3,991 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಜೂನ್ 10ರಿಂದ ಅರ್ಜಿ ಸ್ವೀಕಾರ; ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಕೆಇಎ ಸಲಹೆ
ಬೆಂಗಳೂರು, ಜೂನ್ 8: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು 3,991 ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಜೂನ್ 10, 2026ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ, ಐಎಎಸ್ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಒಳಮೀಸಲಾತಿ ಪ್ರಮಾಣಪತ್ರ ಕಡ್ಡಾಯ
ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ತಮ್ಮ ಒಳಮೀಸಲಾತಿಗೆ ಅನುಗುಣವಾಗಿ ಎಸ್ಸಿ-ಎ, ಎಸ್ಸಿ-ಬಿ, ಹಾಗೂ ಎಸ್ಸಿ-ಸಿ ವರ್ಗಗಳ ಜಾತಿ ಪ್ರಮಾಣಪತ್ರದ RD ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.
ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ, ಮಾಜಿ ಸೈನಿಕ, ವಿಶೇಷ ವರ್ಗ ಹಾಗೂ ಇತರೆ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಅಗತ್ಯ ನಮೂನೆಗಳಲ್ಲಿ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗ್ರಾಮೀಣ ಕೋಟಾವನ್ನು ಕ್ಲೇಮ್ ಮಾಡಲು ಬಯಸಿದರೆ ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಈ ಕೆಳಕಂಡ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು:
- ಆಧಾರ್ ಕಾರ್ಡ್
- ವಿದ್ಯಾರ್ಹತಾ ಪ್ರಮಾಣಪತ್ರಗಳು ಮತ್ತು ಅಂಕಪಟ್ಟಿಗಳು
- ಎಸ್ಎಸ್ಎಲ್ಸಿ ಅಂಕಪಟ್ಟಿ
- ಜಾತಿ ಪ್ರಮಾಣಪತ್ರ (ಅನ್ವಯವಾಗುವವರಿಗೆ)
- ಆದಾಯ ಪ್ರಮಾಣಪತ್ರ
- ಗ್ರಾಮೀಣ ಕೋಟಾ ಪ್ರಮಾಣಪತ್ರ
- ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ
- ಮಾಜಿ ಸೈನಿಕರ ಪ್ರಮಾಣಪತ್ರ (ಅನ್ವಯವಾಗುವವರಿಗೆ)
- ಅಂಗವಿಕಲರ ಪ್ರಮಾಣಪತ್ರ (ಅನ್ವಯವಾಗುವವರಿಗೆ)
- ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ (ಅನ್ವಯವಾಗುವವರಿಗೆ)
ಅರ್ಜಿಯೊಂದಿಗೆ ಅಪ್ಲೋಡ್ ಮಾಡುವ ಭಾವಚಿತ್ರ ಮತ್ತು ಸಹಿಯ ಫೈಲ್ ಗಾತ್ರ 50 ಕೆಬಿ ಒಳಗಿರಬೇಕು ಎಂದು ಕೆಇಎ ಸೂಚಿಸಿದೆ.
ಒಟ್ಟು 3,991 ಹುದ್ದೆಗಳಲ್ಲಿ:
- 596 ಹುದ್ದೆಗಳು ಹೈದರಾಬಾದ್-ಕರ್ನಾಟಕ (HK) ಮೀಸಲಾತಿ ವ್ಯಾಪ್ತಿಯಲ್ಲಿ
- 3,395 ಹುದ್ದೆಗಳು ನಾನ್-HK ಕೋಟಾದಡಿ, ಭರ್ತಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 3, 2026 ಕೊನೆಯ ದಿನವಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ಮೀಸಲಾತಿ ಮತ್ತು ಪ್ರಮಾಣಪತ್ರಗಳ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಕೆಇಎ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್ಸೈಟ್ ಅನ್ನು ಸಂಪರ್ಕಿಸಬಹುದು.
