ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ, ರಾಜ್ಯಸಭೆಗೆ ಹೋಗ್ತಾರಾ ಅಥವಾ ರಾಜ್ಯ ರಾಜಕಾರಣದಲ್ಲೇ ಮುಂದುವರೆಯ್ತಾರಾ? ಕಾಂಗ್ರೆಸ್ ಅಧಿಕಾರ ವರ್ಗಾವಣೆ ಚರ್ಚೆ ತೀವ್ರ
ಬೆಂಗಳೂರು, ಮೇ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ನಡೆ ಏನು ಎನ್ನುವ ಪ್ರಶ್ನೆ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ, ರಾಜ್ಯಸಭೆ ಮೂಲಕ ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತಾರಾ ಅಥವಾ ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಮುಂದುವರೆಯುತ್ತಾರಾ ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಹೆಚ್ಚಾಗಿದೆ.
ಕಳೆದ 24 ಗಂಟೆಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೆ ಮತ್ತಷ್ಟು ವೇಗ ನೀಡಿವೆ.
ದೆಹಲಿ ಭೇಟಿಯಿಂದ ಮರಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಹೈಕಮಾಂಡ್ ಜೊತೆ ನಡೆದ ಚರ್ಚೆಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೇ “ನಾಳೆ ಮಾತನಾಡುತ್ತೇನೆ” ಎಂದು ಮಾತ್ರ ಹೇಳಿದರು.
ಗುರುವಾರ ಬೆಳಗ್ಗೆ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರು ಹಾಗೂ ಶಾಸಕರಿಗೆ ಮುಖ್ಯಮಂತ್ರಿ ಆಯೋಜಿಸಿರುವ ಉಪಹಾರ ಕೂಟ ಇದೀಗ ಭಾರೀ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ರಾಜಕೀಯ ಮೂಲಗಳ ಪ್ರಕಾರ, ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಭೆಗಳಲ್ಲಿ ಕರ್ನಾಟಕದ ನಾಯಕತ್ವ ಬದಲಾವಣೆ ಸೇರಿದಂತೆ ರಾಷ್ಟ್ರ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರಿಗೆ ಹೊಸ ಜವಾಬ್ದಾರಿ ನೀಡುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆದಿರಬಹುದು ಎನ್ನಲಾಗುತ್ತಿದೆ.
ಆದರೆ ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ದೆಹಲಿಗೆ ತೆರಳಿ ರಾಜ್ಯಸಭೆ ರಾಜಕಾರಣ ಮಾಡುವುದಕ್ಕಿಂತ ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಉಳಿಯುವ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಸ್ಥಾನದಿಂದ ಹಿಂದೆ ಸರಿದರೂ ಕೂಡ ಮುಂದಿನ ಚುನಾವಣೆಗಳು ಹಾಗೂ ಸಂಘಟನಾ ತಂತ್ರ ರೂಪಿಸುವಲ್ಲಿ ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅಹಿಂದ ಸಮೀಕರಣದ ಪ್ರಮುಖ ಮುಖವಾಗಿರುವ ಸಿದ್ದರಾಮಯ್ಯ ಅವರು ರಾಜ್ಯದಲ್ಲೇ ಹಿರಿಯ ರಾಜಕೀಯ ಮಾರ್ಗದರ್ಶಕರಾಗಿ ಪಕ್ಷವನ್ನು ಮುನ್ನಡೆಸುವ ಸಾಧ್ಯತೆಗಳನ್ನೂ ಕಾಂಗ್ರೆಸ್ ನಾಯಕರು ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಪಕ್ಷದ ಅಗತ್ಯವಿದ್ದರೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಜವಾಬ್ದಾರಿ ವಹಿಸುವಂತೆ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮನವೊಲಿಸಲು ಪ್ರಯತ್ನಿಸಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗುವ ಸಾಧ್ಯತೆಗಳ ಕುರಿತ ಚರ್ಚೆ ಮತ್ತಷ್ಟು ವೇಗ ಪಡೆದಿದ್ದರೂ, ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಯಾವುದೇ ಅಧಿಕಾರ ವರ್ಗಾವಣೆ ಪ್ರಕ್ರಿಯೆ ನಡೆದರೂ ಅದು ಆಂತರಿಕ ಗೊಂದಲವಿಲ್ಲದೆ ಸುಗಮವಾಗಿ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕತ್ವ ಕಾರ್ಯತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ದಿನಗಳಲ್ಲಿ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಹೈಕಮಾಂಡ್ ಸಮಾಲೋಚನೆಗಳು ರಾಜ್ಯ ರಾಜಕಾರಣದ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಇದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಗುರುವಾರದ ರಾಜಕೀಯ ಬೆಳವಣಿಗೆಗಳತ್ತ ಹಾಗೂ ಸಿದ್ದರಾಮಯ್ಯ ಅವರ ಮುಂದಿನ ಘೋಷಣೆಯತ್ತ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.
