ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಮಹತ್ವಾಕಾಂಕ್ಷೆಯ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ಮುಂದೂಡಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಮಹತ್ವಾಕಾಂಕ್ಷೆಯ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ಮುಂದೂಡಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
ಯುಪಿಐ ಮೂಲಕ ಟಿಕೆಟ್ ಖರೀದಿ ಮಾಡುವ ವ್ಯವಸ್ಥೆಯನ್ನು ಡಿಸೆಂಬರ್ ತಿಂಗಳಿನಲ್ಲಿ ಜಾರಿಗೆ ತರುವುದಾಗಿ ಬಿಎಂಟಿಸಿ ಹೇಳಿತ್ತು. ಆದರೆ, ಹೊಸ ವರ್ಷವಕ್ಕೆ ಕಾಲಿಟ್ಟು ತಿಂಗಳುಗಳು ಕಳೆದರೂ ಇನ್ನೂ ಜಾರಿಯಾಗಿಲ್ಲ. ಈ ವ್ಯವಸ್ಥೆ ಜಾರಿಯಾಗಲೂ ಇನ್ನೂ ತಡವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಬ್ಯಾಂಕ್ ಗಳಿಂದ ವಹಿವಾಟು ಶುಲ್ಕ ಕುರಿತು ಪ್ರತಿಕ್ರಿಯೆಗಳಿಗೆ ಬಿಎಂಟಿಸಿ ಕಾಯುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿಯಾಗುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಬಿಎಂಟಿಪಿ ವಿರುದ್ಧ ಕೇಳಿ ಬರುತ್ತಿರುವ ಪ್ರಮುಖ ದೂರ ಎಂದರೆ ಅದು ಟಿಕೆಟ್ ದರ ಹೆಚ್ಚಳ ಹಾಗೂ ನಿರ್ವಾಹಕರು ಸರಿಯಾದ ಚಿಲ್ಲರೆ ಕೊಡದೆ ಇರುವುದಾಗಿದೆ. ಹಲವು ಬಾರಿ ಸರಿಯಾಗಿ ಚಿಲ್ಲರೆ ನೀಡದ ಪ್ರಯಾಣಿಕರನ್ನು ಕಂಡಕ್ಟರ್ ಗಳು ಬಸ್ ನಿಂದ ಕೆಳಗೆ ಇಳಿಸಿ ಹೋದ ಘಟನೆಗಳೂ ನಡೆದಿವೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮೇಘಾ ಎಂಬುವವರು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಿಎಂಟಿಸಿ ಬಸ್ ಹತ್ತಬೇಕೆಂದರೆ ಚಿಲ್ಲರೆ ಹಣ ಇಟ್ಟುಕೊಂಡಿರಬೇಕು. ಇಲ್ಲವೇ ಕಂಡಕ್ಟರ್ ನಿಂದ ಚಿಲ್ಲರೆ ಹಣವನ್ನು ನಿರೀಕ್ಷಿಸುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.
“ಪ್ರತಿದಿನ ನೂರಾರು ಪ್ರಯಾಣಿಕರನ್ನು ನೋಡುವ ಕಂಡಕ್ಟರ್‌ಗಳ ಪರಿಸ್ಥಿತಿಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೂ, ಪ್ರತೀ ಬಾರಿ ನಾವೂ ಚಿಲ್ಲರೆ ಹಣವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅವರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಬಸ್ ನಲ್ಲಿ ಚಿಲ್ಲರೆ ಹಣ ದೊಡ್ಡ ಸಮಸ್ಯೆಯಾಗಿ ತಲೆದೋರಿರುವ ಹಿನ್ನೆಲೆಯಲ್ಲಿ ಟಿಕೆಟ್ ವ್ಯವಸ್ಥೆಗೆ ವಿದಾಯ ಹೇಳಿ, ಯುಪಿಐ ಆಧಾರಿಕ ಟಿಕೆಟ್ ಖರೀದಿಗೆ ಪ್ರಯಾಣಿಕರು ಕಾಯುತ್ತಿದ್ದಾರೆ.
ಡಿಜಿಟಲ್ ಟಿಕೆಟ್ ವ್ಯವಸ್ಥೆ ಜಾರಿಗೆ ತರಲು ಬಿಎಂಟಿಸಿ ಸಿದ್ಧವಾಗಿದೆ. ಆದರೆ, ಬ್ಯಾಂಕ್ ನ ಉತ್ತರಕ್ಕಾಗಿ ಕಾಯುತ್ತಿದೆ. ವಹಿವಾಟು ಶುಲ್ಕಗಳು ಮತ್ತು ಡಿಸ್ಕೌಂಟ್ ದರದಲ್ಲಿ ಗರಿಷ್ಠ ರಿಯಾಯಿತಿ ಕುರಿತು ಒಮ್ಮೆ ಬ್ಯಾಂಕ್ ಪ್ರತಿಕ್ರಿಯೆ ನೀಡಿದ್ದೇ ಆದರೆ, ಯುಪಿಐ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ಬಿಎಂಟಿಸಿ ಮೂಲಗಳು ಮಾಹಿತಿ ನೀಡಿವೆ.
ಬಿಎಂಟಿಸಿ ಕಂಡಕ್ಟರ್‌ಗಳು ಹ್ಯಾಂಡ್‌ಹೆಲ್ಡ್ ಸಾಧನವನ್ನು ಹೊಂದಿರುತ್ತಾರೆ, ಈ ಸಾಧನದಲ್ಲಿ ಪ್ರಯಾಣಿಕರ ಗಮ್ಯಸ್ಥಾನದಲ್ಲಿ ನಮೂದು ಮಾಡುತ್ತಾರೆ. ಯಂತ್ರವು ಬೆಲೆಯನ್ನು ಲೆಕ್ಕಾಚಾರ ಮಾಡುತ್ತದೆ. ನಂತರ ಕೋಡ್ ಅನ್ನು ತೋರಿಸುತ್ತದೆ, ಬಳಿಕ ಪ್ರಯಾಣಿಕರು ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸ್ಕ್ಯಾನ್ ಮಾಡಿ, ಹಣವನ್ನು ಪಾವತಿ ಮಾಡಬಹುದು. ಅಗತ್ಯ ಇರುವವರಿಗೆ ಭೌತಿಕ ಟಿಕೆಟ್ ಗಳನ್ನೂ ಕೂಡ ನೀಡಲಾಗುತ್ತಿದೆ. ವಹಿವಾಟು ಪೂರ್ಣಗೊಳ್ಳದಿದ್ದರೆ, ಜನರು ಹಣ ನೀಡಿ ಟಿಕೆಟ್ ಖರೀದಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.