ಕಾಂಪೋಸ್ಟ್ ಖರೀದಿ ಮತ್ತು ಉಚಿತ ವಿತರಣೆ ಯೋಜನೆಗೆ ಚಾಲನೆ: ತ್ಯಾಜ್ಯದಿಂದ ಸಂಪನ್ಮೂಲದತ್ತ ಮಹತ್ವದ ಹೆಜ್ಜೆ
ಬೆಂಗಳೂರು: ತ್ಯಾಜ್ಯ ನಿರ್ವಹಣೆಯನ್ನು ಸುಸ್ಥಿರ ರೀತಿಯಲ್ಲಿ ರೂಪಾಂತರಗೊಳಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿ ಕಾಂಪೋಸ್ಟ್ ಖರೀದಿ ಮತ್ತು ಉಚಿತ ವಿತರಣೆ ಕಾರ್ಯಕ್ರಮಕ್ಕೆ ಇಂದು ಬೆಂಗಳೂರಿನ ಜಿಬಿಎ ಕೇಂದ್ರ ಕಛೇರಿಯ ಕೌನ್ಸಿಲ್ ಕಟ್ಟಡದಲ್ಲಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ (KCDCL) ಅಧ್ಯಕ್ಷ ಎ.ಎನ್. ನಟರಾಜ್ ಗೌಡ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೌಲ್ಯಯುತ ಸಂಪನ್ಮೂಲವಾಗಿ ಪರಿವರ್ತಿಸುವುದು ಕಾಲದ ಅಗತ್ಯವಾಗಿದ್ದು, ಈ ಯೋಜನೆ ಅದಕ್ಕೆ ಉತ್ತೇಜನ ನೀಡಲಿದೆ ಎಂದು ಹೇಳಿದರು.
KCDCL ಸಹಯೋಗದೊಂದಿಗೆ Greater Bengaluru IT Companies & Industries Association (GBITCIA) ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಕಾರ್ಯಕ್ರಮದ ಭಾಗವಾಗಿ, ಮೈತ್ರಿ ಸರ್ವ ಸೇವಾ ಸಮಿತಿಯ ಮೂಲಕ ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿರುವ ಸಾವಯವ ಗೊಬ್ಬರವನ್ನು ಖರೀದಿಸಿ ರೈತರಿಗೆ ಉಚಿತವಾಗಿ ವಿತರಿಸುತ್ತಿದೆ ಎಂದು ತಿಳಿಸಿದರು.
ಈ ಉಪಕ್ರಮದಿಂದ ಪರಿಸರ ಸಂರಕ್ಷಣೆ, ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹಾಗೂ ಸುಸ್ಥಿರ ಕೃಷಿಗೆ ಉತ್ತೇಜನ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಮಿಷನ್ 2030ರ ಆಶಯದಂತೆ ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಪರಿಸರ ಸ್ನೇಹಿ ಕೃಷಿಯನ್ನು ಉತ್ತೇಜಿಸುವ ದಿಸೆಯಲ್ಲಿ ಈ ಯೋಜನೆ ಪ್ರಮುಖ ಪಾತ್ರವಹಿಸಲಿದೆ. ನಗರ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ “ಸರ್ಕ್ಯೂಲರ್ ಇಕಾನಮಿ” ಪರಿಕಲ್ಪನೆಯನ್ನು ಉತ್ತೇಜಿಸುವ ಉತ್ತಮ ಉದಾಹರಣೆಯಾಗಿದೆ.
ಈ ಸಂದರ್ಭದಲ್ಲಿ ರೈತರಿಗೆ ಸಂಕೇತವಾಗಿ ಕಾಂಪೋಸ್ಟ್ ಗೊಬ್ಬರ ವಿತರಣೆ ಮಾಡಲಾಯಿತು. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಸೇರಿದಂತೆ ಹಲವು ಜಿಲ್ಲೆಗಳ ರೈತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಬಿಐಟಿಸಿಐಎ ಅಧ್ಯಕ್ಷ ಗಿರೀಶ್, ಸಿ.ಎಸ್.ಆರ್ ಮುಖ್ಯಸ್ಥ ವಾಸುದೇವನ್, ಮೈತ್ರಿ ಸರ್ವ ಸೇವಾ ಸಮಿತಿಯ ಪದಾಧಿಕಾರಿಗಳು, ಹರೀಶ್ ಬಾಬು, ವಿಶಾಲ್ ಸೇರಿದಂತೆ ಕೈಗಾರಿಕಾ ವಲಯದ ಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
