Home Uncategorized ಬೆಂಗಳೂರಲ್ಲಿ ಫುಟ್​ಪಾತ್​ ನಿರ್ಮಾಣ ಮಾರ್ಗದಲ್ಲಿ ಗೋಲ್​ಮಾಲ್, ಹಳೇ ಟೈಲ್ಸ್, ಹಳೇ ಸಿಮೆಂಟ್​ ಬ್ಲಾಕ್​ ಹಾಕಿ...

ಬೆಂಗಳೂರಲ್ಲಿ ಫುಟ್​ಪಾತ್​ ನಿರ್ಮಾಣ ಮಾರ್ಗದಲ್ಲಿ ಗೋಲ್​ಮಾಲ್, ಹಳೇ ಟೈಲ್ಸ್, ಹಳೇ ಸಿಮೆಂಟ್​ ಬ್ಲಾಕ್​ ಹಾಕಿ ಹೊಸ ಬಿಲ್ ಎತ್ತಿದರು!

19
0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಫುಟ್​ಪಾತ್​ ನಿರ್ಮಾಣ ಹೆಸರಿನಲ್ಲಿ ಭಾರೀ ಗೋಲ್​ಮಾಲ್ ನಡೆದಿದೆ. ಹಳೇ ಟೈಲ್ಸ್, ಹಳೇ ಸಿಮೆಂಟ್​ ಬ್ಲಾಕ್​ ಹಾಕಿ ಹೊಸದಾಗಿ ಬಿಲ್​ ಮಾಡಿ ಕೋಟಿ ಕೋಟಿ ಹಣ ನುಂಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗೋವಿಂದರಾಜನಗರದ ಟೆಲಿಕಾಂ ವೃತ್ತದಿಂದ ನಾಗರಬಾವಿವರೆಗೆ ಫುಟ್​ಪಾತ್ ನವೀಕರಣ ಕಾಮಗಾರಿ ಮಾಡಲಾಗಿದ್ದು ಅಕ್ರಮ ನಡೆದಿದೆ.

ಎರಡು ವರ್ಷದ ಹಿಂದೆ ಅಳವಡಿಸಿದ್ದ ಸಿಮೆಂಟ್ ಬ್ಲಾಕ್ಸ್​ಗಳನ್ನ ಕಿತ್ತು ಹಾಕಿ ಮತ್ತದೇ ಜಾಗದಲ್ಲಿ ಮರು ಅಳವಡಿಸಿ, 35 ಕೋಟಿ ರೂಪಾಯಿ ಹೊಸ ಬಿಲ್ ಹಾಕಲಾಗಿದೆ. ಇದೇ ರೀತಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಹಳೇ ಕಲ್ಲನೇ ಮರುಜೋಡಣೆ ಮಾಡಿ ಬರೋಬ್ಬರಿ 8 ಸಾವಿರ ಕೋಟಿಯ ಕಾಮಗಾರಿ ಗುಳುಂ ಮಾಡಲಾಗ್ತಿದೆ.

ಹಳೆ ಕಾಮಗಾರಿಗೆ ಹೊಸ ಬಿಲ್

ಮುಂದಿನ ಎರಡ್ಮೂರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರ್ತಿದೆ. ಚುನಾವಣೆ ಘೋಷಣೆ ಆದ್ಮೇಲೆ ಕೋಡ್ ಆಫ್ ಕಂಡೆಕ್ಟ್ ಇರಲಿದೆ. ಹೀಗಿರುವಾಗ ಯಾವುದೇ ಫೈಲ್​ಗಳು ಮೂ ಆಗಲ್ಲ. ಎಲೆಕ್ಷನ್ ಆದ್ಮೇಲೆ ಹಾಲಿ ಶಾಸಕರು ಗೆದ್ದು ಬರ್ತಾರೋ ಇಲ್ವೋ ಅಂತಾನೂ ಗೊತ್ತಿಲ್ಲ. ಹೀಗಾಗಿ ಈಗಾಗಲೇ ನಗರೋತ್ಥಾನ ಹಾಗೂ ಬಿಬಿಎಂಪಿಯಿಂದ ಬಿಡುಗಡೆ ಆದ ಅನುದಾನವನ್ನ ಕಂಡ ಕಂಡ ಕಾಮಗಾರಿಗಳಿಗೆ ಬಳಕೆ ಮಾಡಲಾಗ್ತಿದೆ. ಅವಶ್ಯಕತೆ ಇಲ್ದೆ ಇರೋ ಕಾಮಗಾರಿಗೂ ನೂರಾರು ಕೋಟಿ ಖರ್ಚು ಮಾಡ್ತಿದ್ದಾರೆ.

ಇದನ್ನೂ ಓದಿ: ಬನ್ನೇರುಘಟ್ಟ ಇಂಜಿನಿಯರಿಂಗ್ ಹಾಸ್ಟೆಲ್​ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ, ಕಾರಣವೇನು?

ಗೋವಿಂದ ರಾಜ್ ವಿಧಾನಸಭೆ ಕ್ಷೇತ್ರದಲ್ಲಿ ಟೆಲಿಕಾಂ ಸರ್ಕಲ್ ನಿಂದ ನಾಗರಭಾವಿ ವರೆಗೂ ಫುಟ್ ಪಾತ್ ನಿರ್ಮಾಣ ಮಾಡ್ತಿದ್ದಾರೆ. ಆದ್ರೆ, ಈ ಕಾಮಗಾರಿ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಆಗಿತ್ತು. ಸಿಮೆಂಟ್ ಬ್ಲಾಕ್‌ ಗಳು ಚೆನ್ನಾಗಿ ಇವೆ. ಅಲ್ಲಿಲ್ಲ ಕಳಪೆ ಕಾಮಗಾರಿಯಿಂದ ತಗ್ಗು ಬಿದ್ದಿದೆ. ಈಗ ಇದನ್ನೆ ನೆಪ ಮಾಡಿಕೊಂಡು ಹೊಸದಾಗಿ ಫುಟ್ ಪಾತ್ ನಿರ್ಮಾಣದ ಹೆಸರಲ್ಲಿ ಈಗಾಗಲೇ ಹಾಕಿರುವ ಬ್ಲಾಕ್ಸ್ ಗಳನ್ನ ಕಿತ್ತು ಹಾಕಿ, ಅದೇ ಬ್ಲಾಕ್ಸ್ ಗಳನ್ನ ಮರು ಜೋಡಣೆ ಮಾಡಿ ಹೊಸ ಕಾಮಗಾರಿ ಅಂತಾ ತೋರಿಸುತ್ತಿದ್ದಾರೆ. ಇದಕ್ಕೆ ಬರೋಬ್ಬರಿ 35 ಕೋಟಿ ರೂಪಾಯಿ ಟೆಂಡರ್ ನೀಡಲಾಗಿದೆಯಂತೆ. ಸ್ವತಃ ಟಿವಿ9 ತಂಡ ಸ್ಥಳಕ್ಕೆ ಹೋಗಿ ನೋಡಿದಾಗ ಹಳೆ ಟೈಲ್ಸ್ ಗಳನ್ನೇ ಮರುಜೋಡಣೆ ಮಾಡ್ತಾಯಿದದ್ದು ಕಂಡು ಬಂದಿದೆ.

ಚುನಾವಣೆಗೂ ಮುನ್ನ ಕೋಟಿಗೆ ನಿಂತ ಅಧಿಕಾರಿಗಳು

ಇದು ಕೇವಲ ಗೋವಿಂದರಾಜ್ ನಗರ ವಿಧಾನಸಭಾ ಕ್ಷೇತ್ರ ಅಷ್ಟೇ ಅಲ್ಲ ಬೆಂಗಳೂರಿನ ಪ್ರತಿ ಕ್ಷೇತ್ರದಲ್ಲೂ ಚುನಾವಣೆ ಘೋಷಣೆಗೂ ಮುನ್ನ ಬಜೆಟ್ ಮಂಡನೆಗೂ ಮುನ್ನ ಈಗಾಗಲೇ ಬಿಡುಗಡೆ ಆಗಿರುವ ಅನುದಾನವನ್ನ ಇಂತಹ ಕಣ್ಣಿಗೆ ಮಣ್ಣೆರಚುವ ಕಾಮಗಾರಿಗೆ ಹಾಕಿ ಬರೋಬ್ಬರಿ 8 ಸಾವಿರ ಕೋಟಿ ದುಡ್ಡು ಗುತ್ತಿಗೆದಾರರು ಹಾಗೂ 40% ಕಮಿಷನ್ ಪಾಲಾಗ್ತಿದೆ. ಹೋಗ್ಲಿ ಹೊಸ ಕಾಮಗಾರಿ ಮಾಡ್ತಿದ್ದಾರೆ ಅಂದ್ರೆ ಅದು ಕೂಡಾ ಇಲ್ಲ, ಹಳೆಯ ಬ್ಲಾಕ್ ಹೊಸ ಬಿಲ್. ಈ ಬಗ್ಗೆ ಮುಖ್ಯ ಆಯುಕ್ತರ ಗಮನಕ್ಕೆ ತಂದ್ರೆ ಸಾಕ್ಷಿ ಕೊಡಿ ತನಿಖೆ ಮಾಡ್ತಿವಿ ಎಂದಿದ್ದಾರೆ.

ಇದು ಸಾರ್ವಜನಿಕರ ತೆರಿಗೆ ದುಡ್ಡು, ಈ ದುಡ್ಡು ಈಗ ಗುತ್ತಿಗೆದಾರರ, ರಾಜಕಾರಣಿಗಳ ಹಾಗೂ ಅಧಿಕಾರಿಗಳ ಜೇಬು ಸೇರುತ್ತಿದೆ. ಎಲೆಕ್ಷನ್ ಗೆ ನಿಧಿ ಸಂಗ್ರಹ ಮಾಡಲು ಇಂತಹ ಕಳಪೆ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಬೆಂಬಲ ನೀಡ್ತಾಯಿದ್ದಾರೆ ಅಂತಾ ಸ್ಥಳೀಯರು ಆರೋಪ ಮಾಡ್ತಿದ್ದಾರೆ. ಬೆಂಗಳೂರು ಮಂದಿ ಎಚ್ಚೆತ್ತುಕೊಳ್ಳದಿದ್ರೆ ಹಳೆ ಕಾಮಗಾರಿ ಹೊಸ ಬಿಲ್ ಜಾರಿಯಲ್ಲೇ‌ ಇರುತ್ತೆ.

ವರದಿ: ಮುತ್ತಪ್ಪ‌ ಲಮಾಣಿ, ಟಿವಿ9 ಬೆಂಗಳೂರು

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here