Home ಬೆಂಗಳೂರು ನಗರ ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ – ಡಾ.ಸಿ.ಎನ್.ಅಶ್ವತ್ಥನಾರಾಯಣ್ ಖಂಡನೆ

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ – ಡಾ.ಸಿ.ಎನ್.ಅಶ್ವತ್ಥನಾರಾಯಣ್ ಖಂಡನೆ

19
0
Karnataka Former Minister Dr C.N. Ashwath Narayan condemns State Congress Government's anti-people policies
Karnataka Former Minister Dr C.N. Ashwath Narayan condemns State Congress Government's anti-people policies

ಬೆಂಗಳೂರು:

ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದು ಖಂಡನೀಯ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ನಗರದ ಫ್ರೀಡಂ ಪಾರ್ಕ್ ಬಳಿ ಇಂದು ಬಿಜೆಪಿ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೇವಲ 60 ದಿನಗಳಲ್ಲಿ ಜನತೆ ತತ್ತರಿಸಿ ಹೋಗುವಂತಾಗಿದೆ. ರಾಜ್ಯ ಸರಕಾರದ ನಡವಳಿಕೆ, ಧೋರಣೆ, ಕಾರ್ಯವೈಖರಿಯು ಸಮಾಜಕ್ಕೆ ನಿರಾಸೆಯನ್ನು ತಂದಿದೆ ಎಂದು ಟೀಕಿಸಿದರು.

ರಾಜ್ಯ ಸರಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾನೂನು, ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಸಮಾಜವಿರೋಧಿ ಶಕ್ತಿಗಳನ್ನು ಹೇಳುವವರು, ಕೇಳುವವರಿಲ್ಲವಾಗಿದೆ. ಇಡೀ ಕರ್ನಾಟಕದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜೈನ ಮುನಿಯನ್ನು ಬರ್ಬರವಾಗಿ ಕತ್ತರಿಸಿ ಹಾಕಿದ್ದಾರೆ. ಯುವ ಬ್ರಿಗೇಡ್ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದ್ರೋಹಿಗಳು, ಭಯೋತ್ಪಾದಕರನ್ನು ಸದೆಬಡಿಯಬೇಕು ಎಂದು ಅವರು ಆಗ್ರಹಿಸಿದರು. ರಸ್ತೆಯಲ್ಲಿ ಪೊಲೀಸರನ್ನು ಹೊಡೆಯುತ್ತಿದ್ದಾರೆ. ಮರಳು ದಂಧೆ ಮಾಡುವವರನ್ನು ಹತ್ತಿಕ್ಕಲು ಹೋದಾಗ ಪೊಲೀಸ್ ಹತ್ಯೆ ಆಗಿದೆ ಎಂದು ನೋವಿನಿಂದ ನುಡಿದರು. ವಿಪಕ್ಷಗಳ ಸಭೆ ನಡೆದಾಗ ಸರಕಾರದ ಆತಿಥ್ಯ ನೀಡಿದ್ದು ಖಂಡನಾರ್ಹ ಎಂದು ತಿಳಿಸಿದರು.

ವಿಪಕ್ಷಗಳ ಮುಖಂಡರನ್ನು ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರ ಕೊರತೆಯೇ ಇದಕ್ಕೆ ಕಾರಣ ಎಂದು ಟೀಕಿಸಿದರು. ಇದು ಪ್ರಗತಿಪರ ರಾಜ್ಯ ಕರ್ನಾಟಕಕ್ಕೆ ಆದ ಅವಮಾನ ಎಂದು ನುಡಿದ ಅವರು, ಪ್ರತಿಪಕ್ಷದ ಧ್ವನಿಯನ್ನು ಹತ್ತಿಕ್ಕಲು ಸದನದಿಂದ ಶಾಸಕರನ್ನು ಅಮಾನತು ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್ ನಡೆಗೆ ಆಕ್ಷೇಪ ಸೂಚಿಸಿದ ಅವರು, ಅವರ ವಿರುದ್ಧ ನಿರ್ಣಯ ಮಂಡಿಸುತ್ತಿರುವುದಾಗಿ ತಿಳಿಸಿದರು.

ಕಾಂಗ್ರೆಸ್ ಪಕ್ಷವು ಯಾವುದೇ ಷರತ್ತಿಲ್ಲದೆ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವ ಭರವಸೆ ನೀಡಿ ಮೋಸದಿಂದ ಅಧಿಕಾರಕ್ಕೆ ಬಂದಿದೆ. ಕಂಡಿಷನ್ ಇಲ್ಲದೆ ಗ್ಯಾರಂಟಿಗಳನ್ನು ಜಾರಿ ಮಾಡಲು ನಾವು ಒತ್ತಾಯಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಜನಪರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡುವ ಕ್ರಮವು ಜನವಿರೋಧಿ ಎಂದು ನುಡಿದ ಅವರು, ಕೊಲೆ, ಗಲಭೆಗಳು ಹೆಚ್ಚಿರುವ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಇಂಥ ಸರಕಾರವನ್ನು ಕಿತ್ತೆಸೆಯಲು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ವಿವರಿಸಿದರು. ಬೆಲೆ ಏರಿಕೆಯನ್ನು ಅವರು ಖಂಡಿಸಿದರು. ರೈತವಿರೋಧಿ, ಜನವಿರೋಧಿ, ವಿದ್ಯಾರ್ಥಿಗಳ ವಿರೋಧಿ, ದಲಿತರ ವಿರೋಧಿ ಮಾತ್ರವಲ್ಲದೆ ಹಿಂದುಳಿದವರ ವಿರೋಧಿ ಧೋರಣೆಗಳನ್ನು ಈ ಸರಕಾರ ಹೊಂದಿದೆ ಎಂದು ಅವರು ನುಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಶಾಸಕ ಸಿ.ಕೆ. ರಾಮಮೂರ್ತಿ, ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಪರಾಜಿತ ಅಭ್ಯರ್ಥಿಗಳಾದ ಸಪ್ತಗಿರಿಗೌಡ, ತಮ್ಮೇಶ್ ಗೌಡ, ಭಾಸ್ಕರ್ ರಾವ್, ಉಮೇಶ್ ಶೆಟ್ಟಿ, ಶಿವಕುಮಾರ್ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ.ನಾರಾಯಣಗೌಡ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್, ಪಕ್ಷದ ಮುಖಂಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here