ಬೆಂಗಳೂರು: ಅರ್ನಾಬ್ ಮತ್ತು ಮುರಸು ಅವಳಿ ಚಂಡಮಾರುತಗಳಿಂದ ಆಂಧ್ರಪ್ರದೇಶದಲ್ಲಿ ಉಂಟಾದ ಭಾರಿ ಹಾನಿಯ ನಂತರ ವಿದ್ಯುತ್ ಪೂರೈಕೆ ಪುನರ್ಸ್ಥಾಪನೆ ಕಾರ್ಯಗಳಿಗೆ ಸಕಾಲಿಕ ನೆರವು ನೀಡಿದ ಕರ್ನಾಟಕ ಸರ್ಕಾರಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿಯವರ ಕಚೇರಿ ಬುಧವಾರ ತಿಳಿಸಿದೆ.
ಈ ಕುರಿತು ನಾಯ್ಡು ಅವರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
ಚಂಡಮಾರುತಗಳ ತೀವ್ರತೆಯಿಂದಾಗಿ ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಸರ್ಕಾರ ತಕ್ಷಣ ಸ್ಪಂದಿಸಿ, 68 ತಂಡಗಳಲ್ಲಿ ಒಟ್ಟು 592 ಸಿಬ್ಬಂದಿಯನ್ನು ಪುನರ್ಸ್ಥಾಪನೆ ಕಾರ್ಯಕ್ಕಾಗಿ ಆಂಧ್ರಪ್ರದೇಶಕ್ಕೆ ನಿಯೋಜಿಸಿತ್ತು.
ಆಂಧ್ರಪ್ರದೇಶ ಕೇಂದ್ರ ವಿದ್ಯುತ್ ವಿತರಣಾ ನಿಗಮದ (APCPDCL) ವ್ಯಾಪ್ತಿಯೊಂದರಲ್ಲೇ ಅರ್ನಾಬ್ ಚಂಡಮಾರುತದಿಂದ ಬಾಧಿತವಾದ 1,333 ಗ್ರಾಮಗಳು ಹಾಗೂ ಮುರಸು ಚಂಡಮಾರುತದಿಂದ ಬಾಧಿತವಾದ 1,825 ಗ್ರಾಮಗಳಿಗೆ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಬೇಕಾಗಿತ್ತು. ಅಲ್ಲದೆ, ಅರ್ನಾಬ್ ಚಂಡಮಾರುತದಲ್ಲಿ 1,852 ವಿದ್ಯುತ್ ಕಂಬಗಳು ಹಾಗೂ ಮುರಸು ಚಂಡಮಾರುತದಲ್ಲಿ 7,850 ಕಂಬಗಳು ಹಾನಿಗೊಳಗಾಗಿದ್ದವು ಅಥವಾ ನೆಲಕ್ಕುರುಳಿದ್ದವು.
APCPDCL ವ್ಯಾಪ್ತಿಯಲ್ಲಿ ಅರ್ನಾಬ್ ಚಂಡಮಾರುತದ ನಂತರ 165 ತಂಡಗಳಲ್ಲಿ 1,580 ಸಿಬ್ಬಂದಿಯನ್ನು ಮತ್ತು ಮುರಸು ಚಂಡಮಾರುತದ ನಂತರ 390 ತಂಡಗಳಲ್ಲಿ 3,292 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದಕ್ಕೆ ಪೂರಕವಾಗಿ ಕರ್ನಾಟಕದಿಂದ ಬಂದ 592 ಸಿಬ್ಬಂದಿಯನ್ನೊಳಗೊಂಡ 68 ತಂಡಗಳು ಕಠಿಣ ಪರಿಸ್ಥಿತಿಯಲ್ಲೂ ಸ್ಥಳೀಯ ಸಿಬ್ಬಂದಿಯೊಂದಿಗೆ ಕೈಜೋಡಿಸಿ, ಸಮರೋಪಾದಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ದೊಡ್ಡ ಬಲ ನೀಡಿದವು ಎಂದು ನಾಯ್ಡು ಶ್ಲಾಘಿಸಿದ್ದಾರೆ.
ಎರಡೂ ರಾಜ್ಯಗಳು ಭೌಗೋಳಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ನಿಕಟ ಬಾಂಧವ್ಯ ಹೊಂದಿದ್ದು, ವಿಪತ್ತಿನ ಸಂದರ್ಭದಲ್ಲಿ ಇಂತಹ ಪರಸ್ಪರ ಸಹಕಾರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭವಿಷ್ಯದಲ್ಲಿ ಕರ್ನಾಟಕಕ್ಕೆ ಯಾವುದೇ ನೈಸರ್ಗಿಕ ವಿಕೋಪ ಅಥವಾ ತುರ್ತು ಪರಿಸ್ಥಿತಿ ಎದುರಾದಲ್ಲಿ, ಆಂಧ್ರಪ್ರದೇಶ ಸರ್ಕಾರ ಸಿಬ್ಬಂದಿ, ಉಪಕರಣಗಳು ಮತ್ತು ಯಂತ್ರೋಪಕರಣಗಳು ಸೇರಿದಂತೆ ಎಲ್ಲ ರೀತಿಯ ನೆರವು ನೀಡಲು ಸದಾ ಸಿದ್ಧವಿರುತ್ತದೆ ಎಂದು ನಾಯ್ಡು ಭರವಸೆ ನೀಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅರ್ನಾಬ್ ಚಂಡಮಾರುತದ ನಂತರ ಆಂಧ್ರಪ್ರದೇಶದ ವಿದ್ಯುತ್ ಮರುಸ್ಥಾಪನೆಗೆ ಕರ್ನಾಟಕ ಪವರ್‌ಮನ್‌ಗಳು, ಕ್ರೇನ್ ಟ್ರಕ್‌ಗಳು ಮತ್ತು ಡ್ರಿಲ್ಲಿಂಗ್ ಯಂತ್ರಗಳನ್ನು ಕಳುಹಿಸಿತ್ತು.
