ಬೆಂಗಳೂರು: ರಾಜ್ಯದಲ್ಲಿ 15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಆದೇಶ ಮಾಡಲಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿಗಳ ಕಚೇರಿ ಭಾನುವಾರದ ಪೋಸ್ಟ್ನಲ್ಲಿ ತಿಳಿಸಿದೆ. ಮಧ್ಯಮ ತರಗತಿಗಳ ಕೌಶಲ್ಯ ಶಿಕ್ಷಣದಿಂದ ಹಿಡಿದು ಅರ್ಹ ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ವೃತ್ತಿಪರ ಉನ್ನತ ಶಿಕ್ಷಣದ ಅವಕಾಶಗಳವರೆಗಿನ ಕ್ರಮಗಳನ್ನು ಕಚೇರಿ ವಿವರಿಸಿದೆ.
6ನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (ಎಐ) ತರಬೇತಿ ನೀಡುವ ಯೋಜನೆಯನ್ನು ಸಿಎಂ ಕಚೇರಿ ಪುನರುಚ್ಚರಿಸಿದೆ. 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ಆರಂಭಿಸಲಾಗಿದೆ. ರಾಜ್ಯದಲ್ಲಿ ಒಟ್ಟು 25,498 ದ್ವಿಭಾಷಾ ಶಾಲೆಗಳನ್ನು ಪ್ರಾರಂಭಿಸಲಾಗಿದ್ದು, 250 ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನಿಧಿಯನ್ನು ಬಳಸಲಾಗುತ್ತಿದ್ದು, ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಹೊಸ ರೂಪ ನೀಡಲಾಗುತ್ತಿದೆ ಎಂದು ಸಿಎಂ ಕಚೇರಿ ತಿಳಿಸಿದೆ. ಕನ್ನಡದ ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳ ಪಾತ್ರವನ್ನು ಒತ್ತಿಹೇಳಿರುವ ಕಚೇರಿ, ಕಳೆದ ಮೂರು ವರ್ಷಗಳಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮೊದಲ ಸ್ಥಾನ ಗಳಿಸುತ್ತಿದ್ದಾರೆ ಎಂದು ಹೇಳಿದೆ.
ಅರ್ಹ ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ಮೀಸಲಾತಿ
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳಲ್ಲಿ ಶೇ.7.5ರಷ್ಟು ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ ಎಂದು ಸಿಎಂ ಕಚೇರಿ ತಿಳಿಸಿದೆ.
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಉನ್ನತ ಶಿಕ್ಷಣದಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಒದಗಿಸುವುದು ಹಾಗೂ ಅವರ ಪ್ರತಿಭೆಗೆ ಸಮಾನ ಅವಕಾಶ ಕಲ್ಪಿಸುವುದು ಇದರ ಉದ್ದೇಶ ಎಂದು ಸಿಎಂ ಕಚೇರಿ ಹೇಳಿದೆ.
ಗ್ರಾಮಾನುಭವ ಎರಡನೇ ಹಂತದಲ್ಲಿ 2,500 ವಿದ್ಯಾರ್ಥಿಗಳು
ಬೆಂಗಳೂರು ಮತ್ತು 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಒಂದು ದಿನದ ಗ್ರಾಮ ವಾಸ್ತವ್ಯ ಕಲ್ಪಿಸುವ ಗ್ರಾಮಾನುಭವ ಯೋಜನೆಯ ಎರಡನೇ ಹಂತದಲ್ಲಿ ಸರ್ಕಾರಿ ಶಾಲೆಗಳ 2,500 ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ನಡೆಸಲಾಗುವುದು ಎಂದು ಸಿಎಂ ಕಚೇರಿ ತಿಳಿಸಿದೆ. ಖಾಸಗಿ ಶಾಲೆಗಳು ತಮ್ಮ ಸ್ವಂತ ವೆಚ್ಚದಲ್ಲಿ ಈ ಕಾರ್ಯಕ್ರಮ ನಡೆಸುವಂತೆ ತಿಳಿಸಲಾಗಿದೆ ಎಂದು ಹೇಳಿದೆ.
ವಿದ್ಯಾರ್ಥಿಗಳನ್ನು ತರಗತಿಯ ಕಲಿಕೆಯಿಂದ ಹೊರತಂದು ಹಳ್ಳಿಯ ನೈಜ ಬದುಕು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣ ಜೀವನೋಪಾಯ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ರೈತರು ಹಾಗೂ ಶ್ರಮಿಕರ ದುಡಿಮೆಯ ಬಗ್ಗೆ ಗೌರವ, ಗ್ರಾಮ–ನಗರಗಳ ಪರಸ್ಪರ ಅವಲಂಬನೆಯ ಅರಿವು ಮತ್ತು ಸುಸ್ಥಿರ ಜೀವನದ ಮಹತ್ವವನ್ನು ತಿಳಿಸುವ ಗುರಿಯನ್ನೂ ಇದು ಹೊಂದಿದೆ.
