Home Uncategorized ಪ್ರವಾಸೋದ್ಯಮಕ್ಕೆ ಬಜೆಟ್ ಬಲ: ಪ್ರವಾಸಿ ಗೈಡ್'ಗಳಿಗೆ ರೂ.5,000 ಪ್ರೋತ್ಸಾಹ ಧನ

ಪ್ರವಾಸೋದ್ಯಮಕ್ಕೆ ಬಜೆಟ್ ಬಲ: ಪ್ರವಾಸಿ ಗೈಡ್'ಗಳಿಗೆ ರೂ.5,000 ಪ್ರೋತ್ಸಾಹ ಧನ

12
0
bengaluru

ರಾಜ್ಯ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರವಾಸಿ ಮಾರ್ಗದರ್ಶಿಗಳ ಪ್ರೋತ್ಸಾಹ ಧನವನ್ನು ರೂ.5,000ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ. ಬೆಂಗಳೂರು: ರಾಜ್ಯ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರವಾಸಿ ಮಾರ್ಗದರ್ಶಿಗಳ ಪ್ರೋತ್ಸಾಹ ಧನವನ್ನು ರೂ.5,000ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ.

ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯದ ಆಯವ್ಯಯವನ್ನು ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಪ್ರವಾಸೋದ್ಯಮ ಇಲಾಖೆಗೆ ಹಲವು ಯೋಜನೆಗಲನ್ನು ಘೋಷಿಸಿದರು.

ಗುರ್ತಿಕೆಯಿಲ್ಲದೆ ಉಳಿದುಕೊಂಡಿರುವ ಐತಿಹಾಸಿಕ ತಾಣಗಳ ಮೇಲೆ ಬೆಳಕು ಚೆಲ್ಲುವುದು, ಅವುಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ದಿ ಪಡಿಸುವುದು, ಹೊದಿಗೆರೆ ಗ್ರಾಮಲ್ಲಿರುವ ಷಹಾಜಿ ಮಹಾರಾಜರ ಸಮಾಧಿ ಮತ್ತು ಸಂತ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪ ಅಭಿವೃದ್ಧಿಗೆ ಬಜೆಟ್‌ನಲ್ಲಿ ತಲಾ 5 ಕೋಟಿ ರೂ. ಮೀಸಲಿಟ್ಟಿರುವುದಾಗಿ ಹೇಳಿದರು.

ಕಿತ್ತೂರು ಚೆನ್ನಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ ಹಾಗೂ ಬೆಳವಡಿ ‘ಮಲ್ಲಮ್ಮರ ಸಾಲಿಗೆ ಸೇರುವ ಮತ್ತೊಬ್ಬ ಧೀರ ವನಿತೆ ‘ರಾಣಿ ಚೆನ್ನಭೈರಾದೇವಿ ಅವರ ಹೆಸರನ್ನು ಶಾಶ್ವತಗೊಳಿಸಲು ಹೊನ್ನಾವರದಲ್ಲಿ ‘ಚೆನ್ನಭೈರಾದೇವಿ ಸ್ಮಾರಕ ಉದ್ಯಾನ’ ನಿರ್ಮಾಣ ಮಾಡಲಾಗುವುದು. ತಾಳಿಕೋಟೆ ಯುದ್ಧಕ್ಕೆ ಸಂಬಂಧಿಸಿರುವ ರಕ್ಕಸಗಿ, ತಂಗಡಗಿ ಮತ್ತು ತಾಳಿಕೋಟೆಯ ಸುತ್ತಲಿನ ಪ್ರಸಿದ್ಧ ಐತಿಹಾಸಿಕ ತಾಣಗಳನ್ನು ಯುವಜನರಿಗೆ ಅವರ ಕೊಡುಗೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗುವುದು.

ರಾಜ್ಯದಲ್ಲಿನ ಪಾರಂಪರಿಕ ತಾಣಗಳ ಪ್ರವಾಸಿ ಸರ್ಕ್ಯುಟ್ ಪಾರಂಭಿಸುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯಲ್ಲಿರುವ ಸನ್ನತಿ-ಚಂದ್ರಲಾಂಬಾ ದೇವಾಲಯ ಹಾಗೂ ಗಾಣಗಾಪುರ ದತ್ತಾತ್ರೇಯ ದೇವಾಲಯ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬನವಾಸಿಯ ಮಧುಕೇಶ್ವರ ದೇವಾಲಯ ಸಂಕೀರ್ಣಗಳ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಒದಗಿಸಲಾಗುವುದು. ಕರ್ನಾಟಕದ ಇತಿಹಾಸ ಮತ್ತು ಕಲೆಯ ಶ್ರೀಮಂತಿಕೆಯನ್ನು ಬಿಂಬಿಸುವ ವಿಜಯ ವಿಟ್ಠಲ ದೇವಸ್ಥಾನ ಮತ್ತು ಹಂಪಿಯ ಪುರಂದರದಾಸ ಮಂಟಪ, ವಿಜಯಪುರದ ಗೋಲ್ ಗುಂಬಜ್, ಚಿಕ್ಕಬಳ್ಳಾಪುರ ಜಿಲ್ಲೆಯ ಭೋಗನಂದೀಶ್ವರ ದೇವಸ್ಥಾನ, ಬಾದಾಮಿಯ ಗುಹೆಗಳು, ಕಿತ್ತೂರು ಮತ್ತು ಬೀದರ್‌ನ ಕೋಟೆಗಳನ್ನು ಅಭಿವೃದ್ಧಿಪಡಿಸಲಾಗುವುದು. ರೂ.60 ಕೋಟಿ ವೆಚ್ಚದಲ್ಲಿ ಆಧುನಿಕ ಬೆಳಕಿನ ವ್ಯವಸ್ಥೆ, 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್, ಧ್ವನಿ ಮತ್ತು ಬೆಳಕು ಪ್ರದರ್ಶನಗಳನ್ನು ಅಳವಡಿಸಲಾಗುವುದು.

398 ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳ ಪ್ರೋತ್ಸಾಹಧನವನ್ನು 2,000 ರೂ.ನಿಂದ 5,000 ರೂ.ಗೆ ಹೆಚ್ಚಿಸಲಾಗಿದ್ದು, ಇದಕ್ಕಾಗಿ 1.10 ಕೋಟಿ ರೂ ನೀಡಲಾಗಿದೆ. ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು. ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಇರುವ ಎರಡೂವರೆ ಎಕರೆ ಜಾಗದಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಜ್ಯ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ನಿರ್ಮಿಸಲಾಗುವುದು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ರೋರಿಚ್ ಮತ್ತು ದೇವಿಕಾ ರಾಣಿ ಎಸ್ಟೇಟ್‌ನಲ್ಲಿ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ರಾಮನಗರ ಜಿಲ್ಲೆಯ ಮಂಚನಬೆಲೆ ಜಲಾಶಯದ ಹಿನ್ನೀರಿನ 10 ಎಕರೆ ಪ್ರದೇಶದಲ್ಲಿ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ಮೂಲಕ 10 ಕೋಟಿ ರೂ.ವೆಚ್ಚದಲ್ಲಿ ರೆಸಾರ್ಟ್ ನಿರ್ಮಿಸಲಾಗುವುದು. ಕರಾವಳಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮರೀನಾವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದರು.

LEAVE A REPLY

Please enter your comment!
Please enter your name here