ಬೆಂಗಳೂರು:
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ರಾಪಿಡೋ ರೈಡರ್ ಓರ್ವ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಅನುಚಿತ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
‘ಲವ್ ಯು’ ಎಂಬ ಸಂದೇಶ ಇರುವ WhatsApp ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಮಹಿಳೆ, ಆ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರೆ. ಆದರೆ ನಂತರ ಬೇರೆ ಬೇರೆ ನಂಬರ್‌ಗಳಿಂದ ಕರೆಗಳು ಬಂದಿವೆ ಎಂದು ಮಹಿಳೆ ಆರೋಪಿಸಿದ್ದಾರೆ.
ಚಾಲಕನ ಹಿನ್ನೆಲೆಯನ್ನು ಪರಿಶೀಲಿಸಲು ತೆಗೆದುಕೊಂಡ ಕ್ರಮಗಳನ್ನು ಪ್ರಶ್ನಿಸಿ ಮಹಿಳೆ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಅನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಮಹಿಳೆಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, “ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಗಳೂರಿನ ಟೌನ್ ಹಾಲ್‌ನಿಂದ ಮನೆಗೆ ತೆರಳಲು ನಾನು ಬುಕ್ ಮಾಡಿದ ಹಲವು ಕ್ಯಾಬ್, ಆಟೋಗಳು ರದ್ದಾದ ನಂತರ ನಾನು ಅನಿವಾರ್ಯವಾಗಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದೆ ಎಂದು ಹೇಳಿದ್ದಾರೆ.
ರೈಡರ್ ಆ್ಯಪ್‌ನಲ್ಲಿ ನೋಂದಾಯಿಸಿದ ಬೈಕ್‌ಗಿಂತ ವಿಭಿನ್ನ ಬೈಕ್‌ನಲ್ಲಿ ಆಗಮಿಸಿದ್ದ. ಆ ಬಗ್ಗೆ ನಾನು ಕೇಳಿದಾಗ ರಾಪಿಡೋದಲ್ಲಿ ನೋಂದಾಯಿಸಲಾದ ಬೈಕ್ ಸರ್ವಿಸಿಂಗ್ ಹಂತದಲ್ಲಿದೆ ಎಂದು ರೈಡರ್ ಹೇಳಿರುವುದಾಗಿ ಸಂತ್ರಸ್ತೆ ಮಹಿಳೆ ಟ್ವೀಟ್ ಮಾಡಿದ್ದಾರೆ.
ದೂರದ ಸ್ಥಳವನ್ನು ತಲುಪಿದ ನಂತರ ರೈಡರ್ ಒಂದು ಕೈಯಿಂದ ಬೈಕ್ ಚಲಾಯಿಸುತ್ತಾ ಮತ್ತೊಂದು ಕೈಯಿಂದ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದನು. ಆದರೆ ಭಯದಿಂದ ಚಾಲಕನ ಅನುಚಿತ ಕ್ರಮದ ಹೊರತಾಗಿಯೂ ಮೌನವಾಗಿದ್ದೆ ಎಂದು ಮಹಿಳೆ ಹೇಳಿದ್ದಾರೆ.
“ನನ್ನ ಮನೆಯ ಸ್ಥಳವನ್ನು ಮರೆಮಾಚಲು 200 ಮೀಟರ್ ದೂರದಲ್ಲೇ ಡ್ರಾಪ್ ಮಾಡಲು ರೈಡರ್ ಗೆ ಕೇಳಿಕೊಂಡೆ” ಎಂದು ಮಹಿಳೆ ತಿಳಿಸಿದ್ದಾರೆ.
ರೈಡ್ ಕೊನೆಗೊಂಡಿತು ಮತ್ತು ಮಹಿಳೆ ಭಾಗಶಃ ಸುರಕ್ಷಿತವಾಗಿ ಮನೆ ತಲುಪಿದ್ದಾರೆ. ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಆ ರೈಡರ್ ಪದೇ ಪದೇ ತನಗೆ ಕರೆ ಮಾಡಿ, ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.