ಆಯುಕ್ತರ ಹೆಸರಿನಲ್ಲಿ ವಾಟ್ಸಾಪ್ ವಂಚನೆ ಯತ್ನ: ಬೆಂಗಳೂರು ಉತ್ತರ ಪಾಲಿಕೆಯಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಹೆಸರು ಹಾಗೂ ಭಾವಚಿತ್ರವನ್ನು ದುರುಪಯೋಗಪಡಿಸಿಕೊಂಡು ವಾಟ್ಸಾಪ್ ಮೂಲಕ ವಂಚನೆ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.
ಅನಾಮಧೇಯ ವ್ಯಕ್ತಿಗಳು ವಿದೇಶಿ ಮೊಬೈಲ್ ಸಂಖ್ಯೆಯಿಂದ ಸಂದೇಶಗಳನ್ನು ಕಳುಹಿಸಿ, ಆಯುಕ್ತರಂತೆ ತೋರಿಸಿಕೊಂಡು ವಿವಿಧ ವ್ಯಕ್ತಿಗಳಿಂದ ಹಣಕಾಸು ಸಹಾಯ ಕೇಳುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಅಮರೇಶ್ ಹೆಚ್. ಅವರಿಗೆ ಸಂದೇಶ ಬಂದಿರುವ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ, ಇಂತಹ ಯಾವುದೇ ಸಂದೇಶಗಳನ್ನು ನಂಬಬಾರದು ಎಂದು ನಗರ ಪಾಲಿಕೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಆಯುಕ್ತರು ಅಥವಾ ನಗರ ಪಾಲಿಕೆಯ ಯಾವುದೇ ಅಧಿಕಾರಿಗಳು ವೈಯಕ್ತಿಕವಾಗಿ ವಾಟ್ಸಾಪ್ ಮೂಲಕ ಹಣಕಾಸು ಸಹಾಯ ಕೋರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಂಬಂಧಿತ ಅನಾಮಧೇಯ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.
ಸಾರ್ವಜನಿಕರಿಗೆ ಮನವಿ:
ಅಪರಿಚಿತ ಸಂಖ್ಯೆಯಿಂದ ಬಂದಿರುವ ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸದೇ, ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
