ಅಕ್ಟೋಬರ್ 10ರಿಂದ ಬಸವ ನಗರ ಮುಖ್ಯರಸ್ತೆ 20 ದಿನ ಬಂದ್: ಬಿಎಂಟಿಸಿ, ಶಾಲಾ ಬಸ್ ಹಾಗೂ ವಾಹನಗಳಿಗೆ ಪರ್ಯಾಯ ಮಾರ್ಗ
ಬೆಂಗಳೂರು: ಎಚ್ಎಎಲ್–ಮಾರತಹಳ್ಳಿ ಕಡೆಯಿಂದ ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಮತ್ತು ಬಿಇಎಂಎಲ್ ಕಡೆಗೆ ಸಂಚರಿಸುವ ಬಿಎಂಟಿಸಿ ಬಸ್ಗಳು, ಶಾಲಾ ಬಸ್ಗಳು ಹಾಗೂ ಸರಕು ವಾಹನಗಳು ಪರ್ಯಾಯ ಮಾರ್ಗ ಬಳಸಬೇಕಾಗಿದೆ. ವಿಭೂತಿಪುರ ಕೆರೆಯ ಮಳೆನೀರು ಕಾಲುವೆ ಸೇತುವೆ ನಿರ್ಮಾಣಕ್ಕಾಗಿ ಬಸವ ನಗರ ಮುಖ್ಯರಸ್ತೆಯಲ್ಲಿ ಅಕ್ಟೋಬರ್ 10, 2026ರಿಂದ 20 ದಿನ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಎಚ್ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಈ ಕಾಮಗಾರಿ ನಡೆಸುತ್ತಿದೆ. 20 ದಿನಗಳ ಅವಧಿಯಲ್ಲಿ ಬಸವ ನಗರ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಎರಡೂ ದಿಕ್ಕುಗಳಿಗೆ ಪ್ರತ್ಯೇಕ ನಿರ್ಬಂಧ ಮತ್ತು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
Bengaluru Traffic Police traffic advisory
ಯಾವ ವಾಹನಗಳಿಗೆ ನಿರ್ಬಂಧ?
ವಿಜ್ಞಾನ ನಗರ–ಕಗ್ಗದಾಸಪುರ ಕಡೆಗೆ: ಮಾರತಹಳ್ಳಿ, ಎಚ್ಎಎಲ್, ವಿಭೂತಿಪುರ ಮತ್ತು ಬಸವ ನಗರದಿಂದ ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಮತ್ತು ಬಿಇಎಂಎಲ್ ಕಡೆಗೆ ತೆರಳುವ ಭಾರಿ ಸರಕು ವಾಹನಗಳು (ಎಚ್ಜಿವಿ), ಬಿಎಂಟಿಸಿ ಬಸ್ಗಳು, ಶಾಲಾ ಬಸ್ಗಳು ಹಾಗೂ ಲಘು ಸರಕು ವಾಹನಗಳ (ಎಲ್ಜಿವಿ) ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಎಚ್ಎಎಲ್–ಮಾರತಹಳ್ಳಿ ಕಡೆಗೆ: ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಮತ್ತು ಬಿಇಎಂಎಲ್ನಿಂದ ವಿಭೂತಿಪುರ, ಬಸವ ನಗರ, ಎಚ್ಎಎಲ್ ಮತ್ತು ಮಾರತಹಳ್ಳಿ ಕಡೆಗೆ ತೆರಳುವ ಎಲ್ಲ ರೀತಿಯ ವಾಹನಗಳಿಗೆ ನಿರ್ಬಂಧ ಅನ್ವಯಿಸುತ್ತದೆ.
ವಿಜ್ಞಾನ ನಗರ, ಕಗ್ಗದಾಸಪುರ ಮತ್ತು ಬಿಇಎಂಎಲ್ ಕಡೆಗೆ ಪರ್ಯಾಯ ಮಾರ್ಗ
ಮಾರತಹಳ್ಳಿ, ಎಚ್ಎಎಲ್, ವಿಭೂತಿಪುರ ಮತ್ತು ಬಸವ ನಗರದಿಂದ ಬರುವ ಭಾರಿ ಸರಕು ವಾಹನಗಳು, ಬಿಎಂಟಿಸಿ ಬಸ್ಗಳು, ಶಾಲಾ ಬಸ್ಗಳು ಮತ್ತು ಲಘು ಸರಕು ವಾಹನಗಳು ಈ ಮಾರ್ಗ ಬಳಸಬೇಕು:
ಹಳೆಯ ವಿಮಾನ ನಿಲ್ದಾಣ ಮುಖ್ಯರಸ್ತೆ → ಸುರಂಜನ್ ದಾಸ್ ರಸ್ತೆ ಸೇತುವೆ ಜಂಕ್ಷನ್ ಬಳಿ ಬಲ ತಿರುವು → ಸುರಂಜನ್ ದಾಸ್ ರಸ್ತೆ → ಬಿಇಎಂಎಲ್ ಜಂಕ್ಷನ್ → ಬಲ ತಿರುವು ಪಡೆದು ಮಲ್ಲೇಶಪಾಳ್ಯ ಮುಖ್ಯರಸ್ತೆ → ವಿಜ್ಞಾನ ನಗರ / ಕಗ್ಗದಾಸಪುರ.
ಮಲ್ಲೇಶಪಾಳ್ಯ ಮತ್ತು ಬಿಇಎಂಎಲ್ ಕಡೆಗೆ ತೆರಳುವ ವಾಹನಗಳಿಗೂ ಪೊಲೀಸ್ ಸಲಹೆಯಲ್ಲಿ ಇದೇ ಪರ್ಯಾಯ ಮಾರ್ಗ ಸೂಚಿಸಲಾಗಿದೆ.
ವಿಭೂತಿಪುರ, ಬಸವ ನಗರ, ಎಚ್ಎಎಲ್ ಮತ್ತು ಮಾರತಹಳ್ಳಿ ಕಡೆಗೆ ಮರಳುವ ಮಾರ್ಗ
ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಮತ್ತು ಬಿಇಎಂಎಲ್ನಿಂದ ಬರುವ ಎಲ್ಲಾ ರೀತಿಯ ವಾಹನಗಳು ಈ ಮಾರ್ಗ ಅನುಸರಿಸಬೇಕು:
ಮಲ್ಲೇಶಪಾಳ್ಯ ಮುಖ್ಯರಸ್ತೆ → ಬಿಇಎಂಎಲ್ ಜಂಕ್ಷನ್ → ಎಡ ತಿರುವು ಪಡೆದು ಸುರಂಜನ್ ದಾಸ್ ರಸ್ತೆ → ಸುರಂಜನ್ ದಾಸ್ ಜಂಕ್ಷನ್ → ಎಡ ತಿರುವು ಪಡೆದು ಹಳೆಯ ವಿಮಾನ ನಿಲ್ದಾಣ ರಸ್ತೆ → ವಿಭೂತಿಪುರ / ಬಸವ ನಗರ / ಎಚ್ಎಎಲ್ / ಮಾರತಹಳ್ಳಿ.
ಸಂಚಾರ ಪೊಲೀಸರ ಅಧಿಕೃತ ನಕ್ಷೆ
ಮುಖ್ಯಚಿತ್ರದಲ್ಲಿರುವ ನಕ್ಷೆಯಲ್ಲಿ ಬ್ಯಾರಿಕೇಡ್ ಸ್ಥಳ, ನಿರ್ಬಂಧಿತ ಸಂಚಾರ ಮತ್ತು ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ. ಬೆಂಗಳೂರು ಸಂಚಾರ ಪೊಲೀಸರು ಹಂಚಿಕೊಂಡ ಮೂಲ ನಕ್ಷೆಗಳನ್ನು ಇಲ್ಲಿ ನೋಡಿ. ತಾತ್ಕಾಲಿಕ ಸಂಚಾರ ವ್ಯವಸ್ಥೆಗೆ ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
