025ರ ಮೇಯಲ್ಲಿ ಕರ್ನಾಟಕಕ್ಕೆ ಮರಳುತ್ತೇನೆ: ಸಿಬಿಐ ನೂತನ ನಿರ್ದೇಶಕ ಪ್ರವೀಣ್ ಸೂದ್
ಬೆಂಗಳೂರು:
ಸದ್ಯದಲ್ಲಿಯೇ ಡಿಜಿ ಮತ್ತು ಐಜಿಪಿ ಹುದ್ದೆಯಿಂದ ನಿರ್ಗಮಿಸಿ ನನ್ನ ಉತ್ತರಾಧಿಕಾರಿಗೆ ಅಧಿಕಾರ ಬಿಟ್ಟುಕೊಟ್ಟು ಮುಂದಿನ ಹುದ್ದೆಗೆ ಹೋಗುತ್ತಿದ್ದೇನೆ ಎಂದು ಸಿಬಿಐ ಮುಂದಿನ ನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, 2020ರಲ್ಲಿ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ರಾಜ್ಯದ ಜನತೆ ಜೊತೆ ಸಂಪರ್ಕ ಹೊಂದಿದ್ದೆ. 2025ರ ಮೇ ತಿಂಗಳವರೆಗೆ ನನಗೆ ಸರ್ಕಾರ ಹೊಸ ಜವಾಬ್ದಾರಿಯನ್ನು ವಹಿಸಿದ್ದು ಅದರ ನಂತರ ಮತ್ತೆ ಕರ್ನಾಟಕಕ್ಕೆ ಮರಳುತ್ತೇನೆ.
ಕಳೆದ ಮೂರೂವರೆ ವರ್ಷಗಳಲ್ಲಿ ನೀವು ಕೊಟ್ಟ ಬೆಂಬಲ, ಸಹಕಾರಗಳಿಗೆ ಧನ್ಯವಾದಗಳು ಎಂದು ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.
