ಬೆಂಗಳೂರು:
ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಇಂದು ಕಾರ್ಯಾಚರಣೆ ನಡೆಸಿದ್ದು, ಒಂದೇ ನೋಂದಣಿ (KA53 B3633) ಸಂಖ್ಯೆಯನ್ನು ಬಳಸಿಕೊಂಡು ಸಂಚರಿಸುತ್ತಿದ್ದ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಯಲಹಂಕ ಪ್ರಾದೇಶಿಕ ಸಾರಿಗೆ ಆಧಿಕಾರಿಗಳ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ರಾಜ್ ಕುಮಾರ್ ನೇತೃತ್ವದ ತಂಡ ಖಚಿತ ಮಾಹಿತಿಯನ್ನು ಆಧರಿಸಿ ಮೊದಲು ಯಲಹಂಕದಲ್ಲಿ ಒಂದು ಸ್ವರಾಜ್ ಮಜ್ದಾ ಬಸ್ಸನ್ನು ವಶಪಡಿಸಿಕೊಂಡರು. ನಂತರ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಅದೇ ನೋಂದಣಿ ಸಂಖ್ಯೆಯನ್ನು ಬಳಸಿ ಸಂಚರಿಸುತ್ತಿದ್ದ ಇನ್ನೊಂದು ಸ್ವರಾಜ್ ಮಜ್ದಾ ವಾಹನವನ್ನು ವಶಕ್ಕೆ ತಗೆದುಕೊಂಡಿದ್ದಾರೆ. ಒಂದೇ ನೋಂದಣಿ ಸಂಖ್ಯೆ ಬಳಸಿ ವಾಹನಗಳನ್ನು ಚಲಾಯಿಸುವುದು ಕಾನೂನಿಗೆ ವಿರುದ್ದವಾಗಿದ್ದು, ಈ ಬಗ್ಗೆ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ರಾಜ್ ಕುಮಾರ್ ತಿಳಿಸಿದರು.