ಬೇಸಿಗೆ ಆರಂಭವಾಗಿದ್ದು, ರಾಜ್ಯದಲ್ಲಿ ವಿದ್ಯುತ್’ಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜಸ್ಥಾನ ಹಾಗೂ ಉತ್ತರಪ್ರದೇಶ ರಾಜ್ಯಗಳೊಂದಿಗೆ ‘ವಿನಿಮಯ ಒಪ್ಪಂದ’ವನ್ನು ಮಾಡಿಕೊಂಡಿದೆ. ಬೆಂಗಳೂರು: ಬೇಸಿಗೆ ಆರಂಭವಾಗಿದ್ದು, ರಾಜ್ಯದಲ್ಲಿ ವಿದ್ಯುತ್’ಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜಸ್ಥಾನ ಹಾಗೂ ಉತ್ತರಪ್ರದೇಶ ರಾಜ್ಯಗಳೊಂದಿಗೆ ‘ವಿನಿಮಯ ಒಪ್ಪಂದ’ವನ್ನು ಮಾಡಿಕೊಂಡಿದೆ.
ಉಭಯ ರಾಜ್ಯಗಳೊಂದಿಗೆ ಹಣಕಾಸಿನ ಒಪ್ಪಂದವಾಗಿಲ್ಲ. ಬದಲಿಗೆ ವಿನಿಮಯ ಒಪ್ಪಂದವಾಗಿದೆ. ರಾಜಸ್ಥಾನ ಮತ್ತು ಉತ್ತರ ಪ್ರದೇಶದಿಂದ ಪ್ರಸ್ತುತ (ಏಪ್ರಿಲ್ ಮತ್ತು ಮೇ ಅವಧಿಯಲ್ಲಿ) ಪಡೆದಿರುವ ವಿದ್ಯುತ್ ಪ್ರಮಾಣವನ್ನು ಜೂನ್ ಮತ್ತು ಜುಲೈನಲ್ಲಿ ಆ ರಾಜ್ಯಗಳಿಗೆ ಹಿಂತಿರುಗಿಸಲಾಗುತ್ತದೆ. ಈ ಅವಧಿಯಲ್ಲಿ ಮುಂಗಾರು ಆರಂಭವಾಗುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ವಿದ್ಯುತ್ ಅಗತ್ಯತೆ ಕಡಿಮೆ ಇರುತ್ತದೆ. ಆದರೆ, ಆ ವೇಳೆ ಉತ್ತರಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ವಿದ್ಯುತ್’ಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ರಾಜ್ಯ ಇಂಧನ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯವು ಪ್ರತಿ ದಿನ ಉತ್ತರ ಪ್ರದೇಶದಿಂದ 10 ಮಿಲಿಯನ್ ಯೂನಿಟ್ ಮತ್ತು ರಾಜಸ್ಥಾನದಿಂದ 200 ಮೆಗಾವ್ಯಾಟ್ ಪಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ದೈನಂದಿನ ವಿದ್ಯುತ್ ಬಳಕೆ ಮತ್ತು ಬೇಡಿಕೆಯಲ್ಲಿ ಹೆಚ್ಚಾಗಿದೆ. ಏಪ್ರಿಲ್ 20ರಂದು ರಾಜ್ಯಾದ್ಯಂತ 309.5 ಮಿಲಿಯನ್ ಯುನಿಟ್ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಮಿತಿಯಲ್ಲಿ 146 ಮಿಲಿಯನ್ ಯುನಿಟ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿನ ವರ್ಷಗಳಲ್ಲಿ, ಮಾರ್ಚ್ ಕೊನೆಯ ವಾರದಲ್ಲಿ ಕರ್ನಾಟಕಕ್ಕೆ 299 ಮಿಲಿಯನ್ ಯುನಿಟ್ ಮತ್ತು ಬೆಂಗಳೂರಿಗೆ 144 ಮಿಲಿಯನ್ ಯೂನಿಟ್ ವಿದ್ಯತ್ ಬಳಕೆಯಾಗಿತ್ತು.
ಇಂಧನ ಇಲಾಖೆಯ ದಾಖಲೆಗಳ ಪ್ರಕಾರ, ಬೆಳಿಗ್ಗೆ 9.30-11.30ರವರೆಗೆ ವಿದ್ಯುತ್’ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ರಾಜ್ಯದಲ್ಲಿ ಏಪ್ರಿಲ್ 20 ರಂದು 16,180 ಮೆಗಾವ್ಯಾಟ್ ಮತ್ತು ಬೆಸ್ಕಾಂ ಮಿತಿಯಲ್ಲಿ 7,480 ಮೆಗಾವ್ಯಾಟ್ ವಿದ್ಯುತ್’ಗೆ ಬೇಡಿಕೆ ಇತ್ತು ಎಂದು ತಿಳಿದುಬಂದಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕೃಷಿ ವಲಯದಿಂದ ಹಗಲಿನಲ್ಲಿ ವಿದ್ಯುತ್’ಗೆ ಶೇ.18-20ರಷ್ಟು ಬೇಡಿಕೆ ಹೆಚ್ಚಳವಾಗಿದೆ. ದೇಶೀಯ ವಲಯದಿಂದ ಶೇ.4-5ರಷ್ಟು ಬೇಡಿಕೆ ಹೆಚ್ಚಾಗಿದ್ದು, ಕೈಗಾರಿಕಾ ಮತ್ತು ವಾಣಿಜ್ಯ ಕ್ಷೇತ್ರಗಳಿಂದ ಬೇಡಿಕೆ ಹೆಚ್ಚಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾತ್ರಿ ವೇಳೆ ತಾಪಮಾನವು ಹೆಚ್ಚಾಗಿರುವ ಕಾರಣ ಈ ವೇಳೆ ವಿದ್ಯುತ್”ಗೆ ಅತೀ ಹೆಚ್ಚು ಬೇಡಿಕೆ ಬಂದಿದೆ. ಕಳೆದ ವರ್ಷ ಬಹುತೇಕ ಭಾಗಗಳಲ್ಲಿ ಮುಂಗಾರು ಅವಧಿಗೂ ಮುನ್ನವೇ ಆರಂಭವಾಗಿತ್ತು. ಹೀಗಾಗಿ ವಿದ್ಯುತ್’ಗೆ ಬೇಡಿಕೆ ಹೆಚ್ಚಿರಲಿಲ್ಲ. ಆದರೆ, ಈ ವರ್ಷ ಹಾಗಾಗಿಲ್ಲ. ಹೀಗಾಗಿ ವಿದ್ಯುತ್’ಗೆ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಸೌರಶಕ್ತಿ ಸಹಾಯದಿಂದ ದಿನದ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಇಲಾಖೆ ನಿರ್ವಹಿಸುತ್ತಿದೆ, ಇದರಿಂದ ದಿನಕ್ಕೆ 6,500 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ. ಇನ್ನೂ ಸರಿಯಾದ ವಿದ್ಯುತ್ ಶೇಖರಣಾ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿಯ ಬೇಡಿಕೆ ಈಡೇರಿಸುವುದು ಸವಾಲಾಗಿ ಪರಿಣಮಿಸಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು, ಇಲಾಖೆಯು ಗ್ರಿಡ್ ನೆಟ್ವರ್ಕ್ ಸುಧಾರಿಸಿ, ಸೋರಿಕೆಗಳನ್ನು ತಡೆಯುತ್ತಿದೆ. ಕರ್ನಾಟಕದಲ್ಲಿ 32 ಮಿಲಿಯನ್ ಘಟಕಗಳ ಸ್ಥಾಪಿತ ಸಾಮರ್ಥ್ಯವನ್ನು ಹೊಂದಲಾಗಿದ್ದು, ಇದರಿಂದ ಯಾವುದೇ ಹಂತದಲ್ಲಿ 9,000 ಎಂಡಬ್ಲ್ಯೂ ವರೆಗಿನ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ನಿಭಾಯಿಸಬಹುದಾಗಿದೆ. ಮುಂಗಾರು ಪೂರ್ವ ಮಳೆಯ ವಿಳಂಬ ಮತ್ತು ಹೆಚ್ಚುತ್ತಿರುವ ತಾಪಮಾನದಿಂದಾಗಿ ಮುಂಬರುವ ದಿನಗಳಲ್ಲಿ ವಿದ್ಯುತ್’ಗೆ ಬೇಡಿಕೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
