ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಪಿಜಿ, ಹೋಟೆಲ್, ರೆಸ್ಟೋರೆಂಟ್, ಹಾಸ್ಟೆಲ್ಗಳಲ್ಲಿ 7 ದಿನಗಳ ತಪಾಸಣಾ ಅಭಿಯಾನಕ್ಕೆ ಆದೇಶ
ಬೆಂಗಳೂರು, ಆಗಸ್ಟ್ 16: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಹಾಸ್ಟೆಲ್ಗಳು, ಡಾಬಾಗಳು ಹಾಗೂ ಆಹಾರ ತಯಾರಿಕೆ ಮತ್ತು ಸೇವಾ ಕೇಂದ್ರಗಳಲ್ಲಿ ತಪಾಸಣಾ ಅಭಿಯಾನ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ನಿರ್ದೇಶನಗಳು ಹಾಗೂ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಗೇರ್ ಸ್ಕೂಲ್ ರಸ್ತೆ, ನ್ಯೂ ಹೊರೈಜನ್ ಕಾಲೇಜು ಪ್ರದೇಶ ಮತ್ತು ತುಬರಹಳ್ಳಿ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಪಿಜಿಗಳಲ್ಲಿ ತಪಾಸಣೆ ನಡೆಸಲು ಸೂಚಿಸಲಾಗಿದೆ.
ನಗರ ಯೋಜನೆ ಉಪನಿರ್ದೇಶಕರು, ಕಾರ್ಯನಿರ್ವಾಹಕ ಎಂಜಿನಿಯರ್ಗಳು, ಆರೋಗ್ಯಾಧಿಕಾರಿಗಳು ಹಾಗೂ ಘನತ್ಯಾಜ್ಯ ನಿರ್ವಹಣೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳನ್ನು ಒಳಗೊಂಡ ಜಂಟಿ ತಂಡ ರಚಿಸಲಾಗಿದೆ. ಪ್ರತಿಯೊಂದು ಪಿಜಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಉಲ್ಲಂಘನೆಗಳನ್ನು ದಾಖಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಂಜೂರಾದ ಕಟ್ಟಡ ನಕ್ಷೆ ಮತ್ತು ನಿರ್ಮಾಣ ಅನುಮತಿಗೆ ಅನುಗುಣವಾಗಿ ಕಟ್ಟಡ ನಿರ್ಮಾಣವಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಸೆಟ್ಬ್ಯಾಕ್ ನಿಯಮ ಉಲ್ಲಂಘನೆ, ಅನಧಿಕೃತ ನಿರ್ಮಾಣ, ಹೆಚ್ಚುವರಿ ಮಹಡಿಗಳ ನಿರ್ಮಾಣ ಹಾಗೂ ಅನುಮೋದಿತ ಬಳಕೆಗೆ ವಿರುದ್ಧವಾಗಿ ವಾಣಿಜ್ಯ ಅಥವಾ ವಸತಿ ಉದ್ದೇಶಕ್ಕೆ ಕಟ್ಟಡ ಬಳಸಲಾಗುತ್ತಿದೆಯೇ ಎಂಬುದನ್ನೂ ತಪಾಸಣೆ ಮಾಡಲಾಗುತ್ತದೆ.
ಪಿಜಿಗಳಿಗೆ ಮಾನ್ಯ ಟ್ರೇಡ್ ಲೈಸೆನ್ಸ್ ಹಾಗೂ ಕಾರ್ಯಾಚರಣೆಗೆ ಅಗತ್ಯವಿರುವ ಇತರ ಅನುಮತಿಗಳಿವೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಕಟ್ಟಡದ ಸ್ಥಿತಿ, ಅಗ್ನಿ ಸುರಕ್ಷತಾ ವ್ಯವಸ್ಥೆಗಳ ಲಭ್ಯತೆ ಮತ್ತು ಸಮರ್ಪಕತೆ ಹಾಗೂ ತುರ್ತು ಸಂದರ್ಭದ ಸುರಕ್ಷತಾ ವ್ಯವಸ್ಥೆಗಳಿಗೂ ಆದ್ಯತೆ ನೀಡಲಾಗಿದೆ.
ಪಿಜಿಗಳ ಸ್ವಚ್ಛತೆ, ಶೌಚಾಲಯ ನಿರ್ವಹಣೆ, ಕುಡಿಯುವ ನೀರು, ನೀರು ಸರಬರಾಜು, ಒಳಚರಂಡಿ ಮತ್ತು ತ್ಯಾಜ್ಯ ನೀರಿನ ವಿಲೇವಾರಿ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತದೆ. ಘನತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ, ಸೂಕ್ತವಾಗಿ ಸಂಗ್ರಹಿಸಿ ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತಿದೆಯೇ ಎಂಬುದನ್ನೂ ಅಧಿಕಾರಿಗಳು ಖಚಿತಪಡಿಸಿಕೊಳ್ಳಲಿದ್ದಾರೆ.
ಪಿಜಿಗಳ ನಿರ್ಮಾಣ ಅಥವಾ ಕಾರ್ಯಾಚರಣೆಗೆ ಸಂಬಂಧಿಸಿ ರಸ್ತೆ, ಪಾದಚಾರಿ ಮಾರ್ಗ, ಚರಂಡಿ ಅಥವಾ ಇತರ ಸಾರ್ವಜನಿಕ ಆಸ್ತಿಗಳನ್ನು ಒತ್ತುವರಿ ಮಾಡಲಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ.
ಪ್ರತಿ ಆಸ್ತಿಯ ಉಲ್ಲಂಘನೆಗಳನ್ನು ಪ್ರತ್ಯೇಕವಾಗಿ ದಾಖಲಿಸಿ, ಅಗತ್ಯವಿದ್ದಲ್ಲಿ ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳನ್ನು ಸಂಗ್ರಹಿಸಬೇಕು. ಗಂಭೀರ ಉಲ್ಲಂಘನೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಸಂಪೂರ್ಣ ತಪಾಸಣೆಯನ್ನು ಏಳು ದಿನಗಳೊಳಗೆ ಪೂರ್ಣಗೊಳಿಸಿ, ಆಸ್ತಿವಾರು ವಿವರ, ಪತ್ತೆಯಾದ ಉಲ್ಲಂಘನೆ ಹಾಗೂ ಕೈಗೊಂಡ ಅಥವಾ ಪ್ರಸ್ತಾವಿತ ಕ್ರಮಗಳ ಸಮಗ್ರ ವರದಿ ಸಲ್ಲಿಸುವಂತೆ ಆಯುಕ್ತರು ಸೂಚಿಸಿದ್ದಾರೆ.
ಇತ್ತೀಚಿನ ರಾಜ್ಯಮಟ್ಟದ ತಪಾಸಣೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಕಳಪೆ ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್, ಡಾಬಾ, ರೆಸ್ಟೋರೆಂಟ್ ಹಾಗೂ ಇತರ ಆಹಾರ ತಯಾರಿಕೆ ಮತ್ತು ಸೇವಾ ಕೇಂದ್ರಗಳಲ್ಲಿಯೂ ಕಟ್ಟುನಿಟ್ಟಿನ ತಪಾಸಣೆ ನಡೆಸಲು ರಮೇಶ್ ಸೂಚಿಸಿದ್ದಾರೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಮಾರ್ಗಸೂಚಿಗಳಂತೆ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿ, ಆಹಾರದ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳ ಪಾಲನೆಯನ್ನು ಪರಿಶೀಲಿಸಲಿದ್ದಾರೆ. ಆಹಾರ ಪದಾರ್ಥಗಳ ಅವಧಿ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಸಂಗ್ರಹಣೆ ಹಾಗೂ ಬಳಕೆಯ ಹಂತದಲ್ಲಿ ತಪಾಸಣೆ ಮಾಡಲಾಗುತ್ತದೆ.
ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹ ಅಥವಾ ಬಳಕೆ, ಆಹಾರ ಕಲುಷಿತಗೊಳ್ಳುವ ಅಪಾಯ, ಕಳಪೆ ಸ್ವಚ್ಛತೆ, ಅಸುರಕ್ಷಿತ ನೀರಿನ ಬಳಕೆ ಅಥವಾ ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಆಹಾರ ತಯಾರಿಕಾ ಸ್ಥಳಗಳ ಸ್ವಚ್ಛತೆ, ಆಹಾರ ಪದಾರ್ಥಗಳ ವೈಜ್ಞಾನಿಕ ಸಂಗ್ರಹಣೆ, ಆಹಾರ ನಿರ್ವಹಿಸುವ ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ಕೀಟ ನಿಯಂತ್ರಣ ಹಾಗೂ ಆಹಾರ ಸಂಗ್ರಹಣೆ ಮತ್ತು ತಯಾರಿಕೆಯಲ್ಲಿ ಅಗತ್ಯ ತಾಪಮಾನ ನಿಯಂತ್ರಣ ಕ್ರಮಗಳನ್ನೂ ಪರಿಶೀಲಿಸಲಾಗುತ್ತದೆ.
ವಾರ್ಡ್ ಮಟ್ಟದಲ್ಲಿ ಕಿರಿಯ ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಆರೋಗ್ಯಾಧಿಕಾರಿಗಳು ನಿಯಮಿತ ತಪಾಸಣೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಅನುಸರಣಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ತಪಾಸಣೆ ಮತ್ತು ಜಾರಿ ಕಾರ್ಯದಲ್ಲಿ ಲೋಪ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿಯನ್ನು ನೇರ ಹೊಣೆಗಾರರನ್ನಾಗಿ ಮಾಡಿ, ಸೇವಾ ನಿಯಮಗಳ ಪ್ರಕಾರ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ, ಆರೋಗ್ಯ ಮತ್ತು ಜೀವನಮಟ್ಟದ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದ್ದು, ಕಟ್ಟಡ ನಿಯಮಗಳು, ಪಾಲಿಕೆಯ ಪರವಾನಗಿ ನಿಯಮಗಳು, ಆರೋಗ್ಯ ಮತ್ತು ಸ್ವಚ್ಛತಾ ಮಾನದಂಡಗಳು, ಘನತ್ಯಾಜ್ಯ ನಿರ್ವಹಣೆ ಹಾಗೂ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಿರಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿದೆ.
ಪಾಲಿಕೆ ವ್ಯಾಪ್ತಿಯ ಪಿಜಿ, ಹಾಸ್ಟೆಲ್, ಆಹಾರ ತಯಾರಿಕಾ ಕೇಂದ್ರಗಳು ಹಾಗೂ ಇತರ ಸಂಸ್ಥೆಗಳು ಅಗತ್ಯ ಪರವಾನಗಿ ಮತ್ತು ಅನುಮತಿಗಳನ್ನು ಪಡೆದು ಸಾರ್ವಜನಿಕ ಸುರಕ್ಷತೆ, ಆರೋಗ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.
