ಬೆಂಗಳೂರು, ಜೂನ್ 4: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯವನ್ನು ಸಮರ್ಪಕವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ ಶೇ.72ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳಿದಿರುವ ಮ್ಯಾಪಿಂಗ್ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಮಾಹಿತಿಯನ್ನು ನಮೂನೆಗಳ ಮೂಲಕ ಸಂಗ್ರಹಿಸಲಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಗ್ರಹವಾಗುವ ಮಾಹಿತಿಯನ್ನು ಪರಿಶೀಲಿಸಿ, ತಾಳೆ ಮಾಡಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವ ಗುರಿ
ಅರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಿಂದ ವಂಚಿತರಾಗದಂತೆ ಹಾಗೂ ಅನರ್ಹ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮಹೇಶ್ವರ್ ರಾವ್ ಹೇಳಿದರು.
ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನುಸಾರವೇ ಎಲ್ಲಾ ಪರಿಷ್ಕರಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿಗೆ ಕ್ರಮ
ಎಸ್ಐಆರ್-2026ರ ಪೂರ್ವಭಾವಿ ಚಟುವಟಿಕೆಯ ಭಾಗವಾಗಿ 2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಜೂನ್ 16, 2026ರಂದು ಇ-ರೋಲ್ ಫ್ರೀಜ್ ಆಗಲಿರುವುದರಿಂದ, ಅದರೊಳಗೆ ನಮೂನೆ-6, 6ಎ, 7 ಮತ್ತು 8ರ ಅಡಿಯಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಎಲ್ಒ ಹಾಗೂ ಬಿಎಲ್ಎಗಳೊಂದಿಗೆ ಸಭೆ
ಮನೆ-ಮನೆ ಸಮೀಕ್ಷೆ ಆರಂಭಕ್ಕೂ ಮುನ್ನ ಮತದಾರರ ನೋಂದಣಾಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಬೂತ್ ಲೆವಲ್ ಏಜೆಂಟ್ಗಳ (ಬಿಎಲ್ಎ)ೊಂದಿಗೆ ಸಭೆ ನಡೆಸಿ ಎಸ್ಐಆರ್ ವೇಳಾಪಟ್ಟಿ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಲಿದ್ದಾರೆ.
ರಾಜಕೀಯ ಪಕ್ಷಗಳು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.
ಕರಡು ಮತದಾರರ ಪಟ್ಟಿ ಪ್ರಕಟವಾಗುವವರೆಗೆ ಪ್ರತಿದಿನ 50 ನಮೂನೆಗಳನ್ನು ಬಿಎಲ್ಒಗಳಿಗೆ ಸಲ್ಲಿಸಲು ಅವಕಾಶವಿದ್ದು, ಕರಡು ಪಟ್ಟಿ ಪ್ರಕಟವಾದ ಬಳಿಕ ದಿನಕ್ಕೆ ಗರಿಷ್ಠ 10 ನಮೂನೆಗಳನ್ನು ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.
ಬೂತ್ ಲೆವಲ್ ಏಜೆಂಟ್ಗಳ ನೇಮಕಕ್ಕೆ ಮನವಿ
ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವಲ್ ಏಜೆಂಟ್ಗಳನ್ನು ನೇಮಿಸಿ ಅವರ ವಿವರಗಳನ್ನು ಕೂಡಲೇ ಸಲ್ಲಿಸಬೇಕು ಎಂದು ಮಹೇಶ್ವರ್ ರಾವ್ ಮನವಿ ಮಾಡಿದರು.
ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಚುನಾವಣಾ ಸಿಬ್ಬಂದಿಗೆ ಸಹಕಾರ ನೀಡುವಂತೆ ರಾಜಕೀಯ ಪಕ್ಷಗಳಿಗೆ ಕೋರಿದರು.
ಎಸ್ಐಆರ್ ಕುರಿತು ಜಾಗೃತಿ ಅಭಿಯಾನ
ಬೆಂಗಳೂರು ನಗರದಲ್ಲಿ ಎಸ್ಐಆರ್ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲು ಎಲ್ಲಾ ನಗರ ಪಾಲಿಕೆಗಳಲ್ಲಿ ಐಇಸಿ ಮತ್ತು ಸ್ವೀಪ್ ಚಟುವಟಿಕೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಆಟೋ ಟಿಪ್ಪರ್ಗಳಲ್ಲಿ ಧ್ವನಿವರ್ಧಕಗಳ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಬೆಂಗಳೂರು ವ್ಯಾಪ್ತಿಯ ಮ್ಯಾಪಿಂಗ್ ವಿವರ
- ಬೆಂಗಳೂರು ಜಿಲ್ಲೆ – 78.93%
- ಕೇಂದ್ರ ನಗರ ಜಿಲ್ಲೆ – 67.53%
- ದಕ್ಷಿಣ ನಗರ ಜಿಲ್ಲೆ – 67.93%
- ಉತ್ತರ ನಗರ ಜಿಲ್ಲೆ – 69.23%
ಒಟ್ಟು ಮ್ಯಾಪಿಂಗ್ ಪೂರ್ಣಗೊಂಡಿರುವುದು: 72%
ಎಸ್ಐಆರ್-2026 ವೇಳಾಪಟ್ಟಿ
- ಅರ್ಹತಾ ದಿನಾಂಕ: 01.10.2026
- ಸಿದ್ಧತೆ, ತರಬೇತಿ ಮತ್ತು ಮುದ್ರಣ: 20.06.2026 ರಿಂದ 29.06.2026
- ಬಿಎಲ್ಒಗಳಿಂದ ಮನೆ-ಮನೆ ಭೇಟಿ: 30.06.2026 ರಿಂದ 29.07.2026
- ಮತಗಟ್ಟೆಗಳ ಮರುಹೊಂದಾಣಿಕೆ: 29.07.2026
- ಕರಡು ಮತದಾರರ ಪಟ್ಟಿ ಪ್ರಕಟಣೆ: 05.08.2026
- ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ: 05.08.2026 ರಿಂದ 04.09.2026
- ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ: 05.08.2026 ರಿಂದ 03.10.2026
- ಅಂತಿಮ ಮತದಾರರ ಪಟ್ಟಿ ಪ್ರಕಟಣೆ: 07.10.2026
ಮಹೇಶ್ವರ್ ರಾವ್ ಅವರು, ಎಲ್ಲ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿ, ಈ ಕಾರ್ಯದಲ್ಲಿ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ, ಅಪರ ಜಿಲ್ಲಾ ಚುನಾವಣಾಧಿಕಾರಿ ಜಗದೀಶ್, ಸಹಾಯಕ ಆಯುಕ್ತ ಎಂ. ಶ್ರೀನಿವಾಸ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
