ಬೆಂಗಳೂರು ನಗರ ಅಭಿವೃದ್ಧಿಗಾಗಿ ಕೈಗೆತ್ತಿಕೊಂಡಿರುವ ಯೋಜನೆಗಳ ಲೆಕ್ಕಪರಿಶೋಧನೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಬೆಂಗಳೂರು ನಗರ ಅಭಿವೃದ್ಧಿಗಾಗಿ ಕೈಗೆತ್ತಿಕೊಂಡಿರುವ ಯೋಜನೆಗಳ ಲೆಕ್ಕಪರಿಶೋಧನೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಪಾಲಿಕೆ ವತಿಯಿಂದ ನಾನಾ ಅನುದಾನಗಳಡಿ ರಸ್ತೆ ಅಭಿವೃದ್ಧಿ, ರಾಜಕಾಲುವೆಗಳು, ಕೆರೆಗಳು, ಕಟ್ಟಡಗಳು, ವಾರ್ಡ್ ಮಟ್ಟದ ಕಾಮಗಾರಿಗಳ ಬಾಕಿ ಬಿಲ್ ಅನ್ನು ಗುತ್ತಿಗೆದಾರರಿಗೆ ಪಾವತಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್ ಪ್ರಮುಖವಾಗಿ 2019ರಿಂದ 2022 ರ ನಡುವೆ ಬಿಬಿಎಂಪಿ ತೆಗೆದುಕೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಲು ಎಸ್ಐಟಿ ರಚಿಸಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಬೃಹತ್ ನೀರುಗಾಲುವೆಗಳು, ಕೆರೆಗಳು, ಕಟ್ಟಡ ಕಾಮಗಾರಿಗಳು ಹಾಗೂ ವಾರ್ಡ್‍ಮಟ್ಟದ ಕಾಮಗಾರಿಗಳ ಬಾಕಿ ಬಿಲ್ಲಿನ ಹಣವನ್ನು ಬಿಡುಗಡೆ ಮಾಡಲು ಕೆಲವು ಸ್ಪಷ್ಟನೆ ಪಡೆದ ನಂತರ ಬಿಲ್ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಸಚಿವರು ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಸದರಿ ಕಾಮಗಾರಿ ಕೈಗೆತ್ತಿಕೊಳ್ಳಲು ಯಾರಿಂದ ಶಿಪರಸು ಮಾಡಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿ ಅವಶ್ಯಕತೆ ಬಗ್ಗೆ ತಾಂತ್ರಿಕ ವರದಿ ನೀಡಬೇಕು. ಎತೆಗೆ ವಸ್ತು ಸ್ಥಿತಿಯ ಛಾಯಾಚಿತ್ರ ಲಗತ್ತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸದರಿ ಕಾಮಾಗಾರಿಗೆ ಯಾವಾಗ ಟೆಂಡರ್ ಕರೆಯಲಾಗಿತ್ತು ಎನ್ನುವುದನ್ನು ನಮೂದಿಸುವುದರ ಜತೆಗೆ ಅಂದಾಜು ಪಟ್ಟಿಯಲ್ಲಿ ಅಳವಡಿಸಿದ ಅಂಶಗಳು ಮಿತವ್ಯಯದಿಂದ ಕೂಡಿದೆ ಎಂಬುದನ್ನು ಅಧಿಕಾರಿಗಳು ದೃಢಿಕರಿಸಬೇಕಿದೆ.
ಕಾಮಗಾರಿ ಆರಂಭಿಸುವುದಕ್ಕೆ ಪೂರಕವಾಗಿ ಈ ಹಿಂದೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ನಿರ್ವಹಣೆಯ ಅಂಶಗಳ ವಿವರಗಳನ್ನು ರಸ್ತೆ ಇತಿಹಾಸ ಪುಸ್ತ್ಕಕದಲ್ಲಿ ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಲಾಗಿತ್ತೇ ಎನ್ನುವ ಬಗ್ಗೆ ಪ್ರಮಾಣಿಕರಿಸಿದ ಅಧಿಕಾರಿಯ ಹೆಸರು ಪದನಾಮ ಹಾಗೂ ಮಾಹಿತಿಯನ್ನೊಳಗೊಂಡ ರೋಡ್ ಇಸ್ಟರಿ ಎಕ್ಸ್ಟ್ರಾಕ್ ಪ್ರತಿ ಒದಗಿಸಬೇಕಿದೆ.
ಡಾಂಬರು ರಸ್ತೆಗೆ ಅಂದಾಜುಪಟ್ಟಿ ತಯಾರಿಸುವಾಗ ಕಡ್ಡಾಯವಾಗಿ ಡಾಂಬರು ಮಿಶ್ರಣದಲ್ಲಿ ಬ್ಲೆಂಡೆಡ್ ವೇಸ್ಟ್ ಪ್ಲಾಸ್ಟಿಕ್ ಬಳಕೆ ಮಾಡಿಕೊಳ್ಳಲಾಗಿದೆಯೇ ಎನ್ನುವ ಮಾಹಿತಿ ನೀಡಬೇಕಿದೆ. ನೀರು ನುಗ್ಗುವ ಪ್ರದೇಶಗಳಲ್ಲಿ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಪುನಃ ನೀರು ನುಗ್ಗುವ ಸಮಸ್ಯೆ ಉಂಟಾಗುವುದಿಲ್ಲ ಎಂಬುದರ ಆಧಾರದ ಮೇಲೆ ಕಾಮಗಾರಿ ಮಾಡಲಾಗಿದೆಯೇ ಎಂಬ ಬಗ್ಗೈ ಅಧಿಕಾರಿಗಳು ದೃಢಿಕರಿಸಬೇಕಿದೆ.
ರಸ್ತೆ ನಿರ್ಮಾಣದ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮುನ್ನ ಹೊಸದಾಗಿ ನೀರು ಸರಬರಾಜು, ಒಳಚರಂಡಿ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ಹಾಗೂ ಮನೆ ಸಂಪರ್ಕ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆಯೇ ಎಂಬ ಬಗ್ಗೆಯೂ ದೃಢಿಕರಣ ನೀಡಬೇಕಿದೆ.
ವಾಹನ ಸಂಚಾರ ಹೆಚ್ಚಿರುವ ಪ್ರದೇಶಗಳ ರಸ್ತೆ ಕಾಮಗಾರಿ ನಿರ್ವಹಣೆ ವೇಳೆ ತಾಂತ್ರಿಕವಾಗಿ ಅನುಸರಿಸಬೇಕಾದ ಮಾನದಂಡಗಳನ್ನು ಪೂರ್ಣಗೊಳಿಸಲಾಗಿದೆಯೇ ಎಂಬ ಬಗ್ಗೆ ಐಆರ್‍ಸಿ ಕೋಡ್ ರೀತಿ ಕ್ರಮ ಕೈಗೊಂಡ ವಿನ್ಯಾಸ ನೀಡಬೇಕಿದೆ.
ಅನುಮೋದಿತ ಕಾಮಗಾರಿಗಳ ಬದಲಿಗೆ ಇನ್ನೊಂದು ಕಾಮಗಾರಿಯನ್ನು ತೆಗೆದುಕೊಂಡು ಅನುಷ್ಠಾನಗೊಳಿಸಲಾಗಿತ್ತೇ ಅಥವಾ ಅನುಮೋದಿತ ಮೂಲ ಕಾಮಗಾರಿಯನ್ನು ಅಂದಾಜು ಪಟ್ಟಿಯಲ್ಲಿನ ಅಂಶಗಳು ಮತ್ತು ಬದಲಿ ಕಾಮಗಾರಿಯಲ್ಲಿ ತೆಗೆದುಕೊಂಡ ಅಂಶಗಳಿಗೆ ಹೊಂದಾಣಿಕೆ ಇತ್ತೇ? ಎಂಬ ಬಗ್ಗೆ ಕಾಮಗಾರಿಗೆ ಶಿಫಾರಸು ಮಾಡಿದ ಅಕಾರಿ ಹೆಸರು ಮತ್ತು ವಿವರ ನೀಡಲೇಬೇಕು ಎಂಬ ಷರತ್ತು ವಿಧಿಸಲಾಗಿದೆ.
ಸದರಿ ಕಾಮಗಾರಿಗಳ ಬಿಲ್ ಪಾವತಿಸುವಾಗ ಅಕಾರಿಗಳು ಚೆಕ್ ಮೆಜರ್‍ಮೆಂಟ್ ಮಾಡಿರುವ ವಿವರ ಹಾಗೂ ಕಾಮಗಾರಿ ಮುಗಿದಿರುವ ಬಗ್ಗೆ ಅಧಿಕಾರಿಗಳು ತಪಾಸಣೆ ನಡೆಸಿದ ಬಗ್ಗೆ ಛಾಯಾಚಿತ್ರ ಹಾಗೂ ಗುಣಮಟ್ಟದ ಪರಿಶೀಲನೆ ಮಾಹಿತಿ ಲಗತ್ತಿಸಲೇಬೇಕಿದೆ.
ಕಾಮಗಾರಿ ಆರಂಭಿಸಿದ ಸಂದರ್ಭದಲ್ಲಿ ಉಪಯೋಗಿಸಿರುವ ಸಾಮಾಗ್ರಿಹಾಗೂ ಮಿಶ್ರಣದ ಗುಣಮಟ್ಟ ಖಾತರಿ ಪಡಿಸಿಕೊಳ್ಳಲಾಗಿತ್ತೇ ಸಮರ್ಪಕವಾದ ಉತ್ಪನ್ನಗಳನ್ನು ಬಳಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಅದರ ಛಾಯಾಚಿತ್ರಗಳನ್ನು ಲಗ್ತತಿಸಬೇಕು.
ಕಾಲಕಾಲಕ್ಕೆ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಲಾಗಿದೆಯೇ ಎನ್ನುವ ಬಗ್ಗೆ ವರದಿ ನೀಡಬೇಕು ಹಾಗೂ ಪ್ರತಿ ಕಾಮಗಾರಿಗೆ ಕಾರ್ಯಾದೇಶ ನೀಡಿದ ದಿನಾಂಕ ಮತ್ತು ಕಾಮಗಾರಿ ಆರಂಭದ ದಿನಾಂಕ ನಮೂದು ಮಾಡಬೇಕಿದೆ. ಸದರಿ ಕಾಮಗಾರಿಗಳಿಗೆ ಎಷ್ಟು ರನ್ನಿಂಗ್ ಬಿಲ್‍ಗಳನ್ನು ಸಲ್ಲಿಸಲಾಗಿದೆ. ಮತ್ತು ಸದರಿ ಬಿಲ್‍ಗಳನ್ನು ಪಾವತಿಸಲಾದ ದಿನಾಂಕದ ಸಂಪೂರ್ಣ ವಿವರ ನೀಡಲೇಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ.
ಯಾವುದೇ ಬಿಲ್ ಬಿಡುಗಡೆ ಮಾಡಬೇಕಾದರೆ ಮೇಲಿನ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಮಾತ್ರ ಅಂತವರಿಗೆ ಬಿಲ್ ಬಿಡುಗಡೆ ಭಾಗ್ಯ ಸಿಗಲಿದೆ. ಹೀಗಾಗಿ ಸರ್ಕಾರದ ನಡೆ ಗುತ್ತಿಗೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಮಾತನಾಡಿ, ಈ ಬೆಳವಣಿಗೆ ಅತ್ಯಂತ ದುರದೃಷ್ಟಕರ. “ನಾವು ಶುಕ್ರವಾರ ಡಿಸಿಎಂ ಅವರನ್ನು ಭೇಟಿ ಮಾಡಿ ಅನೇಕ ಗುತ್ತಿಗೆದಾರರು ಅಸಮಾಧಾನಗೊಂಡಿರುವುದರಿಂದ ಬಿಲ್‌ಗಳನ್ನು ಬಿಡುಗಡೆ ಮಾಡಲು ಮನವಿ ಮಾಡುತ್ತೇವೆ” ಎಂದು ಹೇಳಿದರು,
ಸರ್ಕಾರವು ಎಸ್‌ಐಟಿ ರಚನೆಗೆ ಚಿಂತನೆ ನಡೆಸುತ್ತಿದೆ. “ಡಿಸಿಎಂ ಎಸ್‌ಐಟಿಯನ್ನು ಪ್ರಸ್ತಾಪಿಸಿದ್ದಾರೆ ಈ ಬಗ್ಗೆ ನನಗೆ ಮಾಹಿತಿ ನೀಡಲಾಗಿದೆ. ಆದರೆ ಅದರ ಬಗ್ಗೆ ನನ್ನ ಬಳಿ ಹೆಚ್ಚಿನ ವಿವರಗಳಿಲ್ಲ ಎಂದು ತಿಳಿಸಿದ್ದಾರೆ.
ಹಿರಿಯ ಇಂಜಿನಿಯರ್ ಒಬ್ಬರು ಮಾತನಾಡಿ, 7 ಐಎಎಸ್ ಅಧಿಕಾರಿಗಳು ಎಸ್‌ಐಟಿಯಲ್ಲಿ ಇರಲಿದ್ದಾರೆ. ಈ ಅಧಿಕಾರಿಗಳು ಬೆಂಗಳೂರಿಗೆ ಸಂಬಂಧಿಸಿದಂತೆ 2019 ಮತ್ತು 2022 ರ ನಡುವೆ ನೀಡಲಾದ ಕಾಮಗಾರಿಗಳು ಮತ್ತು ಬಿಲ್‌ಗಳ ಲೆಕ್ಕಪರಿಶೋಧನೆ ಮಾಡಲಿದ್ದಾರೆಂದು ಹೇಳಿದ್ದಾರೆ.
ತಂಡದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ಉಜ್ವಲ್ ಕುಮಾರ್ ಘೋಷ್, ಮುನೀಶ್ ಮೌದ್ಗಿಲ್, ಪಿಸಿ ಜಾಫರ್ ಮತ್ತಿತರರು ಇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.