ಟ್ರಾಫಿಕ್ ಸಿಗ್ನಲ್ಗಳಲ್ಲಿ ಮಿಸ್ಟ್ ಸ್ಪ್ರೇ ಯೋಜನೆ: ಮಳೆಗೂ ಮುನ್ನ ಬೆಂಗಳೂರಿನ ತುರ್ತು ಸಿದ್ಧತೆ
ಬೆಂಗಳೂರು: ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯ ಮುನ್ನ ನಗರದಲ್ಲಿ ತುರ್ತು ಸಿದ್ಧತೆಗಳನ್ನು ಬಲಪಡಿಸುವ ಭಾಗವಾಗಿ, ಪ್ರಮುಖ ಟ್ರಾಫಿಕ್ ಸಿಗ್ನಲ್ಗಳಲ್ಲಿ ಪಾದಚಾರಿಗಳಿಗೆ ಉಂಟಾಗುವ ತಾಪದ ಪರಿಣಾಮವನ್ನು ಕಡಿಮೆಗೊಳಿಸಲು ಮಿಸ್ಟ್ ಸ್ಪ್ರೇ ವ್ಯವಸ್ಥೆ ಅಳವಡಿಸುವ ಸಾಧ್ಯತೆ ಪರಿಶೀಲನೆಗೆ ಸೂಚನೆ ನೀಡಲಾಗಿದೆ.
ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಏಪ್ರಿಲ್ 10, 2026ರಂದು ನಡೆದ ಸಭೆಯ ನಿರ್ದೇಶನದ ಮೇರೆಗೆ, ಜಿ.ಬಿ.ಎ ವ್ಯಾಪ್ತಿಯ ಎಲ್ಲಾ ನಗರ ಪಾಲಿಕೆಗಳಲ್ಲಿ ತ್ವರಿತ ಪ್ರತಿಕ್ರಿಯಾ ತಂಡಗಳ ಮೂಲಕ ಮಾಕ್ ಡ್ರಿಲ್ಗಳನ್ನು ನಡೆಸುವಂತೆ ಎಫ್ಇಸಿಸಿ ವಿಶೇಷ ಆಯುಕ್ತರಾದ ಸುಷ್ಮಾ ಗೋಡಬೋಲೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಳೆ, ಪ್ರವಾಹ ಅಥವಾ ಹವಾಮಾನ ವೈಪರೀತ್ಯ ಸಂದರ್ಭಗಳಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಅತ್ಯಗತ್ಯವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ತರಬೇತಿ ಕಾರ್ಯಾಚರಣೆಗಳು ಅಗತ್ಯವೆಂದು ಅವರು ತಿಳಿಸಿದ್ದಾರೆ.
ಮಿಸ್ಟ್ ಸ್ಪ್ರೇ ವ್ಯವಸ್ಥೆ ಪರಿಶೀಲನೆ
ನಗರದ ಪ್ರಮುಖ ಹಾಗೂ ಹೆಚ್ಚು ಸಮಯ ವಾಹನಗಳು ನಿಲ್ಲುವ ಟ್ರಾಫಿಕ್ ಸಿಗ್ನಲ್ಗಳಲ್ಲಿ ಮಿಸ್ಟ್ ಸ್ಪ್ರೇ ವ್ಯವಸ್ಥೆ ಅಳವಡಿಸುವ ಮೂಲಕ ಪಾದಚಾರಿಗಳು ಮತ್ತು ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆ ಒದಗಿಸುವ ಉದ್ದೇಶ ಹೊಂದಲಾಗಿದೆ.

“ವರುಣಮಿತ್ರ” ಮೂಲಕ ಮಳೆಯ ಮಾಹಿತಿ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಕೇಂದ್ರ (KSNDMC) ತನ್ನ “ವರುಣಮಿತ್ರ” ಅಂತರ್ಜಾಲ ತಾಣದ ಮೂಲಕ ಮಳೆ ಹಾಗೂ ಪ್ರವಾಹದ ಮುನ್ಸೂಚನೆ, ವಲಯವಾರು ನಕ್ಷೆಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದೆ.
ತ್ವರಿತ ಪ್ರತಿಕ್ರಿಯಾ ತಂಡಗಳ ಸಿದ್ಧತೆ
ಮಳೆಗಾಲದಲ್ಲಿ ಮರಗಳು ಧರೆಗುರುಳುವುದು ಅಥವಾ ಕೊಂಬೆಗಳು ಮುರಿಯುವಂತಹ ಸಂದರ್ಭಗಳನ್ನು ಎದುರಿಸಲು ಪ್ರತಿಯೊಂದು ನಗರ ಪಾಲಿಕೆಯಲ್ಲಿ ತ್ವರಿತ ಪ್ರತಿಕ್ರಿಯಾ ತಂಡಗಳ ಪಟ್ಟಿಯನ್ನು ಸಿದ್ಧಪಡಿಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ.
ಹಾಗೆಯೇ ಅಪಾಯಕಾರಿ ಮರದ ಕೊಂಬೆಗಳನ್ನು ತಾತ್ಕಾಲಿಕವಾಗಿ ಸಂಗ್ರಹಿಸಲು ಸೂಕ್ತ ಸ್ಥಳಗಳನ್ನು ಗುರುತಿಸಿ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸ್ವಯಂಸೇವಕರು ಹಾಗೂ ವೈದ್ಯರ ಗುರುತು
ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಎನ್ಎಸ್ಎಸ್, ಎನ್ಸಿಸಿ, ಸ್ವಯಂ ಸಹಾಯಕ ಗುಂಪುಗಳು, ಸ್ಥಳೀಯ ಸ್ವಯಂಸೇವಕರು ಹಾಗೂ ವೈದ್ಯರನ್ನು ಗುರುತಿಸಿ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಈ ಸಂಬಂಧ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಆಸ್ಪತ್ರೆಗಳ ಮ್ಯಾಪಿಂಗ್ ಹಾಗೂ ಪ್ರವಾಹ ಯೋಜನೆ
ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ವೈದ್ಯಕೀಯ ನೆರವು ಒದಗಿಸಲು ಪ್ರದೇಶವಾರು ಆಸ್ಪತ್ರೆಗಳ ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ. ಜೊತೆಗೆ ಐದು ನಗರ ಪಾಲಿಕೆಗಳಿಂದ ಪ್ರವಾಹ ನಿರ್ವಹಣೆಯ ಸಮಗ್ರ ಕ್ರಿಯಾ ಯೋಜನೆಗಳನ್ನು ಏಪ್ರಿಲ್ 30ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.
ಒಟ್ಟಾರೆ ಬೆಸ್ಕಾಂ, ಬೆಂಗಳೂರು ಜಲಮಂಡಳಿ, ಸಂಚಾರಿ ಪೊಲೀಸರು, ವಿವಿಧ ಇಲಾಖೆಗಳು ಹಾಗೂ ಸ್ವಯಂಸೇವಕರ ಸಹಭಾಗಿತ್ವದಲ್ಲಿ ನಗರವನ್ನು ಯಾವುದೇ ತುರ್ತು ಪರಿಸ್ಥಿತಿಗೆ ಸಜ್ಜುಗೊಳಿಸಲು ಆಡಳಿತ ತುರ್ತು ಕ್ರಮ ಕೈಗೊಂಡಿದೆ.
