ಅಂಗಾಂಗ ಜೋಡಣೆಗೆ ದೇಶದಲ್ಲೇ ಮೊದಲ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಬಜೆಟ್’ನಲ್ಲಿ ರೂ.146 ಕೋಟಿ ಮೀಸಲಿಡಲಾಗಿದ್ದು, ಸರ್ಕಾರದ ಈ ಯೋಜನೆಗೆ ಆರೋಗ್ಯ ತಜ್ಞರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು: ಅಂಗಾಂಗ ಜೋಡಣೆಗೆ ದೇಶದಲ್ಲೇ ಮೊದಲ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಬಜೆಟ್’ನಲ್ಲಿ ರೂ.146 ಕೋಟಿ ಮೀಸಲಿಡಲಾಗಿದ್ದು, ಸರ್ಕಾರದ ಈ ಯೋಜನೆಗೆ ಆರೋಗ್ಯ ತಜ್ಞರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಯೋಜನೆಯಿಂದ ಅಂಗಾಂಗ ದಾನ ಹೆಚ್ಚಾಗಲಿದ್ದು, ಆರೋಗ್ಯ ಮೂಲಭೂತ ಸೌಕರ್ಯಗಳ ಹೆಚ್ಚಿಸಲು ಒತ್ತು ನೀಡಿರುವುದಕ್ಕೆ ಸರ್ಕಾರಕ್ಕವನ್ನು ತಜ್ಞರು ಶ್ಲಾಘಿಸಿದ್ದಾರೆ.
ಆಸ್ರಾ ಆಸ್ಪತ್ರೆಯ ಅಧ್ಯಕ್ಷ ಡಾ.ಜಗದೀಶ್ ಹಿರೇಮಠ ಮಾತನಾಡಿ, ಅಂಗಾಂಗ ದಾನದಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅಂಗಾಂಗ ದಾನಕ್ಕಾಗಿ ಮೀಸಲಾದ ಆಸ್ಪತ್ರೆಯು ನಿಸ್ಸಂಶಯವಾಗಿ ಒಂದು ಉತ್ತಮ ಕ್ರಮವಾಗಿದೆ. ಏಕೆಂದರೆ ಇದರಿಂದ ಹಲವು ಜನರು ಹೊಸ ಜೀವನವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಅಂಗಾಂಗ ದಾನವೂ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
“ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಮೊದಲ ಆಸ್ಪತ್ರೆ ನಿರ್ಮಾಣದ ಮೂಲಕ ಸರ್ಕಾರವು ಜಾಗೃತಿ ಮೂಡಿಸುವುದಲ್ಲದೆ ಅಂತಹ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಮಾಡುತ್ತಿದೆ ಎಂದು ಸ್ಪೆಷಲಿಸ್ಟ್ ಆಸ್ಪತ್ರೆಯ ನಿರ್ದೇಶಕ ಮತ್ತು ಸಿಇಒ ಡಾ.ಶಫೀಕ್ ಎ ಎಂ ಅವರು ತಿಳಿಸಿದ್ದಾರೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 5 ಕೋಟಿ ರೂಪಾಯಿಗಳಲ್ಲಿ ಸ್ವಯಂಚಾಲಿತ ಮತ್ತು ಕೇಂದ್ರೀಕೃತ ಬ್ಲಡ್ ಬ್ಯಾಂಕ್ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಿರುವುದನ್ನು ಸ್ವಾಗತಿಸಿದ್ದಾರೆ.
ಇದು ಆರೋಗ್ಯ ಮೂಲಸೌಕರ್ಯಕ್ಕೆ ದೊಡ್ಡ ಉತ್ತೇಜನವಾಗಿದೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ರಕ್ತದ ಲಭ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಗರ್ಭಿಣಿಯರು, ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು 165 ಕೋಟಿ ವೆಚ್ಚದಲ್ಲಿ 10 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳ ಸ್ಥಾಪನೆ, 137 ಕೋಟಿ ವೆಚ್ಚದಲ್ಲಿ 65 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ರೂ.6 ಕೋಟಿ ವೆಚ್ಚದಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 4 ಐವಿಎಫ್ ಕ್ಲಿನಿಕ್‌ಗಳ ಪ್ರಾರಂಭ, ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ನಿರ್ಮೂಲನೆಗೆ 100 ಕೋಟಿ ರೂಯನ್ನು ಸರ್ಕಾರ ಮೀಸಲಿಟ್ಟಿದೆ.
ಡಾ ಜಗದೀಶ್ ಅವರು ಮಾತನಾಡಿ, “ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸುವುದು ಮತ್ತು ವಿಶ್ವಾಸಾರ್ಹ ಸೌಲಭ್ಯಗಳೊಂದಿಗೆ ಆಸ್ಪತ್ರೆಗಳನ್ನು ನಿರ್ಮಿಸುವುದು ರಾಜ್ಯದ ಆರೋಗ್ಯ ಮೂಲಸೌಕರ್ಯಕ್ಕೆ ನೀಡಿರುವ ದೊಡ್ಡ ಉತ್ತೇಜನವಾಗಿದೆ. ‘ಮನೆ ಮನೆಗೆ ಆರೋಗ್ಯ ಯೋಜನೆ’, ಕ್ಯಾನ್ಸರ್ ತಪಾಸಣಾ ಶಿಬಿರಗಳಂತಹ ಕಾರ್ಯಕ್ರಮಗಳು ಜನರಿಗೆ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದ್ದಾರೆ.