ಕೃಷಿ ಅಧಿಕಾರಿ ನೇಮಕಾತಿ ಗೊಂದಲಕ್ಕೆ ಕಾನೂನುಬದ್ಧ ಪರಿಹಾರ: ಜಿಕೆವಿಕೆ ವಿದ್ಯಾರ್ಥಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಬೆಂಗಳೂರು: ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ನಿಯಮಗಳಲ್ಲಿ ಉಂಟಾಗಿರುವ ಗೊಂದಲವನ್ನು ಕಾನೂನುಬದ್ಧವಾಗಿ ಬಗೆಹರಿಸಿ ಕೃಷಿ ಪದವೀಧರರ ಉದ್ಯೋಗಾವಕಾಶಗಳಿಗೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಕೆವಿಕೆ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ನಗರದಲ್ಲಿ ನಡೆದ 14ನೇ ಬೆಂಗಳೂರು ಇಂಡಿಯಾ ನ್ಯಾನೋ 2026 ಸಮ್ಮೇಳನದ ಸ್ಥಳದ ಸಮೀಪ ಮನವಿ ಸಲ್ಲಿಸಲು ಆಗಮಿಸಿದ್ದ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಗಮನಿಸಿದ ಮುಖ್ಯಮಂತ್ರಿ, ಅವರನ್ನು ಹತ್ತಿರ ಕರೆದು ಸಮಸ್ಯೆಯನ್ನು ಸ್ವತಃ ಆಲಿಸಿದರು.
ವಿದ್ಯಾರ್ಥಿಗಳನ್ನು ಮರದ ನೆರಳಿನಲ್ಲಿ ಕುಳ್ಳಿರಿಸಿ, ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ ಹಂತದಲ್ಲಿ ಸಮಸ್ಯೆ ಉಂಟಾಗಿದೆ ಎಂಬುದರ ಕುರಿತು ವಿವರವಾಗಿ ಮಾಹಿತಿ ಪಡೆದು ಅವರ ಅಹವಾಲುಗಳನ್ನು ಆಲಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಾತಿ ನಿಯಮಗಳಿಗೆ ಮಾಡಲಾದ ತಿದ್ದುಪಡಿಗಳಿಂದ ಈ ಸಮಸ್ಯೆ ಉಂಟಾಗಿದೆ. ಕೃಷಿ ಪದವೀಧರರಿಗೆ ಯಾವುದೇ ಅನ್ಯಾಯವಾಗದಂತೆ ಕಾನೂನುಬದ್ಧವಾಗಿ ಸಮಸ್ಯೆ ಬಗೆಹರಿಸಲು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ ಅವರು, ಸರ್ಕಾರ ನಿರುದ್ಯೋಗ ನಿವಾರಣೆಗೆ ಬದ್ಧವಾಗಿದ್ದು, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
“ಪ್ರತಿಭಟನೆ ಕೈಬಿಡಿ. ನಮ್ಮ ಸರ್ಕಾರ ನಿರುದ್ಯೋಗ ನಿರ್ಮೂಲನೆಗೆ ಆದ್ಯತೆ ನೀಡಿದ್ದು, ನಿಮಗೆ ಯಾವುದೇ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ,” ಎಂದು ಮುಖ್ಯಮಂತ್ರಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇತ್ತೀಚೆಗೆ ರಾಜ್ಯ ಸರ್ಕಾರ 900ಕ್ಕೂ ಹೆಚ್ಚು ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗೆ ಬಿ.ಇ. ಹಾಗೂ ಬಿ.ಟೆಕ್ (ಬಯೋಕೆಮಿಸ್ಟ್ರಿ) ಪದವೀಧರರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಕೃಷಿ ಪದವೀಧರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಉಪಸ್ಥಿತರಿದ್ದರು.
