Home Uncategorized ಶ್ರವಣೂರಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣ ತೆರವಿಗೆ ಮುಂದಾದ ಜಿಲ್ಲಾಡಳಿತ; ಸ್ಥಳದಲ್ಲಿ ಜಮಾಯಿಸುತ್ತಿರುವ ಜನರು

ಶ್ರವಣೂರಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣ ತೆರವಿಗೆ ಮುಂದಾದ ಜಿಲ್ಲಾಡಳಿತ; ಸ್ಥಳದಲ್ಲಿ ಜಮಾಯಿಸುತ್ತಿರುವ ಜನರು

11
0

ಹಾಸನ: ಅನುಮತಿ ಪಡೆಯದೆ ಶ್ರವನೂರಿನಲ್ಲಿ ನಿರ್ಮಾಣ ಮಾಡಿರುವ ಮಹಾನ್ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ವೃತ್ತ (Sangolli Rayanna Circle)ವನ್ನು ತೆರವು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜನರು ಗ್ರಾಮದಲ್ಲಿ ಜಮಾಯಿಸುತ್ತಿದ್ದಾರೆ. ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಶ್ರವಣೂರು ಗ್ರಾಮದಲ್ಲಿ ಅನುಮತಿ ಪಡೆಯದೆ ರಾಯಣ್ಣ ಸರ್ಕಲ್ ನಿರ್ಮಿಸಲಾಗಿದ್ದು, ಕಾಗಿನೆಲೆ‌ ಮಹಾ ಸಂಸ್ಥಾನ ಕನಕ ಗುರುಪೀಠದ ಕೆ.ಆರ್​.ನಗರ ಶಾಖಾ ಮಠದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ಹಾಗೂ ಪೊಲೀಸ್ ಗೌರವ ವಂದನೆ ಸಲ್ಲಿಸಿದ ಬಳಿಕ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ಆರಂಭಗೊಳ್ಳಲಿದೆ.

ಹಾಸನ ಉಪ ವಿಭಾದ ಎಸಿ ಬಿ.ಎ.ಜಗದೀಶ್, ಎಸ್​ಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದ್ದು, ಗ್ರಾಮದಲ್ಲಿ 400 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಶ್ರವಣೂರಿಗೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದ್ದು, ಇಬ್ಬರು ಡಿವೈಎಸ್​ಪಿ, 10 ಸರ್ಕಲ್​ ಇನ್ಸ್​ಪೆಕ್ಟರ್​​, 20 ಪಿಎಸ್​ಐ, 400ಕ್ಕೂ ಹೆಚ್ಚು ಪೊಲೀಸರು, 4 ಡಿಎಆರ್​ ತುಕಡಿ ನಿಯೋಜನೆ ಮಾಡಲಾಗಿದೆ. ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ಬ್ಯಾರಿಕೇಡ್ ಹಾಕಲಾಗಿದೆ.

ಇದನ್ನೂ ಓದಿ: ಬೆಳಗಾವಿಗೆ ಬರುತ್ತಿದ್ದೇನೆ, ಸೂಕ್ತ ಭದ್ರತೆ ಕೊಡಿ; ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮಹಾ ಸಂಸದ ಧೈರ್ಯಶೀಲ ಮಾನೆ ಪತ್ರ

ಕಳೆದ 13 ದಿನದ ಹಿಂದೆ ಅನುಮತಿ ಪಡೆಯದೆ ಗ್ರಾಮಸ್ಥರು ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣ ಮಾಡಿ ರಾಯಣ್ಣನ ಭಾವಚಿತ್ರ ಇರಿಸಿದ್ದರು. ಹೀಗಾಗಿ ವೃತ್ತ ತೆರವು ಮಾಡಲು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಶಾಂತಿ ಸಭೆ ನಡೆಸಿದ್ದರು. ಅದಾಗ್ಯೂ ಗ್ರಾಮಸ್ಥರಿಂದ ವೃತ್ತ ತೆರವಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಸ್ಥಳದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಿ ಪ್ರತಿಮೆ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.​

ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣವಾಗುತ್ತಲೇ ಇದೇ ಸ್ಥಳದಲ್ಲಿ ಬೇರೆ ನಾಯಕರ ಪ್ರತಿಮೆ ಸ್ಥಾಪನೆಗೆ ಕೋರಿ ಮನವಿ ಸಲ್ಲಿಕೆ ಮಾಡಲಾಗಿದೆ. ಅಲ್ಲದೆ ಅನುಮತಿ ಪಡೆಯದೇ ಸಂಗೊಳ್ಳಿ ರಾಯಣ್ಣ ವೃತ್ತ ಮಾಡಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ವೃತ್ತ ನಿರ್ಮಾಣದ ಬಳಿಕ ವಿವಾದ ಸೃಷ್ಟಿ ಹಿನ್ನಲೆ ತೆರವಿಗೆ ಜಿಲ್ಲಾಡಳಿತ ತೀರ್ಮಾನ ಮಾಡಿದೆ.

ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ

ಸಂಗೊಳ್ಳಿ ರಾಯಣ್ಣ ವೃತ್ತ ತೆರವು ಹಿನ್ನಲೆ ಶ್ರವಣೂರು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಪೊಲೀಸರು ರಾಯಣ್ಣನ ಭಾವಚಿತ್ರ ತೆರವು ಮಾಡಲು ಮುಂದಾಗಿದ್ದು, ಇನ್ನೊಂದೆಡೆ ನಿರ್ಮಾಣ ಮಾಡಿರುವ ವೃತ್ತದ ಮೇಲೆ ಪ್ರತಿಷ್ಠಾಪನೆ ಮಾಡಲು ಸಂಗೊಳ್ಳಿರಾಯಣ್ಣ ಅಭಿಮಾನಿಗಳು ಹಾಗೂ ಗ್ರಾಮಸ್ಥರು 8 ಅಡಿ ಎತ್ತರದ ರಾಯಣ್ಣನ ಪ್ರತಿಮೆ ತಂದಿದ್ದಾರೆ. ಚೌಕಿ ತೆರವುಗೊಳಿಸಿದ ಅಣತಿ ದೂರದಲ್ಲಿರುವ ಮನೆಯ ಮುಂದೆ ಪ್ರತಿಮೆ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಖಾಸಗಿ ಜಾಗದಲ್ಲಿ ಪ್ರತಿಮೆ ನಿಲ್ಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ಅಡ್ಡಿಮಾಡಿಲ್ಲ.

ಇದನ್ನೂ ಓದಿ: ಈತ ಸನ್ನಿ ಲಿಯೋನಿ ಮಗನಾ ಅಥವಾ ಬೇರೆಯವರ ಮಗನಾ? ಜಾಗೋ ಹಿಂದೂ ಸಮಾವೇಶದಲ್ಲಿ ನಾಲಿಗೆ ಹರಿಬಿಟ್ಟ ಹಿಂದೂ ಮುಖಂಡ ಧನಂಜಯ್

ಸಂಗೊಳ್ಳಿ ರಾಯಣ್ಣನಿಗೆ ಅವಮಾನ

ಸಂಗೊಳ್ಳಿ ರಾಯಣ್ಣ ವೃತ್ತ ತೆರವಿಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಬ್ರಿಟಿಷರ ವಿರುದ್ಧ ಹೋರಾಡಿದ ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿದ್ದೀರಾ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳದಲ್ಲಿ ಜನಾಕ್ರೋಶಗೊಂಡ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here