IAS ಅಧಿಕಾರಿ ರಾಜೇಂದ್ರ ಚೋಳನ್: ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲರಾದ ಸಿಬ್ಬಂದಿಗೆ ವರ್ಗಾವಣೆ, ನಿರ್ದಾಕ್ಷಿಣ್ಯ ಕ್ರಮ
ಬೆಂಗಳೂರು: ತ್ಯಾಜ್ಯ ನಿರ್ವಹಣೆಯಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಸಮರ್ಪಕವಾಗಿ ಕೆಲಸ ನಿರ್ವಹಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ವರ್ಗಾವಣೆ ಸೇರಿದಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಘನ ತ್ಯಾಜ್ಯ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ ಹೃದಯ ಭಾಗವಾಗಿರುವ ಕೇಂದ್ರ ವಲಯದಲ್ಲಿ ಪ್ರತಿದಿನ ಕಸ ತೆರವು ಕಾರ್ಯವನ್ನು ಉನ್ನತ ಮಟ್ಟದಲ್ಲಿ ನಿರ್ವಹಿಸಬೇಕು ಎಂದು ಸೂಚಿಸಿದರು. ಈ ಹಿನ್ನೆಲೆಯಲ್ಲಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅಧಿಕಾರಿಗಳು ಪ್ರತಿದಿನ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆಯನ್ನು ಗಮನಿಸಿ “ಬ್ಲ್ಯಾಕ್ ಸ್ಪಾಟ್”ಗಳ ಪಟ್ಟಿಯನ್ನು ಸಿದ್ಧಪಡಿಸಿ ಅವುಗಳನ್ನು ತಕ್ಷಣ ತೆರವುಗೊಳಿಸುವಂತೆ ಹಾಗೂ ಅವು ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರತಿ ಬೀದಿಗೆ ನಿಯೋಜಿಸಲಾದ ಸ್ವಚ್ಛತಾ ಸಿಬ್ಬಂದಿಗಳ ಕಾರ್ಯವನ್ನು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಡಿಜಿಎಂ ಹಾಗೂ ಎಜಿಎಂಗಳಿಗೆ ನೀಡಿದರು. ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು.
ಹಿಂದಿನ ಸೂಚನೆಗಳಿದ್ದರೂ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ಲಕ್ಷ್ಯ ತೋರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ಇಂತಹವರ ವಿರುದ್ಧ ಯಾವುದೇ ರಿಯಾಯಿತಿ ಇಲ್ಲದೆ ತಕ್ಷಣ ವರ್ಗಾವಣೆ ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮನೆಮನೆಗೆ ಕಸ ಸಂಗ್ರಹಣೆ ಮಾಡುವ ಆಟೋ ಟಿಪ್ಪರ್ ವಾಹನಗಳು ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ನಾಗರಿಕರು ರಸ್ತೆ ಮೇಲೆ ಕಸ ಹಾಕದೆ, ಆಟೋ ಟಿಪ್ಪರ್ಗಳಿಗೆ ನೇರವಾಗಿ ಕಸ ನೀಡುವಂತೆ ಜಾಗೃತಿ ಮೂಡಿಸಲು ಸೂಚಿಸಿದರು.
ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಇನ್ನಷ್ಟು ಬಲಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ವಲಯ 1 ಮತ್ತು 2ರ ಜಂಟಿ ಆಯುಕ್ತರುಗಳು ಸ್ಥಳ ಪರಿಶೀಲನೆಗಳನ್ನು ನಿರಂತರವಾಗಿ ನಡೆಸಿ ತ್ಯಾಜ್ಯ ನಿರ್ವಹಣೆ ಕುರಿತು ವಿವರವಾದ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
ಸಭೆಯಲ್ಲಿ ಬೆಂ.ಘ.ತ್ಯಾ.ನಿ.ನಿ (BSWML) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ, ಕಂದಾಯ ಅಪರ ಆಯುಕ್ತ ಕೆ. ರಂಗನಾಥ್, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು, ಡಿಜಿಎಂಗಳು, ಎಜಿಎಂಗಳು, ಮಾರ್ಷಲ್ಗಳು, ಮೇಲ್ವಿಚಾರಕರು ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರು ಉಪಸ್ಥಿತರಿದ್ದರು.
