ಬೆಂಗಳೂರು: ಅಪಾರ್ಟ್‍ಮೆಂಟ್‍ವೊಂದರ ಈಜುಕೊಳದಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾರ್ಟ್‍ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ 7 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವೈಟ್‍ಫೀಲ್ಡ್ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕಿಯ ತಂದೆ ರಾಜೇಶ್‍ಕುಮಾರ್ ಎಂಬುವರು ನೀಡಿದ ದೂರು ಆಧರಿಸಿ, ಅಪಾರ್ಟ್‍ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ದೇಬಾಶಿಸ್ ಸಿನ್ಹಾ, ಸಿಬ್ಬಂದಿಯಾದ ಜಾವೇದ್ ಸಫೀಕ್, ಸಂತೋಷ್ ಮಹಾರಾಣಾ, ಬಿಕಾಸ್ ಕುಮಾರ್, ಭಕ್ತ ಚರಣ್ ಪ್ರಧಾನ್, ಸುರೇಶ್, ಗೋವಿಂದ್ ಮಂಡಲ್ ಎಂಬುವರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಅಪಾರ್ಟ್‍ಮೆಂಟ್‍ವೊಂದರಲ್ಲಿ 2023ರ ಡಿ.28ರಂದು ಮಾನ್ಯ(9) ಎಂಬ ಬಾಲಕಿಯು ಸ್ವಿಮ್ಮಿಂಗ್ ಪೂಲ್‍ಗೆ ಇಳಿದಾಗ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಳು. ಬಾಲಕಿ ಜೋರಾಗಿ ಕಿರುಚಿಕೊಂಡಾಗ ಸ್ಥಳಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಈ ಬಗ್ಗೆ ಬಾಲಕಿಯ ಪೋಷಕರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.