ವೈದ್ಯಕೀಯ ಶಿಕ್ಷಣದಲ್ಲಿ AI ಬಳಕೆಗೆ ಕರ್ನಾಟಕದಿಂದ ಮಾರ್ಗಸೂಚಿ; SOP ಮತ್ತು ನೈತಿಕ ಚೌಕಟ್ಟು ಸಿದ್ಧತೆ
ಬೆಂಗಳೂರು: ವೈದ್ಯಕೀಯ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯನ್ನು ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ ಮತ್ತು ನೈತಿಕವಾಗಿ ಜಾರಿಗೆ ತರಲು ಕರ್ನಾಟಕ ಸರ್ಕಾರ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಲು ಸಿದ್ಧತೆ ನಡೆಸುತ್ತಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರು, ರಾಜ್ಯದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ AI ಬಳಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿ, ಪ್ರೋಟೋಕಾಲ್ ಮತ್ತು Standard Operating Procedure (SOP) ಬಿಡುಗಡೆ ಮಾಡುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.
“Campus to Career – Future Ready University of Colleges” ಶೃಂಗಸಭೆಯ ಅಂಗವಾಗಿ ಉನ್ನತ ಶಿಕ್ಷಣ ಇಲಾಖೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಚರ್ಚಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
AI ಜಾಗತಿಕ ಮಟ್ಟದಲ್ಲಿ ವೇಗವಾಗಿ ವಿಸ್ತರಿಸುತ್ತಿದ್ದು, ಇದನ್ನು ವೈದ್ಯಕೀಯ ಶಿಕ್ಷಣದಲ್ಲಿ ಉತ್ತಮವಾಗಿ ಅಳವಡಿಸಿಕೊಂಡರೆ ಯುವಜನತೆಗೆ ಬಹಳ ಉಪಯೋಗವಾಗಲಿದೆ ಎಂದು ಮೊಹ್ಸಿನ್ ಹೇಳಿದರು.
AI ಬಳಕೆಯಲ್ಲಿ ನೈತಿಕತೆ, ಡೇಟಾ ಸುರಕ್ಷತೆ, ಶೈಕ್ಷಣಿಕ ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಬಳಕೆಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈಸೂರು ರಸ್ತೆಯ ಭೀಮನಕುಪ್ಪೆ ಕ್ಯಾಂಪಸ್ನಲ್ಲಿ Innovation Centre ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಾ ಕಾಲೇಜುಗಳಲ್ಲಿ AI ವಿಶೇಷ ಏಕೀಕರಣದ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸಂಬಂಧಿತ ದೂರುಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಮೈಸೂರು ಮತ್ತು ಕಲಬುರಗಿಯಲ್ಲಿ NIMHANS ಮಾದರಿಯ ಆಸ್ಪತ್ರೆಗಳು ಸ್ಥಾಪಿಸಲಾಗುತ್ತಿವೆ. ಇದರಿಂದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಉತ್ತಮ ಚಿಕಿತ್ಸೆ ಮತ್ತು ನೆರವು ದೊರೆಯಲಿದೆ ಎಂದು ಮೊಹ್ಸಿನ್ ಹೇಳಿದರು.
ಕಾರ್ಯಾಗಾರದಲ್ಲಿ JSS ಸಂಸ್ಥೆಯ ಉಪಕುಲಪತಿ ಡಾ. ಬಸವನಗೌಡಪ್ಪ, ದಯಾನಂದ ಸಾಗರ್ ವಿಶ್ವವಿದ್ಯಾಲಯದ ಡೀನ್ ಡಾ. ಪುಷ್ಪಾ ಸರ್ಕಾರ್, ತಜ್ಞರು, ಅಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
