ಬೆಳಗಾವಿ:
ಬೆಳಗಾವಿಯ ಸಮರ್ಥ ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಮಾರ್ಕೆಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನಿಪ್ಪಾಣಿ ನಿವಾಸಿ ಯಾಸೀನ್ ಹಾಶಿಮ್ ಶೇಖ್ (23) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಆಗಸ್ಟ್ 20 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸಮರ್ಥನಗರದ ಮನೆಗೆ ನುಗ್ಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಬಾಳುವ ವಸ್ತುಗಳನ್ನು ದೋಚಿದ್ದ ಎನ್ನಲಾಗಿದೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ 231 ಗ್ರಾಂ ಚಿನ್ನಾಭರಣ ಮತ್ತು 140 ಗ್ರಾಂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಪ್ರಕರಣ ಭೇದಿಸಿದ ಮಾರ್ಕೆಟ್ ಪೊಲೀಸ್ ತಂಡವನ್ನು ಪೊಲೀಸ್ ಆಯುಕ್ತ ಎಸ್ ಎನ್ ಸಿದ್ರಾಮಪ್ಪ ಅಭಿನಂದಿಸಿದ್ದಾರೆ.