Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 ಅಂಗೀಕಾರ | ಬೆಂಗಳೂರನ್ನು ಛಿದ್ರಗೊಳಿಸುತ್ತಿಲ್ಲ, ಇನ್ನಷ್ಟು ಗಟ್ಟಿಗೊಳಿಸುತ್ತಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ
  • ಕರ್ನಾಟಕ

ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 ಅಂಗೀಕಾರ | ಬೆಂಗಳೂರನ್ನು ಛಿದ್ರಗೊಳಿಸುತ್ತಿಲ್ಲ, ಇನ್ನಷ್ಟು ಗಟ್ಟಿಗೊಳಿಸುತ್ತಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

The Bengaluru Live March 10, 2025 8:00 PM 1 minute read
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಆರ್ಥಿಕವಾಗಿ ಹಿಂದುಳಿದ ಪಾಲಿಕೆಗಳಿಗೆ ಸರ್ಕಾರದಿಂದಲೇ ನೆರವು

ಬೆಂಗಳೂರು, ಮಾ.10 ಆಡಳಿತ ವೀಕೆಂದ್ರಿಕರಣ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಖ್ಯೆಯನ್ನು ಹೆಚ್ಚು ಮಾಡುವ ಉದ್ದೇಶದ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ವನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಸೋಮವಾರ ಅಂಗೀಕರಿಸಲಾಯಿತು.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ ಕೆ ಶಿವಕುಮಾರ್ ಅವರು 20 ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 ಅನ್ನು ಸದನದಲ್ಲಿ ಮಂಡಿಸಿ, ಅದರ ಉದ್ದೇಶವನ್ನು ವಿವರಿಸಿದರು. ನಂತರ ಪ್ರತಿಪಕ್ಷಗಳ ಸದಸ್ಯರು ತಮ್ಮ ಅಭಿಪ್ರಾಯ, ಆಕ್ಷೇಪ ಕಾರಣಗಳನ್ನು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಡಿ ಕೆ ಶಿವಕುಮಾರ್ ಅವರು, “ಚರ್ಚೆಯಲ್ಲಿ ಭಾಗವಹಿಸಿದ ಎಲ್ಲಾ ಶಾಸಕರನ್ನು ಅಭಿನಂದಿಸುತ್ತೇನೆ. ವಿರೋಧ ಪಕ್ಷಗಳ ನಾಯಕರು ತಮ್ಮದೇ ಆದ ಅಭಿಪ್ರಾಯ ತಿಳಿಸಿದ್ದಾರೆ. ಅವರು ಅಭಿಪ್ರಾಯವನ್ನು ನಾನು ವಿರೋಧಿಸುವುದಿಲ್ಲ. ಅವರಲ್ಲಿ ಕೆಲವರಿಗೆ ರಾಜಕೀಯ ಇಚ್ಚಾಶಕ್ತಿಯೂ ಇದೆ. ಅದರಲ್ಲಿ ತಪ್ಪಿಲ್ಲ. ಈಗಿರುವ ವ್ಯವಸ್ಥೆಯಲ್ಲಿಯೇ ಬೆಂಗಳೂರು ನಗರವನ್ನು ಮುನ್ನಡೆಸುವುದು ಅಸಾಧ್ಯ ಎಂದು ಅವರು ಆತ್ಮಸಾಕ್ಷಿ ಮೂಲಕ ಒಪ್ಪಿದ್ದಾರೆ. ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಆಡಳಿತಕ್ಕೆ ದೊಡ್ಡ ಸಮಸ್ಯೆ ಎಂಬ ಅರಿವು ಅವರಿಗಿದೆ. ಬೆಂಗಳೂರು ನಗರ ಕೆಂಪೇಗೌಡರು ಕಟ್ಟಿಸಿದ ಗೋಪುರ ಮೀರಿ ಬೆಳೆದಿದೆ. ಈಗಲೂ ಅದನ್ನು ನಿಲ್ಲಿಸಲು ಆಗುವುದಿಲ್ಲ, ಮುಂದೆಯೂ ಆಗುವುದಿಲ್ಲ. ಯಲಹಂಕ, ಕೆಂಗೇರಿ ಉಪನಗರಗಳು ಈಗ ಪಾಲಿಕೆ ವ್ಯಾಪ್ತಿಗೆ ಸೇರಿವೆ. ಹೀಗೆ ಬೆಳೆದಿರುವ ಬೆಂಗಳೂರಿನ ಆಡಳಿತವನ್ನು ನಾವು ವಿಕೇಂದ್ರೀಕರಣ ಮಾಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.

“ದೆಹಲಿ ಪರಿಸ್ಥಿತಿಯೇ ಬೇರೆ. ಇನ್ನು ಮುಂಬೈಯಲ್ಲಿ ಮೊದಲೇ ಅವರು ಅಧಿಕಾರ ನೀಡಿದ್ದರು. ಈಗ ಇಲ್ಲಿ ನಾವು ಹಣಕಾಸಿನ ವಿಚಾರ ಚರ್ಚೆ ಮಾಡುತ್ತಿದ್ದೇವೆ. ನಾವು ಬೆಂಗಳೂರನ್ನು ಛಿದ್ರ ಮಾಡಲು ಹೋಗುತ್ತಿಲ್ಲ, ಬೆಂಗಳೂರನ್ನು ಗಟ್ಟಿ ಮಾಡುತ್ತಿದ್ದೇವೆ. ಬೆಂಗಳೂರಿನ ಗೌರವ ಉಳಿಸಬೇಕು. ಮಾಜಿ ಪ್ರಧಾನಿ ವಾಜಪೇಯಿ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗಾಗಿ ಬೆಂಗಳೂರಿಗೆ ಬಂದಾಗ, “ಇಷ್ಟು ದಿನ ವಿಶ್ವ ನಾಯಕರು ಮೊದಲು ದೆಹಲಿಗೆ ಬಂದು, ನಂತರ ದೇಶದ ಇತರ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು, ನಂತರ ದೇಶದ ಇತರ ನಗರಗಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದ್ದರು. ಇದಕ್ಕೆ ಕಾರಣ ಇಲ್ಲಿನ ಆಡಳಿತ. ಕೇವಲ ಕೃಷ್ಣ ಅವರ ಸರ್ಕಾರ ಅಥವಾ ಮತ್ತೊಂದು ಸರ್ಕಾರ ಮಾತ್ರ ಇದಕ್ಕೆ ಕಾರಣವಲ್ಲ. ಇಲ್ಲಿನ ಜನ ಅಷ್ಟರ ಮಟ್ಟಿಗೆ ವಿದ್ಯಾವಂತರು, ಬುದ್ದಿವಂತರು, ಪ್ರಜ್ಞಾವಂತರಿದ್ದಾರೆ. ನೆಹರೂ ಅವರು ಇಲ್ಲಿಯೇ ಇಸ್ರೋ, ಹೆಚ್ಎಂಟಿ, ಹೆಚ್ಎಎಲ್, ಐಟಿಐ ಆರಂಭಿಸಿದ್ದು ಏಕೆ? ಅನೇಕ ಮಹಾನ್ ಸಂಶೋಧಕರು, ಉದ್ದಿಮೆದಾರರು ಬೆಂಗಳೂರಿನಲ್ಲೇ ಓದಿದ್ದಾರೆ” ಎಂದು ವಿವರಿಸಿದರು.

ಆರ್ಥಿಕವಾಗಿ ಹಿಂದುಳಿದ ಪಾಲಿಕೆಗಳಿಗೆ ಸರ್ಕಾರದಿಂದ ನೆರವು “ಅಧಿಕಾರ ವಿಕೇಂದ್ರಿಕರಣದ ಉದ್ದೇಶದಿಂದ ಬೆಂಗಳೂರು ಮೂರು ಜಿಲ್ಲೆಯಾಯಿತು, ಉಡುಪಿ ಹಾಗೂ ದಕ್ಷಿಣ ಕನ್ನಡ ಬೇರೆ ಜಿಲ್ಲೆಯಾದವು, ಗದಗ ಹಾಗೂ ಹಾವೇರಿ ಎರಡು ಜಿಲ್ಲೆಗಳಾದವು. ಅಶ್ವತ್ಥ್ ನಾರಾಯಣ ಅವರು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಬೇಡಿ ಎನ್ನುತ್ತಿದ್ದರು. ಜಿಬಿಎಯಲ್ಲಿ (ಗ್ರೇಟರ್ ಬೆಂಗಳೂರು ಅಥಾರಿಟಿ) ನಾಮನಿರ್ದೇಶಿತ ಸದಸ್ಯರಿರುವುದಿಲ್ಲ. ಕೇವಲ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ಪರಿಷತ್ತಿನ ಚುನಾಯಿತ ಪ್ರತಿನಿಧಿಗಳು ಮಾತ್ರ ಮತದಾನ ಹಕ್ಕನ್ನು ಹೊಂದಿರುತ್ತಾರೆ” ಎಂದು ಸ್ಪಷ್ಟನೆ ನೀಡಿದರು.

“ನಾವು ಕೂಡ ಆಡಳಿತಾತ್ಮಕ ದೃಷ್ಟಿಯಿಂದಲೇ ಪಾಲಿಕೆ ವಿಭಜನೆ ಮಾಡುತ್ತಿದ್ದೇವೆ. ಯಾಕೆ ಮಾಡಬೇಕು. ಇದರಿಂದ ಅನುದಾನದ ಸಮಸ್ಯೆಯಾಗುತ್ತದೆ ಎಂದು ಕೆಲವು ಸದಸ್ಯರು ಪ್ರಸ್ತಾಪಿಸಿದ್ದಾರೆ. ನಾವು ಕೂಡ ಈ ವಿಚಾರವನ್ನು ಅವರುಗಳಂತೆಯೇ ಆಲೋಚನೆ ಮಾಡಿದ್ದೇವೆ. 75ನೇ ತಿದ್ದುಪಡಿ ಪ್ರಕಾರ ಸ್ಥಳೀಯ ಸಂಸ್ಥೆಗಳ ಹಣವನ್ನು ನಾವು ಬೇರೆಡೆಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಜತೆಗೆ ಎಲ್ಲವನ್ನು ಒಟ್ಟಿಗೆ ಸಂಗ್ರಹಿಸಿ ಹಂಚಿಕೆ ಮಾಡಲು ಆಗುವುದಿಲ್ಲ. ಹೀಗಾಗಿ ನಾವು ಸರ್ಕಾರದಿಂದ ಆರ್ಥಿಕವಾಗಿ ದುರ್ಬಲವಾಗಿರುವ ಪಾಲಿಕೆಗಳಿಗೆ ಸಹಾಯ ಮಾಡಬೇಕು ಎಂದು ಈ ಮಸೂದೆಯಲ್ಲಿ ಪ್ರಸ್ತಾಪಿಸಿದ್ದೇವೆ” ಎಂದು ತಿಳಿಸಿದರು.

ಬೆಂಗಳೂರಿನ ಬಗ್ಗೆ ಮುಖ್ಯಮಂತ್ರಿಗಳಿಗೂ ಜವಾಬ್ದಾರಿ ಇರಬೇಕು: “ಇನ್ನು ಮುಖ್ಯಮಂತ್ರಿಗಳಿಗೆ ಸಮಯಾವಕಾಶ ಇರುವುದಿಲ್ಲ ಎಂಬ ವಿಚಾರ ಪ್ರಸ್ತಾಪಿಸಿದ್ದಾರೆ. ನನಗೂ ಗೊತ್ತಿದೆ. ಸುಮಾರು 1.50 ಕೋಟಿ ಜನರು, ಅಂದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇ. 25 ರಷ್ಟು ಜನಸಂಖ್ಯೆ ಇರುವ ನಗರದ ಬಗ್ಗೆ ಮುಖ್ಯಮಂತ್ರಿಗಳು ಸಭೆ ಮಾಡಲೇಬೇಕು. ಇದು ಅವರ ಕರ್ತವ್ಯ. ಮುಖ್ಯಮಂತ್ರಿಗಳಾದವರು ಕೇವಲ ಸಿಟಿ ರೌಂಡ್ಸ್ ಮಾಡಿದರೆ ಸಾಲುವುದಿಲ್ಲ. ಅವರೂ ಸಭೆ ಮಾಡಬೇಕು. ಹಣಕಾಸು ಹಂಚಿಕೆ ಮಾಡುವವರು ಅವರು. ನಾವು ಇಂದು ಪೆರಿಫೆರಲ್ ರಿಂಗ್ ರಸ್ತೆ, ಟನಲ್ ರಸ್ತೆ ಬಗ್ಗೆ ಮಾತನಾಡುತ್ತೇವೆ. ಅಂದೇ ಪಿಆರ್ ಆರ್ ಯೋಜನೆ ಮಾಡಿದ್ದರೆ 3-4 ಸಾವಿರ ಕೋಟಿಯಲ್ಲಿ ಪೂರ್ಣಗೊಳ್ಳುತ್ತಿತ್ತು. ಇಂದು ಆ ವೆಚ್ಚ 26 ಸಾವಿರ ಕೋಟಿ ರೂ. ಆಗುತ್ತಿದೆ. ಅಂದಿನ ಕಾಲದಲ್ಲಿಯೇ ಮೆಟ್ರೋ ಡಬಲ್ ಡೆಕ್ಕರ್ ಮಾಡಿದ್ದರೆ ಇಂದು ಈ ಪರಿಸ್ಥಿತಿ ಇರುತ್ತಿರಲಿಲ್ಲ. ನೀವು ಬೆಂಗಳೂರಿನ ಯಾವುದೇ ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಕಟ್ಟಡ ಕೆಡವಬೇಕಾದರೆ ದುಪ್ಪಟ್ಟು ಪರಿಹಾರ ನೀಡಬೇಕು. ಇದೆಲ್ಲವನ್ನು ನೋಡಿಯೇ, ಸಾಲವಾದರೂ ಸರಿ, ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೊರಟಿದ್ದೇವೆ. ನಮ್ಮ ಮನೆಯಲ್ಲಿ ನಮ್ಮ ಮಕ್ಕಳೇ ಸಂಚಾರ ದಟ್ಟಣೆ ವಿಚಾರವಾಗಿ ನನಗೆ ಬಯ್ಯುತ್ತಿರುತ್ತಾರೆ. ನಾನು ಮುಂಬೈ, ದೆಹಲಿ, ಹೈದರಾಬಾದ್ ಮತ್ತಿತರ ನಗರಗಳಲ್ಲಿ ಸಂಚಾರಿ ದಟ್ಟಣೆ ನೋಡಿದ್ದೇನೆ. ನಮಗಿಂತ ಅಲ್ಲಿ ಹದಗೆಟ್ಟ ಪರಿಸ್ಥಿತಿ ಇದೆ. ಹಾಗೆಂದು ನಮ್ಮ ಜವಾಬ್ದಾರಿ ಮರೆಯುವಂತಿಲ್ಲ. ನಾವು ಸೇನೆಯವರ ಜತೆ ಮಾತನಾಡಿ ಅವರ ಜಾಗವನ್ನು ಪಡೆಯುತ್ತಿದ್ದೇವೆ. ಇದು ಅಷ್ಟು ಸುಲಭವಾದ ಕೆಲಸವಲ್ಲ. ಇದನ್ನು ಒಂದೇ ದಿನದಲ್ಲಿ ಮಾಯಾ ಮಂತ್ರ ಮಾಡಿ ಸರಿಪಡಿಸಲು ಆಗುವುದಿಲ್ಲ ಎಂದೇ ದೇವರ ವಿಚಾರ ಪ್ರಸ್ತಾಪ ಮಾಡಿದ್ದೆ. ಇದಕ್ಕಾಗಿ ಸರಿಯಾದ ಯೋಜನೆ ಮಾಡಿ, ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಅಗತ್ಯವಿದೆ” ಎಂದು ತಿಳಿಸಿದರು.

“ಬೆಂಗಳೂರಿಗೆ ಹೊಸ ದಿಕ್ಕು ನೀಡಬೇಕು ಎಂದು ನಾವು ಪ್ರಯತ್ನ ಮಾಡುತ್ತಿದ್ದು, ಮುಖ್ಯವಾಗಿ ಇಂಧನ ವಿಚಾರವಾಗಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅನಿಲ ವಿದ್ಯುತ್ ಉತ್ಪಾದನಾ ಘಟಕ ಮಾಡಿದ್ದು ನಾವು. ಇನ್ನು ನಗರ ಯೋಜನೆ ವಿಚಾರವಾಗಿ ಕೆಲವು ತಿದ್ದುಪಡಿಯನ್ನು ತಂದಿದ್ದೇವೆ. ದೇವರು ವರವನ್ನು ಕೊಡಲ್ಲ, ಶಾಪವನ್ನು ಕೊಡಲ್ಲ, ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಈ ಅವಕಾಶದಲ್ಲಿ ಬೆಂಗಳೂರನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡಿ ಗಟ್ಟಿಗೊಳಿಸಲು ಈ ಮಸೂದೆ ಜಾರಿಗೆ ತರುತ್ತಿದ್ದೇವೆ” ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಪವಿತ್ರವಾದ ಮಸೂದೆ ಇದಕ್ಕೂ ಮೊದಲು ವಿಧೇಯಕ ಮಂಡನೆ ಕುರಿತ ಪ್ರಸ್ತಾವನೆ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ 74ನೇ ತಿದ್ದುಪಡಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬೆಂಗಳೂರಿನ ಭವಿಷ್ಯದ ಹಿತದೃಷ್ಟಿಯಿಂದ ಈ ವಿಧೇಯಕ ಪವಿತ್ರವಾದದ್ದು. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಕಾರಣ ಓರ್ವ ಪಾಲಿಕೆ ಆಯುಕ್ತರು, ಮುಖ್ಯ ಇಂಜಿನಿಯರ್ ಗಳಿಂದ ನಿಭಾಯಿಸಲು ಕಷ್ಟವಾಗುತ್ತಿದೆ. ಹೀಗಾಗಿ ಈ ಮಸೂದೆಯಲ್ಲಿ 7 ಪಾಲಿಕೆ ರಚನೆಗೆ ಮುಂದಾಗಿದ್ದೇವೆ. ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಶಾಸಕರಿಗೆ ನಿಯಂತ್ರಣ ಇರಬೇಕು, ವಾರ್ಡ್ ಸಮಿತಿಗಳಾಗಬೇಕು, ಅಲ್ಲಿ ಜನಪ್ರತಿನಿಧಿಗಳು ಇರಬೇಕು. ಈ ಮಸೂದೆಯಲ್ಲಿ ಎಲ್ಲಾ ಶಾಸಕರು, ಸಂಸದರು ಕೂಡ ಸದಸ್ಯರಾಗಿರುತ್ತಾರೆ. ಮುಖ್ಯಮಂತ್ರಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಉಪಾಧ್ಯಕ್ಷರಾಗಿರುತ್ತಾರೆ. ಪಾಲಿಕೆ ರಚನೆಯನ್ನು ನಾವು ಯಾವುದೇ ರೀತಿ ಬದಲವಾವಣೆ ಮಾಡುತ್ತಿಲ್ಲ” ಎಂದು ತಿಳಿಸಿದರು.

ಪಾಲಿಕೆಯಲ್ಲಿ ಎಲ್ಲಾ ವಿಭಾಗಗಳಿಗೂ ಹೊಣೆಗಾರಿಗೆ, ಜವಾಬ್ದಾರಿ “ತೆರಿಗೆ ವಿಚಾರವಾಗಿ ಈ ಹಿಂದೆ ದೆಹಲಿಯಿಂದ ಕೆಲವು ಸೂಚನೆ ನೀಡಲಾಗಿತ್ತು. ಇಲ್ಲಿನ ತೆರಿಗೆಯನ್ನು ನಾವು ಕೆಲವು ತಿದ್ದುಪಡಿ ಮಾಡಿದ್ದೆವು. ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ನಾವು ಪೊಲೀಸರು, ನೀರು ಸರಬರಾಜು, ಬಿಎಂಟಿಸಿ, ಬಿಎಂಆರ್ ಟಿಸಿ, ವಿಪತ್ತು ನಿರ್ವಹಣೆ, ಅಗ್ನಿಶಾಮಕದಳ, ಸಂಚಾರಿ ಪೊಲೀಸ್, ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಸ್ಕಾಂ, ಬಿಎಂಎಲ್ ಟಿಎ, ಬಿಡಿಎ ಸೇರಿದಂತೆ ಇತರೆ ವಿಭಾಗಗಳ ಆಯುಕ್ತರು, ಎಂ.ಡಿ ಹಾಗೂ ಸಿಇಓಗಳನ್ನು ಒಳಗೊಂಡಿದ್ದೇವೆ. ಇಲ್ಲಿ ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಹಾಗೂ ಜವಾಬ್ದಾರಿ ನೀಡಲಾಗಿದೆ” ಎಂದು ತಿಳಿಸಿದರು.

“ಇನ್ನು ತಜ್ಞರ ಸಮಿತಿಯನ್ನು ರಚಿಸಿದ್ದು, ಆರು ಸಮಿತಿಗಳನ್ನು ನೇಮಿಸಲಾಗಿದೆ. ನಮ್ಮ ಮಸೂದೆಯಲ್ಲಿ 1ರಿಂದ 7 ಪಾಲಿಕೆ ಮಾಡಲು ಅವಕಾಶವಿದೆಯೇ ಹೊರತು, 7ಕ್ಕಿಂತ ಹೆಚ್ಚು ಮಾಡಲು ಅವಕಾಶವಿಲ್ಲ. ಒಂದಾದರೂ ಮಾಡಬಹುದು, ಎರಡು, ಮೂರು, ನಾಲ್ಕು ಹೀಗೆ ಮಾಡಬಹುದು. ಈ ವಿಚಾರದಲ್ಲಿ ಶಾಸಕರ ಅಭಿಪ್ರಾಯವನ್ನು ಪಡೆದು ನಂತರ ತೀರ್ಮಾನ ಮಾಡಲಾಗುವುದು. ಇಲ್ಲಿ ಪ್ರತಿ ಪಾಲಿಕೆಯ ಜನಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚಾಗಿರಬೇಕು. ಕನಿಷ್ಠ 300 ಕೋಟಿಯಷ್ಟು ಆದಾಯ ಸಂಗ್ರಹವಾಗಬೇಕು. ಕೃಷಿಯೇತರ ಉದ್ಯೋಗ ಶೇ.50 ಕ್ಕಿಂತ ಹೆಚ್ಚಾಗಿರಬೇಕು. ಈ ಪಾಲಿಕೆಗೆ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಎಂದೇ ಹೆಸರಿಡಬೇಕು. ಯಾವುದೇ ಕಾರಣಕ್ಕೂ ಬೇರೆ ಹೆಸರು ಇಡುವಂತಿಲ್ಲ. ಆದಷ್ಟು ವಿಧಾನಸಭಾ ಕ್ಷೇತ್ರಗಳನ್ನು ಇಬ್ಬಾಗ ಮಾಡದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದರೆ ಮಾತ್ರ ಎರಡು ಪಾಲಿಕೆಗೆ ಮಾತ್ರ ವಿಭಾಗಿಸಬೇಕು. ಈ ಪಾಲಿಕೆ ಆಡಳಿತಾವಧಿ 5 ವರ್ಷ ನಿಗದಿ ಮಾಡಿದ್ದು, ಇಲ್ಲಿ ಪ್ರತಿ ಪಾಲಿಕೆಯಲ್ಲಿ 100ರಿಂದ 150 ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಮೇಯರ್, ಉಪಮೇಯರ್ ಅಧಿಕಾರವಧಿ ಎರಡೂವರೆ ವರ್ಷಗಳಿಗೆ ವಿಸ್ತರಿಸಲಾಗಿದೆ. ಮೇಯರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಾದರೆ ಆತ ಮೇಯರ್ ಆಗಿ ಆರು ತಿಂಗಳು ಕಳೆದಿರಬೇಕು” ಎಂದು ಹೇಳಿದರು.

“ವಿಧಾಸಭಾ ಕ್ಷೇತ್ರ ಮಟ್ಟದ ಸಮಿತಿಗೆ ಆಯಾ ಶಾಸಕರೇ ಮುಖ್ಯಸ್ಥರಾಗಿರುತ್ತಾರೆ. ಇನ್ನು ಈ ಸಮಿತಿಯ ಸದಸ್ಯರಾಗಲು ಆ ಕ್ಷೇತ್ರದ ನಿವಾಸಿಯಾಗಿ, ಆ ಕ್ಷೇತ್ರದ ಮತದಾರನಾಗಿರಬೇಕು. ಆ ಭಾಗದ ಪರಿಷತ್ ಸದಸ್ಯರು, ಕಾರ್ಪೊರೇಟರ್, ಇತರೆ ವಿಭಾಗಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಒಟ್ಟು ವಿವಿಧ 6 ಸಮಿತಿಗಳನ್ನು ಹೊಂದಿದ್ದು ಇದರ ಕಾಲಾವಧಿ ಎರಡೂವರೆ ವರ್ಷಗಳಿರಬೇಕು. ಈ ಸಮಿತಿಯ ಸದಸ್ಯರ ಸಂಖ್ಯೆಯು ಮುಖ್ಯಸ್ಥ ಸೇರಿದಂತೆ 9-15 ಜನ ಇರಬೇಕು. ವಾರ್ಡ್ ಸಮಿತಿಯ ಕಾಲಾವಧಿ 20 ತಿಂಗಳು ನಿಗದಿ ಮಾಡಲಾಗಿದ್ದು, ಕಾರ್ಪೊರೇಟರ್ ಇದರ ಮುಖ್ಯಸ್ಥರಾಗಿರುತ್ತಾರೆ. ಇಲ್ಲಿ ನಾಲ್ವರು ಸದಸ್ಯರನ್ನು ಜಿಬಿಎ ಮೂಲಕ ನಾಮನಿರ್ದೇಶನ ಮಾಡಲು ಅವಕಾಶವಿರುತ್ತದೆ. ಇನ್ನು ಪಾಲಿಕೆಯಲ್ಲಿ ಈಗಿರುವ ಮೀಸಲಾತಿ ಮುಂದುವರಿಯಲಿದೆ. ಪಾಲಿಕೆ ಅನುದಾನವನ್ನು ಸೆಕ್ಷನ್ 176 ಪ್ರಕಾರ ಅವಕಾಶ ನೀಡಲಾಗುವುದು” ಎಂದು ಹೇಳಿದರು.

“ಇವಿಷ್ಟು ಹೊರತಾಗಿ ಬಿಜೆಪಿ ಸರ್ಕಾರ ತಂದಿದ್ದ ಯಾವುದೇ ವಿಚಾರ ಬದಲಾವಣೆ ಮಾಡಿಲ್ಲ. ಇನ್ನು ನಮ್ಮ ಸದಸ್ಯರು ಕೂಡ ಸೆಕ್ಷನ್ 9, 10, 15, 84ನಲ್ಲಿ ಕೆಲವು ತಿದ್ದುಪಡಿಗೆ ಸಲಹೆ ನೀಡಿದ್ದು, ಅವುಗಳನ್ನು ಸೇರಿಸಲಾಗಿದೆ. ಈ ಮಸೂದೆಯ ಬಗ್ಗೆ ಎಲ್ಲರೂ ಚರ್ಚಿಸಿದಷ್ಟು ಒಳ್ಳೆಯದು. ಬೆಂಗಳೂರಿನ ಹಿತಾಸಕ್ತಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ. ನಮ್ಮ ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ ನಲ್ಲಿ ಬೆಂಗಳೂರಿಗೆ ಸುಮಾರು ರೂ.1 ಲಕ್ಷ ಕೋಟಿಯಷ್ಟು ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಬೆಂಗಳೂರನ್ನು ಉಳಿಸಬೇಕು ಎಂದು ನಮ್ಮ ಸರ್ಕಾರ ಅತ್ಯಂತ ಧೈರ್ಯದ ನಿರ್ಧಾರ ತೆಗೆದುಕೊಂಡಿದೆ. ಬೆಂಗಳೂರಿನ ರಕ್ಷಣೆಯಲ್ಲಿ ಎಲ್ಲರ ಸಹಕಾರ ಅಗತ್ಯವಿದೆ” ಎಂದು ಡಿಸಿಎಂ ಕರೆ ನೀಡಿದರು.

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆ ವಿಭಜನೆಯಾಗಿದ್ದು ಆಡಳಿತ ಉದ್ದೇಶಕ್ಕೆ ಅಲ್ಲವೇ? ಚರ್ಚೆ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಎಸ್.ಆರ್ ವಿಶ್ವನಾಥ್ ಅವರು ಮಾತನಾಡಿ, “ಹಲವು ಪಾಲಿಕೆಗಳನ್ನು ಮಾಡಿದರೆ, ಒಂದು ಪಾಲಿಕೆಯಲ್ಲಿ ಜನರಿಗೆ ಉಚಿತ ಯೋಜನೆಗಳನ್ನು ಕೊಡಲು ಆರಂಭಿಸಿದರೆ, ಆಗ ಈ ಪಾಲಿಕೆ ವ್ಯಾಪ್ತಿಗೆ ಬಾಡಿಗೆದಾರರು ಸ್ಥಳಾಂತರಗೊಂಡರೆ ಆಗ ಮತ್ತೊಂದು ಪಾಲಿಕೆ ಗತಿ ಏನು? ಇಂತಹ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ” ಎಂದು ಹೇಳಿದರು.

ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ವಿಶ್ವನಾಥ್ ಅವರ ಧರ್ಮಪತ್ನಿ ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದರು. ನಾನು ಕೂಡ ಬೆಂಗಳೂರು ಜಿಲ್ಲಾ ಪರಿಷತ್ ಸದಸ್ಯನಾಗಿದ್ದೆ. ಆಗ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಬೆಂಗಳೂರು ಒಂದೇ ಜಿಲ್ಲೆಯಾಗಿತ್ತು. ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಹೊಸಕೋಟೆ ಸೇರಿದಂತೆ ನಾವೆಲ್ಲರೂ ಬೆಂಗಳೂರಿಗರಾಗಿದ್ದೆವು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಗರ ಜಿಲ್ಲೆ, ರಾಮನಗರ ಜಿಲ್ಲೆಯಾಯಿತು. ಹೀಗೆ ಬೆಂಗಳೂರನ್ನು ಭಾಗ ಮಾಡುವ ಪರಿಸ್ಥಿತಿ ಯಾಕೆ ಬಂದಿತು? ಆಗಿನಂತೆ ಇಡೀ ಜಿಲ್ಲೆಯನ್ನು ಒಂದೇ ಮಾಡಿ ಜಿಲ್ಲಾ ಪಂಚಾಯ್ತಿ ಮಾಡಬಹುದಿತ್ತಲ್ಲವೇ? ಆಡಳಿತಾತ್ಮಕ ಉದ್ದೇಶದಿಂದಲೇ ಇವುಗಳನ್ನು ವಿಭಜನೆ ಮಾಡಿದ್ದೇವೆ ಅಲ್ಲವೇ?” ಎಂದು ಸ್ಪಷ್ಟನೆ ನೀಡಿದರು.

ನಾನು ಡಿನೋಟಿಫಿಕೇಶನ್ ಮಾಡಿ, ಸಮಸ್ಯೆಗೆ ಸಿಲುಕುವುದಿಲ್ಲ: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರು ಮಾತನಾಡಿ, “ಬಜೆಟ್ ನಲ್ಲಿ ಟನಲ್ ರಸ್ತೆ, ಮೇಲ್ಸೇತುವೆ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಈ ಹಿಂದೆ ಮಾಡಿರಲಿಲ್ಲ. ನೀವು ಮಾಡಿದ್ದೀರಿ. ನಮಗೆ ಸಂತೋಷವೇ. ಇವುಗಳು ಕಾಲಮಿತಿಯಲ್ಲಿ ಮುಗಿಯುತ್ತವೆಯೇ? ಇನ್ನು ಬಿಸಿನೆಸ್ ಕಾರಿಡಾರ್ ಮಾಡಲು ಮುಂದಾಗಿದ್ದೀರಿ. ಅಲ್ಲಿ ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಮನೆಗಳಾಗಿವೆ. ಇದನ್ನು ಮಾಡುವುದಾದರೆ ಈಗಲೇ ಮಾಡಿ. 10 ವರ್ಷ ಕಳೆದರೆ ಭೂಮಿಯ ಬೆಲೆ ಹೆಚ್ಚಾಗುತ್ತದೆ. ಈ ಬಗ್ಗೆ ಗಮನಹರಿಸಿ” ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ನೀವು ಕೃಷ್ಣಪ್ಪ ಅವರ ಕ್ಷೇತ್ರದ ಬಗ್ಗೆ ಮಾತನಾಡುತ್ತಿದ್ದೀರಿ. ಈ ವಿಚಾರ ನನ್ನ ಗಮನದಲ್ಲಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಬನ್ನೇರುಘಟ್ಟ ರಸ್ತೆವರೆಗೂ ನೋಟಿಫಿಕೇಶನ್ ಆಗಿತ್ತು. ನಂತರ ರಸ್ತೆ ಮಾಡಲಿಲ್ಲ. ಬಿಡಿಎನಿಂದ ಇದನ್ನು ಡಿಲೀಟ್ ಮಾಡಬೇಕು ಎಂಬ ಮನವಿ ಬಂದಿತು. ಯಾರೂ ಕೂಡ ಇದನ್ನು ಡಿಲೀಟ್ ಮಾಡಿ ಡಿನೋಟಿಫಿಕೇಶನ್ ಮಾಡಲಿಲ್ಲ. ಡಿಲೀಟ್ ಮಾಡಿ ಪ್ಲಾನ್ ಮಾಡಿಕೊಳ್ಳಲು ಅವಕಾಶವನ್ನು ನೀಡಲಿಲ್ಲ. ಈ ಪ್ರದೇಶವನ್ನು ಹಾಗೆ ಬಿಡಲಾಗಿದೆ. ನಾನಂತೂ ಡಿನೋಟಿಫಿಕೇಶನ್ ಮಾಡುವುದಿಲ್ಲ. ಅದರ ಸಮಸ್ಯೆಗೆ ಸಿಲುಕುವುದಿಲ್ಲ. ಕೊನೆಗೆ ಅವರಿಗೆ ಪರಿಹಾರ ನೀಡಿ, ಇದನ್ನು ಮಾಡಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

ಬೆಂಗಳೂರಿಗೆ ಒಬ್ಬರೇ ಉಸ್ತುವಾರಿ ಸಚಿವರಿರುವುದಿಲ್ಲ ಗ್ರೇಟರ್ ಬೆಂಗಳೂರು ಕಾರ್ಯಾಕಾರಿ ಸಮಿತಿಗೆ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ಶಾಸಕ ಅಶ್ವಥ ನಾರಾಯಣ ಅವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಉತ್ತರಿಸಿದ ಡಿಸಿಎಂ ಅವರು, “ಬಿಜೆಪಿ ಸಮಯದಲ್ಲಿ ಬೆಂಗಳೂರಿನವರೇ ಮೂರು ನಾಲ್ಕು ಮಂದಿ ಸಚಿವರು ಇದ್ದರು. ಯಾರು ಜವಾಬ್ದಾರಿ ಹೊರುವವರು.ಕಾರ್ಯಕಾರಿ ಸಮಿತಿಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವರು ಒಬ್ಬರೇ ಇರುವುದಿಲ್ಲ” ಎಂದರು.

“ಡಾಕ್ಟರ್ ಅಶ್ವಥನಾರಾಯಣ ಅವರು ಮರೆತು ಹೋಗಿದ್ದಾರೆ. ಬಿಜೆಪಿ ಅವಧಿಯಲ್ಲಿ ಬೆಂಗಳೂರು ದಕ್ಷಿಣ, ಉತ್ತರಕ್ಕೆ ಉಸ್ತುವಾರಿ ಸಚಿವರಿದ್ದರು. ಬೇಕಿದ್ದರೇ ಅಶೋಕ ಅವರನ್ನೇ ಕೇಳಿ”ಎಂದು ಕೃಷ್ಣಭೈರೇಗೌಡ ಅವರು ಡಿಸಿಎಂ ಮಾತಿಗೆ ಬೆಂಬಲವಾಗಿ ನಿಂತರು.

ಆಗ ಮತ್ತೆ ಉತ್ತರಿಸಿದ ಡಿಸಿಎಂ ಅವರು, “ಕೆ.ಆರ್.ಪುರ ಹಾಗೂ ಮಿಕ್ಕಿದ್ದು ಬಿಟ್ಟು ಏಳು ಸಿಎಂಸಿಗಳಿಗೆ ನಾನೇ ಉಸ್ತುವಾರಿಯಿದ್ದೆ. ಬೆಂಗಳೂರು ನಗರ ಕಾರ್ಪೋರೇಷನ್ ಬೇರೆಯಿತ್ತು. ಬೆಂಗಳೂರಿನಲ್ಲಿ ಐದಾರು ಜನ ಮಂತ್ರಿಗಳಿದ್ದರೇ, ಆಗ ಯಾರಿಗೆ ಜವಾಬ್ದಾರಿ ಕೊಡಬೇಕು? ಈ ಮೊದಲು ಬೆಂಗಳೂರು ಉಸ್ತವಾರಿಯೇ ಇರಲಿಲ್ಲ, ಕೇವಲ ನಗರಾಭಿವೃದ್ದಿ ಸಚಿವರು ಮಾತ್ರ ಇದ್ದರು. ಧರಂ ಸಿಂಗ್ ಹಾಗೂ ಜಾರ್ಜ್ ಅವರು ಕೇವಲ ನಗರಾಭಿವೃದ್ದಿ ಸಚಿವರಾಗಿದ್ದರು. ಪಂಚಾಯಿತಿಗಳಿಗೆ ಬೇರೆ ಸಚಿವರು ಇದ್ದರು” ಎಂದರು.

ಕಾರ್ಯಾಕಾರಿ ಸಮಿತಿಯ ಅಧ್ಯಕ್ಷ ಹುದ್ದೆಗೆ ಬೆಂಗಳೂರು ಅಭಿವೃದ್ದಿ ಸಚಿವರು ‘ಅಥವಾ’ ಇಂತಹವರನ್ನು ನೇಮಕ ಮಾಡಬಹುದು ಎಂದು ಸೇರಿಸಿರುವುದರ ಬಗ್ಗೆ ತಕರಾರು ವ್ಯಕ್ತಪಡಿಸಿದಾಗ, “ಮುಂದಕ್ಕೆ ನಿಮ್ಮ ಅಥವಾ ನಮ್ಮ ಸರ್ಕಾರ ಬರುತ್ತದೆ ಎಂದು ತಿಳಿದುಕೊಳ್ಳಿ. ಆಗ ಬೆಂಗಳೂರಿನಲ್ಲಿ ಯಾರೂ ಗೆಲ್ಲುವುದಿಲ್ಲ. ಆಗ ಏನು ಮಾಡುತ್ತೀರಿ?. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಆದರೆ ಹೈದರಾಬಾದ್ ಸ್ಥಳೀಯ ಸಂಸ್ಥೆಯಲ್ಲಿ ಒಬ್ಬರೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡುವುದು?” ಎಂದು ಕೇಳಿದರು.

About the Author

The Bengaluru Live

Administrator

Visit Website View All Posts

Post navigation

Previous: ಸಿದ್ದರಾಮಯ್ಯ 16ನೇ ಬಜೆಟ್ ಮಂಡನೆ | ಬಿಜೆಪಿಯವರು ಹೊಟ್ಟೆ ಉರಿದುಕೊಂಡು ಸಾಯುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್
Next: ರಾಜ್ಯಸಭೆಯಲ್ಲಿ ರೇಲ್ವೆ ತಿದ್ದುಪಡಿ ಮಸೂದೆ ಮೇಲೆ ಹೆಚ್.ಡಿ.ದೇವೇಗೌಡರ ಚರ್ಚೆ

Related Stories

ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹೂವಿನ ಹಾರ ಹಾಕಿದ ನೀಲಿ-ಬೆಳ್ಳಿ ಬಣ್ಣದ ಮೆಟ್ರೋ ರೈಲಿನ ಪಕ್ಕ ಸುರಕ್ಷತಾ ಕವಚ, ಹೆಲ್ಮೆಟ್ ಧರಿಸಿ ನಿಂತಿರುವ ಯೋಜನಾ ಸಿಬ್ಬಂದಿ
  • ಬೆಂಗಳೂರು ನಗರ

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು

The Bengaluru Live November 23, 2026 7:26 PM
ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್

The Bengaluru Live November 23, 2026 7:14 PM
ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

The Bengaluru Live November 23, 2026 5:59 PM

Latest Post

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹೂವಿನ ಹಾರ ಹಾಕಿದ ನೀಲಿ-ಬೆಳ್ಳಿ ಬಣ್ಣದ ಮೆಟ್ರೋ ರೈಲಿನ ಪಕ್ಕ ಸುರಕ್ಷತಾ ಕವಚ, ಹೆಲ್ಮೆಟ್ ಧರಿಸಿ ನಿಂತಿರುವ ಯೋಜನಾ ಸಿಬ್ಬಂದಿ
  • ಬೆಂಗಳೂರು ನಗರ

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು

November 23, 2026 7:26 PM
‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್ ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್

November 23, 2026 7:14 PM
ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

November 23, 2026 5:59 PM
ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ ವಿಧಾನಸೌಧದ ಸಂವಾದ ಸಭೆಯಲ್ಲಿ ಸಭಾ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು ಮತ್ತು ಭೇಟಿ ನೀಡಿದ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ
  • ಕರ್ನಾಟಕ

ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ

November 23, 2026 5:37 PM
ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

November 23, 2026 5:34 PM
ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ

November 23, 2026 5:28 PM

ನೀವು ತಪ್ಪಿಸಿಕೊಂಡಿರಬಹುದು

ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹೂವಿನ ಹಾರ ಹಾಕಿದ ನೀಲಿ-ಬೆಳ್ಳಿ ಬಣ್ಣದ ಮೆಟ್ರೋ ರೈಲಿನ ಪಕ್ಕ ಸುರಕ್ಷತಾ ಕವಚ, ಹೆಲ್ಮೆಟ್ ಧರಿಸಿ ನಿಂತಿರುವ ಯೋಜನಾ ಸಿಬ್ಬಂದಿ
  • ಬೆಂಗಳೂರು ನಗರ

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು

The Bengaluru Live November 23, 2026 7:26 PM
ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್

The Bengaluru Live November 23, 2026 7:14 PM
ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

The Bengaluru Live November 23, 2026 5:59 PM
ವಿಧಾನಸೌಧದ ಸಂವಾದ ಸಭೆಯಲ್ಲಿ ಸಭಾ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು ಮತ್ತು ಭೇಟಿ ನೀಡಿದ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ
  • ಕರ್ನಾಟಕ

ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ

The Bengaluru Live November 23, 2026 5:37 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು
  • ‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್
  • ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ
  • ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ
©Copyright 2025 The Bengaluru Live All rights reserved. | MoreNews by AF themes.