ಗೋವಿಂದರಾಜನಗರ ವಾರ್ಡ್ನಲ್ಲಿ ಅಕ್ರಮ ಸಿಂಗಲ್ ಯೂಸ್ ಪ್ಲಾಸ್ಟಿಕ್ ಸಂಗ್ರಹಕ್ಕೆ ₹2 ಲಕ್ಷ ದಂಡ
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 126 (ಮಾರುತಿ ಮಂದಿರ ಪ್ರದೇಶ)ದಲ್ಲಿ ನಿಷೇಧಿತ ಸಿಂಗಲ್ ಯೂಸ್ ಪ್ಲಾಸ್ಟಿಕ್ನ ಅಕ್ರಮ ಸಂಗ್ರಹ ಮತ್ತು ವ್ಯಾಪಾರದ ವಿರುದ್ಧ ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ವಿಭಾಗ (BSWML) ಕಠಿಣ ಕ್ರಮ ಕೈಗೊಂಡಿದೆ.
ಪರಿಶೀಲನೆಯ ವೇಳೆ ‘ಬಾಲಾಜಿ ಪಾಲಿ ಪ್ಯಾಕ್’ ಎಂಬ ಪ್ಲಾಸ್ಟಿಕ್ ವ್ಯಾಪಾರ ಸಂಸ್ಥೆ ನಿಷೇಧಿತ ಸಿಂಗಲ್ ಯೂಸ್ ಪ್ಲಾಸ್ಟಿಕ್ ಹಾಗೂ NWPP ಚೀಲಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ₹2,00,000 (ರೂ. ಎರಡು ಲಕ್ಷ) ದಂಡ ವಿಧಿಸಲಾಗಿದೆ.
ನಾಗರಭಾವಿ ಮೇನ್ ರೋಡ್ನಲ್ಲಿ ಪ್ಲಾಸ್ಟಿಕ್ ವ್ಯಾಪಾರ ನಡೆಸಲಾಗುತ್ತಿದ್ದು, ಮೂಡಲಪಾಳ್ಯದ ಅನುಭವ್ ನಗರ 2ನೇ ಕ್ರಾಸ್ನಲ್ಲಿರುವ ನಿವಾಸವನ್ನು ಗೋದಾಮಾಗಿ ಬಳಸಲಾಗುತ್ತಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ದಾಳಿ ವೇಳೆ ಸುಮಾರು 100 ಕಿಲೋಗ್ರಾಂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಾರ್ಡ್ 126 ಕಚೇರಿಯಲ್ಲಿ ಜಮಾ ಮಾಡಲಾಗಿದ್ದು, ಸಹಾಯಕ ಮಹಾಪ್ರಬಂಧಕ (AGM) ಅವರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ಕ್ರಮವಾಗಿ ಈ ಪ್ಲಾಸ್ಟಿಕ್ ವಸ್ತುಗಳನ್ನು KCDCಗೆ ಕಳುಹಿಸಲಾಗುತ್ತದೆ.
ಇದೇ ರೀತಿಯ ಅಕ್ರಮ ಚಟುವಟಿಕೆಗಳು ಮರುಕಳಿಸದಂತೆ ಸಂಬಂಧಿಸಿದ ವ್ಯಾಪಾರಿಗಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಿರುದ್ಧದ ಕಾರ್ಯಾಚರಣೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ.
