ಬೆಂಗಳೂರು:
ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಹೋದಲ್ಲೆಲ್ಲಾ ಬಿಜೆಪಿಗೆ ಗೆಲುವಾಗಲಿದೆ ಎಂದು ಈ ಮೊದಲೇ ಹೇಳಿದಂತೆ ಶಿರಾದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ವಿಜಯೇಂದ್ರ ನಮ್ಮ ಪಕ್ಷಕ್ಕೆ ದೊಡ್ಡ ಬಾಹುಬಲವಿದ್ದಂತೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಶಿರಾದಲ್ಲಿ ಪಕ್ಷ ಗೆಲ್ಲಲು ವಿಜಯೇಂದ್ರ ಕೆಲಸ ಮಾಡಿದ್ದಾರೆ. ಹಾಗೆಯೇ ಆರ್.ಆರ್.ನಗರದಲ್ಲಿಯೂ ಬಿಜೆಪಿ ಗೆದ್ದಿದೆ. ಜನರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ಬಿಜೆಪಿಯನ್ನು ಬೆಂಬಲಿಸಿದ ಎರಡೂ ಕ್ಷೇತ್ರಗಳ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕಾಂಗ್ರೆಸ್ ನಾಯಕರನ್ನು ಕುಟುಕಿದ ಶ್ರೀರಾಮುಲು, ಕಾಂಗ್ರೆಸ್ ನವರಿಗೆ ಬೇರೇನೂ ನೆಪ ಇಲ್ಲ. ಮಾತನಾಡಬಾರದ್ದನ್ನೆಲ್ಲಾ ಮಾತನಾಡಿದ್ದಾರೆ. ಉಪಚುನಾವಣೆ ಬಳಿಕ ಸರ್ಕಾರ ಅಸ್ಥಿರಗೊಳ್ಳಲಿದೆ ಎಂದಿದ್ದರು. ಮುಖ್ಯಮಂತ್ರಿ ಕುರ್ಚಿ ಮ್ಯೂಸಿಕಲ್ ಚೇರ್ ತರಹ ಎಂದಿದ್ದರು. ಉಪಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್ ನವರಿಗೆ ಉತ್ತರ ಸಿಕ್ಕಿದೆ. ಕಾಂಗ್ರೆಸ್ ಗೆದ್ದರೆ ಯಾವುದೇ ಸಮಸ್ಯೆ ಹೇಳುವುದಿಲ್ಲ. ಅದೇ ಸೋತರೆ ಇವಿಎಂ ಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ ಎಂದರು.