ನವೆಂಬರ್ 13ರಂದು ಬೆಂಗಳೂರಿನ ದೊಮ್ಮಲೂರಿನಲ್ಲಿ ವಾರ್ಡ್ ಒನ್ ಅಭಿಯಾನದಡಿ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಚಿತ್ರ: ಜಿಬಿಎ
ಬೆಂಗಳೂರು: ವಾರ್ಡ್ ಒನ್ ಅಭಿಯಾನದ ಮೂರನೇ ವಾರದಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆರು ವಾರ್ಡ್‌ಗಳಲ್ಲಿ 9.65 ಕಿ.ಮೀ. ರಸ್ತೆಯನ್ನು ಸ್ವಚ್ಛಗೊಳಿಸಿ, 83.5 ಟನ್ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿಳಿಸಿದೆ. ನವೆಂಬರ್ 13ರ ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಸುಮಾರು ಒಂದು ಕಿ.ಮೀ. ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಿ, 11 ರಸ್ತೆ ಗುಂಡಿಗಳನ್ನು ಮುಚ್ಚಲಾಯಿತು.
ಕಸ ಸುರಿಯುತ್ತಿದ್ದ 20 ಸ್ಥಳಗಳಿಂದ 11.5 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಪಾದಚಾರಿ ಮಾರ್ಗಗಳಲ್ಲಿದ್ದ 45 ಅಡೆತಡೆಗಳನ್ನು ತೆರವುಗೊಳಿಸಿ, ಐದು ಜಂಕ್ಷನ್‌ಗಳನ್ನು ಸುಧಾರಿಸಲಾಯಿತು. ಐದು ಹೊಸ ಬೀದಿದೀಪಗಳನ್ನು ಅಳವಡಿಸಿ, 23 ದೀಪಗಳನ್ನು ದುರಸ್ತಿಗೊಳಿಸಲಾಯಿತು. ಅನಧಿಕೃತವಾಗಿ ಅಳವಡಿಸಿದ್ದ 96 ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಹಾಗೂ ಬಿಟ್ಟುಹೋಗಿದ್ದ ನಾಲ್ಕು ವಾಹನಗಳನ್ನು ತೆರವುಗೊಳಿಸಲಾಯಿತು. 18 ಮರಗಳ ಕೊಂಬೆಗಳನ್ನು ಕತ್ತರಿಸಲಾಯಿತು. ಸಾರ್ವಜನಿಕರ ನಾಗರಿಕ ಸಮಸ್ಯೆಗಳ ಕುರಿತ ದೂರುಗಳನ್ನೂ ಸ್ಥಳದಲ್ಲೇ ಪರಿಶೀಲಿಸಲಾಯಿತು.
ಜಯಮಹಲ್‌ನಲ್ಲಿ 1.2 ಕಿ.ಮೀ. ರಸ್ತೆಯನ್ನು ಸ್ವಚ್ಛಗೊಳಿಸಿ, ಕಸ ಸುರಿಯುತ್ತಿದ್ದ ಎರಡು ಸ್ಥಳಗಳನ್ನು ತೆರವುಗೊಳಿಸಲಾಯಿತು. ಅರ್ಧ ಟನ್ ಕಟ್ಟಡ ತ್ಯಾಜ್ಯವನ್ನೂ ವಿಲೇವಾರಿ ಮಾಡಲಾಯಿತು. ಜಿ.ಎಂ. ಪಾಳ್ಯದಲ್ಲಿ ಒಂದು ಕಿ.ಮೀ. ರಸ್ತೆಯನ್ನು ಸ್ವಚ್ಛಗೊಳಿಸಿ, 45 ಟನ್ ಕಟ್ಟಡ ತ್ಯಾಜ್ಯ ಮತ್ತು ಪಾದಚಾರಿ ಮಾರ್ಗಗಳಲ್ಲಿದ್ದ 25 ಅಡೆತಡೆಗಳನ್ನು ತೆರವುಗೊಳಿಸಲಾಯಿತು. ದೊಮ್ಮಲೂರಿನಲ್ಲಿ 750 ಮೀಟರ್ ರಸ್ತೆ ಸ್ವಚ್ಛಗೊಳಿಸಿ, 15 ಟನ್ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಆರು ರಸ್ತೆ ಗುಂಡಿಗಳನ್ನು ಮುಚ್ಚಿ, 500 ಮೀಟರ್ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಲಾಯಿತು.
ಅಶೋಕ ಪಿಲ್ಲರ್ ವಾರ್ಡ್‌ನಲ್ಲಿ ನಾಲ್ಕು ಕಿ.ಮೀ. ರಸ್ತೆ ಸ್ವಚ್ಛಗೊಳಿಸಿ, 22 ಟನ್ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಕಸ ಸುರಿಯುತ್ತಿದ್ದ ಒಂಬತ್ತು ಸ್ಥಳಗಳನ್ನು ಸ್ವಚ್ಛಗೊಳಿಸಿ, ಮೂರು ಜಂಕ್ಷನ್‌ಗಳಲ್ಲಿ ಸುಧಾರಣಾ ಕಾಮಗಾರಿ ಕೈಗೊಳ್ಳಲಾಯಿತು. ಕೆ.ಆರ್. ಮಾರುಕಟ್ಟೆಯಲ್ಲಿ 1.5 ಕಿ.ಮೀ. ರಸ್ತೆ ಸ್ವಚ್ಛಗೊಳಿಸಿ, 10 ಕಡೆ ಚರಂಡಿ ಹಾಗೂ 15 ಕಡೆ ಪಾದಚಾರಿ ಮಾರ್ಗ ದುರಸ್ತಿ ಮಾಡಲಾಯಿತು. ಶೇಷಾದ್ರಿಪುರದಲ್ಲಿ 1.2 ಕಿ.ಮೀ. ರಸ್ತೆ ಸ್ವಚ್ಛಗೊಳಿಸಿ, ಐದು ರಸ್ತೆ ಗುಂಡಿಗಳನ್ನು ಮುಚ್ಚಲಾಯಿತು. ಕಸ ಸುರಿಯುತ್ತಿದ್ದ ಐದು ಸ್ಥಳಗಳನ್ನು ಸ್ವಚ್ಛಗೊಳಿಸಿ, 300 ಮೀಟರ್ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಲಾಯಿತು.
ಕಾರ್ಯಾಚರಣೆಗೆ 150 ಕಾರ್ಮಿಕರು, ಆರು ಜೆಸಿಬಿ ಯಂತ್ರಗಳು, ಆರು ಟಿಪ್ಪರ್‌ಗಳು ಮತ್ತು 20 ಟ್ರ್ಯಾಕ್ಟರ್‌ಗಳನ್ನು ನಿಯೋಜಿಸಲಾಗಿತ್ತು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ, ಆಯುಕ್ತ ಜಗದೀಶ್ ಜಿ. ಮತ್ತು ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ಆರ್. ವೆಂಕಟಚಲಪತಿ ಅವರ ಮೇಲ್ವಿಚಾರಣೆಯಲ್ಲಿ ಅಭಿಯಾನ ನಡೆಯಿತು. ಬೆಸ್ಕಾಂ, ಜಲಮಂಡಳಿ ಮತ್ತು ಪೊಲೀಸರು ಸಹಕರಿಸಿದರು.
ಸಂಬಂಧಿತ ಸುದ್ದಿಗಳನ್ನೂ ಓದಿ:
