Home Uncategorized ಬೀದರ್: ಮಾರ್ಚ್‌ 3ಕ್ಕೆ ಅಮಿತ್‌ ಶಾರಿಂದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ

ಬೀದರ್: ಮಾರ್ಚ್‌ 3ಕ್ಕೆ ಅಮಿತ್‌ ಶಾರಿಂದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ

18
0

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 3ರಂದು ಬೀದರ್ ಜಿಲ್ಲೆಗೆ ಭೇಟಿ ನೀಡಲಿದ್ದು, ಈ ವೇಳೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆಂದು ತಿಳಿದುಬಂದಿದೆ. ಬೀದರ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 3ರಂದು ಬೀದರ್ ಜಿಲ್ಲೆಗೆ ಭೇಟಿ ನೀಡಲಿದ್ದು, ಈ ವೇಳೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆಂದು ತಿಳಿದುಬಂದಿದೆ.

ಈ ಕುರಿತು ಪಶುಸಂಗೋಪನಾ ಸಚಿವ ಹಾಗೂ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಜಿಲ್ಲಾ ಸಂಚಾಲಕ ಪ್ರಭು ಚೌಹಾಣ್ ಅವರು ಮಾಹಿತಿ ನೀಡಿದರು.

ಮಾರ್ಚ್ 3ರ ಬೆಳಗ್ಗೆ 11 ಗಂಟೆಗೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 12ಕ್ಕೆ‌ ಬಸವೇಶ್ವರ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ” ಎಂದು ಹೇಳಿದರು.

“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ  ನಳಿನ ಕುಮಾರ ಕಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವರಾದ ಶ್ರೀರಾಮುಲು, ಹಾಲಪ್ಪಾ ಆಚಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಆಗಮಿಸುವ ನಿರೀಕ್ಷೆಯಿದೆ. ಜಿಲ್ಲೆಯ ಎಲ್ಲ ಮುಖಂಡರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರ ಮಂದಿ ಸೇರಲಿದ್ದಾರೆ” ಎಂದು ಮಾಹಿತಿ ನೀಡಿದರು.

“ರಾಜ್ಯದ ಪ್ರಮುಖ ನಾಯಕರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ʼವಿಜಯ ಸಂಕಲ್ಪ ಯಾತ್ರೆʼ ಸಂಚರಿಸಲಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಹುಮನಾಬಾದಗೆ ಆಗಮಿಸಲಿದ್ದು, ಅಲ್ಲಿ ಬೃಹತ್ ರೋಡ್ ಶೋ ಮತ್ತು ಸಂಜೆ 5 ಗಂಟೆಗೆ ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ಸಭೆ ಜರುಗಲಿದೆ ಎಂದು ತಿಳಿಸಿದರು.

“2023ರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಸರ್ವ ರೀತಿಯಿಂದ ಸನ್ನದ್ಧವಾಗಿದೆ. ಪಕ್ಷದಿಂದ ಈಗಾಗಲೆ ಬೂತ್ ಸಶಕ್ತೀಕರಣ, ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ, ಮಿಸ್ಡ್ ಕಾಲ್ ಮೂಲಕ ಸದಸ್ಯರ ನೋಂದಣಿಯಂತಹ ನಾನಾ ಕಾರ್ಯಕ್ರಮಗಳು ನಡೆದಿವೆ. ಇದರ ಭಾಗವಾಗಿ ಈಗಾಗಲೇ ಜನಸಂಕಲ್ಪ ಯಾತ್ರೆ ಯಶಸ್ವಿಯಾಗಿದ್ದು, ವಿಜಯ ಸಂಕಲ್ಪ ಯಾತ್ರೆಯೂ ಯಶಸ್ವಿಯಾಗಲಿದೆ” ಎಂದು ತಿಳಿಸಿದರು.

ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ʼವಿಜಯ ಸಂಕಲ್ಪ ಯಾತ್ರೆʼಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

“ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಸಾಕಷ್ಟು ಗಟ್ಟಿಯಾಗಿ ನೆಲೆಯೂರಿದೆ. ಕಾರ್ಯಕರ್ತರ ಸಂಖ್ಯೆ ಸಾಕಷ್ಟು ಬೆಳೆದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದು, ಅನೇಕ ಜನಪರ ಕೆಲಸಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

“ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 151 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಮತ್ತೊಮ್ಮೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಮಾಜಿ ಅಧ್ಯಕ್ಷ ಶಿವರಾಜ ಗಂದಗೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here