Home ಬೆಂಗಳೂರು ನಗರ ಬಿಎಸ್‌ವೈ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ; ಮೇಲ್ಮನವಿ ಹಿಂಪಡೆದ ದೂರುದಾರ

ಬಿಎಸ್‌ವೈ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ; ಮೇಲ್ಮನವಿ ಹಿಂಪಡೆದ ದೂರುದಾರ

57
0

ಬೆಂಗಳೂರು:

ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪದಡಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಖಾಸಗಿ ದೂರುಗಳನ್ನು ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೂರು ಮೇಲ್ಮನವಿಗಳನ್ನು ವಕೀಲ ಬಿ. ವಿನೋದ್‌ ಹಿಂಪಡೆದಿದ್ದಾರೆ.

ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ಅವರಿದ್ದ ಪೀಠ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ 2018ರಲ್ಲಿ ತಂದಿರುವ ತಿದ್ದುಪಡಿ ಅನುಸಾರ,ಸಾರ್ವಜನಿಕ ನೌಕರರ ವಿರುದ್ಧ ಖಾಸಗಿ ದೂರು ಸಲ್ಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿರಬೇಕು ಎಂದಿತು.

ಈ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಹಿಂಪಡೆಯುವುದಾಗಿ ವಿನೋದ್ ತಿಳಿಸಿದರು. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕೋರಿ ಹೊಸದಾಗಿ ದೂರು ನೀಡುವುದಾಗಿ ಮನವಿ ಮಾಡಿದರು. ಇದನ್ನು ನ್ಯಾಯಪೀಠ ಅಂಗೀಕರಿಸಿತು.

ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಮೊಗ್ಗದ ಕಲ್ಲಹಳ್ಳಿಯ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿ ಮಗಳಿಗೆ ನಿವೇಶನ ಮಂಜೂರು ಮಾಡಿರುವುದು, ಭದ್ರಾವತಿ ತಾಲ್ಲೂಕಿನ ಹುಣಸೆಕಟ್ಟೆಯಲ್ಲಿ ಅಕ್ರಮವಾಗಿ 69 ಎಕರೆ ಜಮೀನು ಖರೀದಿಸಿರುವುದು ಮತ್ತು ಕೋಟೆಗಂಗೂರಿನಲ್ಲಿ ಜಮೀನಿನ ಭೂಪರಿವರ್ತನೆ ಮಾಡಿಸಿ ತಮ್ಮ ಕುಟುಂಬದ ಒಡೆತನದ ಧವಳಗಿರಿ ಡೆವಲಪರ್ಸ್‌ ಕಂಪನಿ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿರುವ ಆರೋಪ ಹೊರಿಸಲಾಗಿದೆ. ಈ ಸಂಬಂಧ ವಿನೋದ್‌ ಶಿವಮೊಗ್ಗ ನ್ಯಾಯಾಲಯದಲ್ಲಿ ಮೂರು ಖಾಸಗಿ ದೂರು ದಾಖಲಿಸಿದ್ದರು.

ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ಖಾಸಗಿ ದೂರುಗಳನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ವಿನೋದ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here