ಎಲ್ನಿನೋ ಆತಂಕದ ನಡುವೆ ಬೆಂಗಳೂರಿನಲ್ಲಿ ಈಜುಕೊಳಗಳಿಗೆ ಕುಡಿಯುವ ನೀರು ನಿಷೇಧ; ನೀರು ಉಳಿಸಲು BWSSBಯಿಂದ ಮೂರು ಮಹತ್ವದ ಆದೇಶ
ಬೆಂಗಳೂರು, ಜುಲೈ 4: ಎಲ್ನಿನೋ ಪರಿಣಾಮದಿಂದ ಮುಂಗಾರು ಮಳೆಯ ಪ್ರಮಾಣದಲ್ಲಿ ಉಂಟಾಗಿರುವ ವ್ಯತ್ಯಯ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೀರಿನ ಸಮರ್ಪಕ ನಿರ್ವಹಣೆ ಮತ್ತು ಮಿತವ್ಯಯವನ್ನು ಉತ್ತೇಜಿಸುವ ಉದ್ದೇಶದಿಂದ ಮೂರು ಮಹತ್ವದ ಆದೇಶಗಳನ್ನು ಜಾರಿಗೊಳಿಸಿದೆ. ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳನ್ನು ಕುಡಿಯುವ ನೀರಿನಿಂದ ತುಂಬಿಸುವುದಕ್ಕೆ ನಿಷೇಧ, ಎಲ್ಲಾ ಕಟ್ಟಡಗಳಲ್ಲಿ ಏರೇಟರ್ (Flow Restrictor/Aerator) ಅಳವಡಿಕೆ ಕಡ್ಡಾಯ ಹಾಗೂ ಕುಡಿಯುವ ನೀರಿನ ದುರ್ಬಳಕೆಗೆ ನಿರ್ಬಂಧ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ.
ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳ ಈ ಕುರಿತು ಮಾಹಿತಿ ನೀಡಿ, ನಗರದ ಪ್ರತಿಯೊಂದು ಹನಿ ಕುಡಿಯುವ ನೀರನ್ನು ಜವಾಬ್ದಾರಿಯುತವಾಗಿ ಬಳಸುವ ಸಂಸ್ಕೃತಿಯನ್ನು ಬೆಳೆಸುವುದು, ಅನಗತ್ಯ ಬಳಕೆಯನ್ನು ತಡೆಯುವುದು ಹಾಗೂ ದೀರ್ಘಾವಧಿಯ ನೀರಿನ ಭದ್ರತೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಲಮಂಡಳಿಯ ಪ್ರಕಾರ, ಈ ಕ್ರಮಗಳನ್ನು ಭಾರತೀಯ ವಿಜ್ಞಾನ ಸಂಸ್ಥೆ (IISc) ನೀಡಿರುವ ಅಧ್ಯಯನ ಮತ್ತು ಶಿಫಾರಸುಗಳನ್ನು ಪರಿಗಣಿಸಿ ಜಾರಿಗೊಳಿಸಲಾಗಿದೆ.
ಎಲ್ಲಾ ಕಟ್ಟಡಗಳಲ್ಲಿ ಏರೇಟರ್ ಅಳವಡಿಕೆ ಕಡ್ಡಾಯ
ನಗರದಲ್ಲಿರುವ ಮನೆಗಳು, ಅಪಾರ್ಟ್ಮೆಂಟ್ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್ಗಳು ಹಾಗೂ ಕೈಗಾರಿಕೆಗಳು ಸೇರಿದಂತೆ ನೀರು ಬಳಸುವ ಎಲ್ಲಾ ಕಟ್ಟಡಗಳಲ್ಲಿ Flow Restrictor ಅಥವಾ Aerator ಅಳವಡಿಕೆ ಕಡ್ಡಾಯ ಮಾಡಲಾಗಿದೆ.
ಜಲಮಂಡಳಿಯ ಪ್ರಕಾರ, ಏರೇಟರ್ ಅಳವಡಿಸಿದರೆ ನೀರಿನ ಬಳಕೆಯನ್ನು ಶೇ.30ರಿಂದ 50ರವರೆಗೆ ಕಡಿಮೆ ಮಾಡಬಹುದಾಗಿದ್ದು, ನೀರಿನ ಹರಿವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಈಜುಕೊಳಗಳಿಗೆ ಕುಡಿಯುವ ನೀರು ಸಂಪೂರ್ಣ ನಿಷೇಧ
ಎಲ್ನಿನೋ ಹಿನ್ನೆಲೆಯಲ್ಲಿ ನೀರಿನ ಸಂರಕ್ಷಣೆಗೆ ಒತ್ತು ನೀಡಿರುವ ಜಲಮಂಡಳಿ, ನಗರದ ಎಲ್ಲಾ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳನ್ನು ಕುಡಿಯುವ ನೀರಿನಿಂದ ತುಂಬಿಸುವುದನ್ನು ನಿಷೇಧಿಸಿದೆ.
ಈಜುಕೊಳಗಳಿಗೆ ಅಗತ್ಯವಿರುವ ನೀರನ್ನು ಸಂಸ್ಕರಿತ ನೀರು (Treated Water) ಅಥವಾ ಇತರೆ ಪರ್ಯಾಯ ಮೂಲಗಳಿಂದ ಮಾತ್ರ ಬಳಸುವಂತೆ ಸೂಚಿಸಲಾಗಿದೆ.
ಕುಡಿಯುವ ನೀರಿನ ದುರ್ಬಳಕೆಗೆ ಬ್ರೇಕ್
ಜಲಮಂಡಳಿಯ ಹೊಸ ಆದೇಶದಂತೆ ಕೆಳಕಂಡ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ:
- ವಾಹನ ತೊಳೆಯುವುದು
- ಉದ್ಯಾನ ಹಾಗೂ ಲಾನ್ಗಳಿಗೆ ನೀರು ಹಾಯಿಸುವುದು
- ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ತೊಳೆಯುವುದು
- ಕಟ್ಟಡ ನಿರ್ಮಾಣ ಕಾಮಗಾರಿಗಳು
- ಇತರೆ ಕುಡಿಯುವ ನೀರಲ್ಲದ ಬಳಕೆ
ಈ ಎಲ್ಲಾ ಕಾರ್ಯಗಳಿಗೆ ಸಂಸ್ಕರಿತ ನೀರನ್ನೇ ಕಡ್ಡಾಯವಾಗಿ ಬಳಸಬೇಕು ಎಂದು ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ₹5,000 ದಂಡ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ–1964ರ ಅನ್ವಯ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಎಚ್ಚರಿಸಿದೆ.
ಉಲ್ಲಂಘನೆ ಕಂಡುಬಂದರೆ:
- ನೀರು ಸರಬರಾಜಿನಲ್ಲಿ ಶೇ.50ರವರೆಗೆ ಕಡಿತ
- ₹5,000 ದಂಡ
- ಉಲ್ಲಂಘನೆ ಮುಂದುವರಿದರೆ ಪ್ರತಿದಿನ ₹500 ಹೆಚ್ಚುವರಿ ದಂಡ
- ಅಗತ್ಯವಿದ್ದಲ್ಲಿ ಕಾನೂನು ಕ್ರಮ
ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ನಾಗರಿಕರ ಸಹಕಾರಕ್ಕೆ ಮನವಿ
ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳ ಮಾತನಾಡಿ, ಕುಡಿಯುವ ನೀರು ಪ್ರತಿಯೊಬ್ಬರಿಗೂ ಸೇರಿದ ಅಮೂಲ್ಯ ನೈಸರ್ಗಿಕ ಸಂಪತ್ತಾಗಿದ್ದು, ಅದರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
“ಇಂದಿನ ನೀರಿನ ಮಿತವ್ಯಯವೇ ನಾಳಿನ ನೀರಿನ ಭದ್ರತೆಗೆ ಭದ್ರ ಬುನಾದಿಯಾಗಲಿದೆ. ಪ್ರತಿಯೊಬ್ಬರೂ ನೀರನ್ನು ಜವಾಬ್ದಾರಿಯುತವಾಗಿ ಬಳಸಿ, ಏರೇಟರ್ ಅಳವಡಿಸಿ, ಕುಡಿಯುವ ನೀರಿನ ದುರ್ಬಳಕೆಯನ್ನು ತಪ್ಪಿಸಿ ಜಲ ಸಂರಕ್ಷಣೆಯ ಜನಾಂದೋಲನಕ್ಕೆ ಕೈಜೋಡಿಸಬೇಕು. ನಾಗರಿಕರು, ಅಪಾರ್ಟ್ಮೆಂಟ್ ಸಂಘಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳು ಜಲಮಂಡಳಿಯೊಂದಿಗೆ ಸಹಕರಿಸಿದರೆ ಮಾತ್ರ ಬೆಂಗಳೂರಿನ ನೀರಿನ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸಾಧ್ಯ” ಎಂದು ಅವರು ಮನವಿ ಮಾಡಿದರು.
ಎಲ್ನಿನೋ ಪರಿಣಾಮದಿಂದ ಭವಿಷ್ಯದಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆಯನ್ನು ಮನಗಂಡು, ಈಗಿನಿಂದಲೇ ನೀರಿನ ಸಂರಕ್ಷಣೆಗೆ ಒತ್ತು ನೀಡುವುದು ಅತ್ಯಗತ್ಯವಾಗಿದೆ ಎಂದು ಜಲಮಂಡಳಿ ತಿಳಿಸಿದೆ.