‘ಆತ್ಮಸಾಕ್ಷಿ ವಿಚಾರಕ್ಕೆ ಡಿಕೆ ಶಿವಕುಮಾರ್ ಅವರನ್ನೇ ಕೇಳಿ’; ಬೆಂಗಳೂರು ಖಾತೆ ವಿವಾದದ ಬಗ್ಗೆ ನಗುತ್ತಲೇ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ
ಬೆಂಗಳೂರು, ಜೂನ್ 8: ಬೆಂಗಳೂರು ಅಭಿವೃದ್ಧಿ ಖಾತೆ ಸಿಗದೇ ಬೇಸರಗೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರು ನೀಡಿದ ಉತ್ತರ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. “ಆತ್ಮಸಾಕ್ಷಿ ವಿಚಾರಕ್ಕೆ ಡಿಕೆ ಶಿವಕುಮಾರ್ ಅವರನ್ನೇ ಕೇಳಿ” ಎಂದು ನಗುತ್ತಲೇ ಪ್ರತಿಕ್ರಿಯಿಸಿದ ರೆಡ್ಡಿ, ಖಾತೆ ಹಂಚಿಕೆ ಕುರಿತ ಕುತೂಹಲಕ್ಕೆ ಮತ್ತಷ್ಟು ಇಂಧನ ಸುರಿದಿದ್ದಾರೆ.
ನೀರಾವರಿ ಇಲಾಖೆಯ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಆತ್ಮಸಾಕ್ಷಿ ಏನಾದರೂ ಸಮಸ್ಯೆ ಮಾಡಲಿಲ್ಲವೇ?” ಎಂಬ ಪ್ರಶ್ನೆಗೆ ನಗುತ್ತಾ, “ನೀವು ಶಿವಕುಮಾರ್ ಅವರನ್ನ ಕೇಳಬೇಕು” ಎಂದು ಉತ್ತರಿಸಿದರು.
‘ನಾನು ಬೆಂಗಳೂರು ಖಾತೆ ಕೇಳಿರಲಿಲ್ಲ’
ಬೆಂಗಳೂರು ಅಭಿವೃದ್ಧಿ ಖಾತೆ ಸಿಗದ ವಿಚಾರವಾಗಿ ಪ್ರಶ್ನಿಸಿದಾಗ ರಾಮಲಿಂಗಾ ರೆಡ್ಡಿ, ತಾವು ಯಾವುದೇ ಖಾತೆಗಾಗಿ ಲಾಬಿ ಮಾಡಿಲ್ಲ ಎಂದು ಪುನರುಚ್ಚರಿಸಿದರು.
“ನಾನು ಬೆಂಗಳೂರು ಖಾತೆ ಕೇಳಿರಲಿಲ್ಲ. ಅವರೇ ಕೊಡ್ತೀನಿ ಅಂದಿದ್ರು. ನಂತರ ವಾಪಸ್ ತಗೊಂಡ್ರು. ಮತ್ತೆ ಕೊಡ್ತೀನಿ ಅಂದ್ರು. ಆಗಲೂ ನಾನು ಬೇಡ ಅಂದೆ,” ಎಂದು ಹೇಳಿದರು.
ಮಾತು ಕೊಟ್ಟಿದ್ದರಲ್ಲವೇ ಎಂಬ ಪ್ರಶ್ನೆಗೆ “ಅದೆಲ್ಲಾ ನೋ ಕಾಮೆಂಟ್ಸ್” ಎಂದು ಪ್ರತಿಕ್ರಿಯಿಸಿದರು.
‘ಇದು ಮುಗಿದ ಕಥೆ’
ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಿದರೆ ಸ್ವೀಕರಿಸುತ್ತೀರಾ ಎಂಬ ಪ್ರಶ್ನೆಗೆ ರೆಡ್ಡಿ ಸ್ಪಷ್ಟವಾಗಿ ನಿರಾಕರಿಸಿದರು.
“ಬೇಡಪ್ಪಾ ಬೇಡ. ಬೇರೆ ಮಂತ್ರಿಗಳು ಇದ್ದಾರೆ. ಇನ್ನೂ ಹಲವರು ಸಚಿವರಾಗ್ತಾರೆ. ಬೆಂಗಳೂರಿಗೆ ನಾನು ಕೇಳೋಕೆ ಹೋಗೋದಿಲ್ಲ. ಅದು ಮುಗಿದ ಕಥೆ,” ಎಂದರು.
‘37 ವರ್ಷದ ಅನುಭವ ಇದೆ’
ನೀರಾವರಿ ಇಲಾಖೆ ಹೊಸದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು 37 ವರ್ಷಗಳಿಂದ ಶಾಸಕನಾಗಿದ್ದೇನೆ. ಇದು ನನ್ನ ಆರನೇ ಸಚಿವ ಸಂಪುಟ. ಯಾವ ಇಲಾಖೆಯಾದರೂ ಮೊದಲಿಗೆ ಹೊಸದಾಗಿರುತ್ತದೆ. ಎರಡು-ಮೂರು ತಿಂಗಳಲ್ಲಿ ಎಲ್ಲವೂ ಅರ್ಥವಾಗುತ್ತದೆ,” ಎಂದರು.
ಅಂತರರಾಜ್ಯ ಜಲ ವಿವಾದಗಳು ಮತ್ತು ಕಾನೂನು ಹೋರಾಟಗಳ ಬಗ್ಗೆ ಕೇಳಿದಾಗ, ಇಲಾಖೆಯಲ್ಲಿ ಪರಿಣಿತ ಸಲಹೆಗಾರರು ಮತ್ತು ಹಿರಿಯ ಕಾನೂನು ತಜ್ಞರು ಇದ್ದಾರೆ ಎಂದು ಹೇಳಿದರು.
“ನಾಗಮೋಹನ್ ದಾಸ್ ಅವರಂತಹ ಸಲಹೆಗಾರರು ಇದ್ದಾರೆ. ಅಗತ್ಯ ಬಂದಾಗ ದೇಶದ ದೊಡ್ಡ ವಕೀಲರು ಪ್ರಕರಣಗಳನ್ನು ನೋಡುತ್ತಾರೆ. ನಾನೇ ವಾದ ಮಾಡಬೇಕಾ?” ಎಂದು ಪ್ರಶ್ನಿಸಿದರು.
ಬಾಕಿ ಬಿಲ್ಗಳ ಬಗ್ಗೆ ಶ್ವೇತಪತ್ರ
ನೀರಾವರಿ ಇಲಾಖೆಯಡಿ ಬಾಕಿ ಇರುವ ಗುತ್ತಿಗೆದಾರರ ಬಿಲ್ಗಳ ಬಗ್ಗೆ ಮಾತನಾಡಿದ ಅವರು, ಇಲಾಖೆಯ ನಾಲ್ಕು ನಿಗಮಗಳ ಸಭೆ ಬಳಿಕ ಶೀಘ್ರದಲ್ಲೇ ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು.
“ಮಂಗಳವಾರ ಮತ್ತು ಶುಕ್ರವಾರ ಸಭೆಗಳು ಮುಗಿದ ನಂತರ ಎಲ್ಲ ವಿವರಗಳನ್ನು ಸಾರ್ವಜನಿಕರ ಮುಂದೆ ಇಡುತ್ತೇನೆ,” ಎಂದರು.
‘ನಾನು ಯಾವ ಖಾತೆಯಲ್ಲೂ ಕೆಟ್ಟ ಹೆಸರು ತಂದಿಲ್ಲ’
ತಮ್ಮ ಸಚಿವ ಸಂಪುಟದ ಅನುಭವವನ್ನು ನೆನಪಿಸಿಕೊಂಡ ರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಇಲಾಖೆಯಲ್ಲಿ ಮಾಡಿದ ಕೆಲಸಗಳನ್ನು ಉಲ್ಲೇಖಿಸಿದರು.
“ನಾನು ಯಾವತ್ತೂ ಸಚಿವ ಸ್ಥಾನಕ್ಕಾಗಿ ಅಥವಾ ಖಾತೆಗಾಗಿ ಲಾಬಿ ಮಾಡಿಲ್ಲ. ವೀರಪ್ಪ ಮೊಯ್ಲಿ ಅವರ ಕಾಲದಿಂದ ಯಾವ ಇಲಾಖೆ ಕೊಟ್ಟರೂ ಕೆಲಸ ಮಾಡಿದ್ದೇನೆ. ಯಾವ ಇಲಾಖೆಯಲ್ಲೂ ಕೆಟ್ಟ ಹೆಸರು ತೆಗೆದುಕೊಂಡಿಲ್ಲ,” ಎಂದು ಹೇಳಿದರು.
ಸಾರಿಗೆ ಇಲಾಖೆಯಲ್ಲಿ ತಮ್ಮ ಅವಧಿಯಲ್ಲಿ 7,800 ಹೊಸ ಬಸ್ಗಳನ್ನು ಸೇರ್ಪಡೆ ಮಾಡಲಾಗಿದ್ದು, ಸುಮಾರು 10 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಡಿ ಕೋಟ್ಯಂತರ ಪ್ರಯಾಣಿಕರು ಪ್ರಯೋಜನ ಪಡೆದಿದ್ದಾರೆ ಎಂದು ವಿವರಿಸಿದರು.
‘ರೈತರ ಹಿತವೇ ಮುಖ್ಯ’
ನೀರಾವರಿ ಇಲಾಖೆ ರೈತರಿಗೆ ನೇರವಾಗಿ ಸಂಬಂಧಿಸಿದ ಖಾತೆಯಾಗಿದ್ದು, ಹಿಂದಿನ ಸರ್ಕಾರಗಳು ಆರಂಭಿಸಿರುವ ಯೋಜನೆಗಳನ್ನೂ ಪೂರ್ಣಗೊಳಿಸುವುದಾಗಿ ರೆಡ್ಡಿ ಹೇಳಿದರು.
“ಈ ಸರ್ಕಾರ ಅಥವಾ ಹಿಂದಿನ ಬಿಜೆಪಿ ಸರ್ಕಾರ ಆರಂಭಿಸಿರುವ ಯೋಜನೆಗಳಾಗಿರಲಿ, ಎಲ್ಲವನ್ನೂ ಪೂರ್ಣಗೊಳಿಸಬೇಕು. ರೈತರ ಹಿತದೃಷ್ಟಿಯಿಂದ ಕೆಲಸ ಮಾಡುವುದು ನಮ್ಮ ಕರ್ತವ್ಯ,” ಎಂದು ಹೇಳಿದರು.
ಖಾತೆ ಹಂಚಿಕೆ ವಿವಾದದ ಬಗ್ಗೆ ನೇರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದರೂ, “ಆತ್ಮಸಾಕ್ಷಿ ವಿಚಾರಕ್ಕೆ ಡಿಕೆ ಶಿವಕುಮಾರ್ ಅವರನ್ನ ಕೇಳಿ” ಎಂಬ ರಾಮಲಿಂಗಾ ರೆಡ್ಡಿ ಅವರ ಹೇಳಿಕೆ ಕಾಂಗ್ರೆಸ್ ಸರ್ಕಾರದ ಒಳರಾಜಕೀಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
