ವಿಧಾನಸೌಧದ ‘ಫ್ರೀಡಂ ಹಬ್ಬ’ ಬಳಿಕ ಸುಮಾರು 20 ಟನ್ ತ್ಯಾಜ್ಯ ತೆರವು
ಬೆಂಗಳೂರು, ಆಗಸ್ಟ್ 16: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ‘ಫ್ರೀಡಂ ಹಬ್ಬ’ ಕಾರ್ಯಕ್ರಮದ ಬಳಿಕ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 20 ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ ತಿಳಿಸಿದ್ದಾರೆ.
ಆಗಸ್ಟ್ 15ರ ಕಾರ್ಯಕ್ರಮಕ್ಕೆ ಸಾವಿರಾರು ಜನರು ವಿಧಾನಸೌಧಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಿ ತೆರವು ಮಾಡಲು ಪಾಲಿಕೆಯ ವತಿಯಿಂದ ಡಿಜಿಎಂ ಹಾಗೂ ಶಿವಾಜಿನಗರ ಎಜಿಎಂ ನೇತೃತ್ವದಲ್ಲಿ 35 ಪೌರಕಾರ್ಮಿಕರು ಮತ್ತು 10 ಆಟೋ ಟಿಪ್ಪರ್ಗಳನ್ನು ನಿಯೋಜಿಸಲಾಗಿತ್ತು.
ಶನಿವಾರ ಪ್ರತಿ ಟಿಪ್ಪರ್ ತಲಾ ನಾಲ್ಕು ಸುತ್ತು ಸಂಚರಿಸಿದ್ದು, ತಡರಾತ್ರಿವರೆಗೆ ತ್ಯಾಜ್ಯ ಸ್ವಚ್ಛತೆ ಮತ್ತು ತೆರವು ಕಾರ್ಯ ನಡೆಸಲಾಗಿದೆ. ಭಾನುವಾರ ಬೆಳಗ್ಗೆಯೂ ತಂಡ ಕಾರ್ಯನಿರ್ವಹಿಸಿದ್ದು, ಶನಿವಾರ ಇಡೀ ದಿನ ಹಾಗೂ ಭಾನುವಾರ ಬೆಳಗ್ಗೆ ಸೇರಿ ಒಟ್ಟು ಸುಮಾರು 20 ಟನ್ ತ್ಯಾಜ್ಯ ತೆರವು ಮಾಡಲಾಗಿದೆ ಎಂದು ಜಗದೀಶ್ ತಿಳಿಸಿದ್ದಾರೆ.
ವಿಶೇಷ ಸ್ವಚ್ಛತಾ ಕಾರ್ಯದ ವೇಳೆ ವಿಧಾನಸೌಧದ ಒಳಭಾಗ, ಮೆಟ್ಟಿಲುಗಳು, ಮುಂಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿದ್ದಿದ್ದ ಪೇಪರ್ ಪ್ಲೇಟ್ಗಳು, ಟೀ-ಕಾಫಿ ಕಪ್ಗಳು, ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಈ ವಿಶೇಷ ಸ್ವಚ್ಛತಾ ಕಾರ್ಯದಲ್ಲಿ ಡಿಜಿಎಂ ಭೀಮೇಶ್ ನಾಯ್ಕ, ಶಿವಾಜಿನಗರ ಎಜಿಎಂ ರುದ್ರಮುನಿ, ಕಿರಿಯ ಆರೋಗ್ಯ ಪರಿವೀಕ್ಷಕರು, ಪೌರಕಾರ್ಮಿಕರು ಹಾಗೂ ಆಟೋ ಟಿಪ್ಪರ್ ಚಾಲಕರು ಭಾಗವಹಿಸಿದ್ದರು.
