ಬೆಂಗಳೂರು: ವಾರ್ಡ್ ಒನ್ ಅಭಿಯಾನದ ಪೂರ್ವಸಿದ್ಧತೆಯ ಭಾಗವಾಗಿ ರಸ್ತೆಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಿರುವ ಬಳಕೆಯಲ್ಲಿಲ್ಲದ ವಾಹನಗಳನ್ನು ಗುರುತಿಸಿ, ಪೊಲೀಸರ ಸಹಕಾರದೊಂದಿಗೆ ತೆರವುಗೊಳಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾನಿಗೊಂಡ ಪಾದಚಾರಿ ಮಾರ್ಗಗಳ ದುರಸ್ತಿಗೂ ಆದ್ಯತೆ ನೀಡುವಂತೆ ನಿರ್ದೇಶಿಸಲಾಗಿದೆ.
ಪೂರ್ವಸಿದ್ಧತಾ ಸಭೆಯ ನೇತೃತ್ವ ವಹಿಸಿದ್ದ ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್, ಅಭಿಯಾನ ನಡೆಯಲಿರುವ ವಾರ್ಡ್ನಲ್ಲಿ ರಸ್ತೆ, ಚರಂಡಿ, ಸ್ವಚ್ಛತೆ ಮತ್ತು ತೋಟಗಾರಿಕೆ ಕಾರ್ಯಗಳನ್ನು ಇಲಾಖೆಗಳ ಸಮನ್ವಯದೊಂದಿಗೆ ಕೈಗೊಳ್ಳುವಂತೆ ತಿಳಿಸಿದರು.
ರಸ್ತೆ ಗುಂಡಿ, ಪಾದಚಾರಿ ಮಾರ್ಗ ಮತ್ತು ಬಸ್ ನಿಲ್ದಾಣ
ದುರಸ್ತಿ ಅಗತ್ಯವಿರುವ ಪ್ರಮುಖ ರಸ್ತೆಗಳು ಮತ್ತು ಜಂಕ್ಷನ್ಗಳನ್ನು ಗುರುತಿಸಿ, ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚಬೇಕು. ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಬೇಕು. ಪಾದಚಾರಿ ಮಾರ್ಗಗಳ ಹಾನಿಗೊಂಡ ಪೇವರ್ ಬ್ಲಾಕ್ಗಳು ಮತ್ತು ಸ್ಲ್ಯಾಬ್ಗಳನ್ನು ದುರಸ್ತಿಪಡಿಸಿ, ಅಡೆತಡೆಗಳನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು.
ಬಸ್ ನಿಲ್ದಾಣಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ನಿಲ್ದಾಣಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿನ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಪೋಸ್ಟರ್ಗಳನ್ನು ತೆರವುಗೊಳಿಸುವಂತೆಯೂ ತಿಳಿಸಲಾಯಿತು.
ಕಸ ತೆರವುಗೊಳಿಸಿದ ಜಾಗದಲ್ಲಿ ಮತ್ತೆ ತ್ಯಾಜ್ಯ ಸೇರದಂತೆ ನಿಗಾ
ಗುರುತಿಸಲಾದ ಕಸದ ಬ್ಲ್ಯಾಕ್ಸ್ಪಾಟ್ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮತ್ತೆ ತ್ಯಾಜ್ಯ ಸಂಗ್ರಹವಾಗದಂತೆ ನಿರಂತರ ನಿಗಾ ವಹಿಸಬೇಕು. ಪ್ರಮುಖ ರಸ್ತೆಗಳು, ಮಾರುಕಟ್ಟೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಕಟ್ಟಡ ತ್ಯಾಜ್ಯ ಹಾಗೂ ಇತರ ತ್ಯಾಜ್ಯವನ್ನು ನಿಯಮಾನುಸಾರ ತೆರವುಗೊಳಿಸುವಂತೆ ಸೂಚಿಸಲಾಯಿತು.
ಒಳಚರಂಡಿ ಮತ್ತು ಮಳೆನೀರು ಚರಂಡಿಗಳಲ್ಲಿ ಹೂಳು ಹಾಗೂ ತ್ಯಾಜ್ಯ ಸೇರದಂತೆ ನಿಯಮಿತವಾಗಿ ಸ್ವಚ್ಛಗೊಳಿಸಿ, ಮಳೆನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು. ರಾಜಕಾಲುವೆ ಮತ್ತು ಕೆರೆಗಳ ನಿರ್ವಹಣೆಗೆ ಆದ್ಯತೆ ನೀಡಿ, ಇಲಾಖೆಗಳ ಸಮನ್ವಯದೊಂದಿಗೆ ಬಾಕಿ ಕೆಲಸ ಪೂರ್ಣಗೊಳಿಸಲು ತಿಳಿಸಲಾಯಿತು.
ರಸ್ತೆಬದಿಯ ಮರಗಳ ಕೊಂಬೆಗಳು ಸಂಚಾರಕ್ಕೆ ಅಥವಾ ಸಾರ್ವಜನಿಕರಿಗೆ ಅಡ್ಡಿಯಾಗದಂತೆ ನಿರ್ವಹಣೆ ಮಾಡಬೇಕು. ಅಗತ್ಯವಿರುವ ಕಡೆ ಕೊಂಬೆಗಳನ್ನು ಕತ್ತರಿಸುವುದರ ಜತೆಗೆ ಉದ್ಯಾನವನ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ನಿರ್ವಹಣೆಯನ್ನೂ ಕೈಗೊಳ್ಳಬೇಕು.
ಇಲಾಖೆಗಳ ಸಮನ್ವಯ; ದೂರುಗಳಿಗೆ ತ್ವರಿತ ಸ್ಪಂದನೆ
ಬೆಸ್ಕಾಂ, ಬೆಂಗಳೂರು ಜಲಮಂಡಳಿ, ರೈಲ್ವೆ, ಸಂಚಾರ ಪೊಲೀಸ್ ಹಾಗೂ ಇತರ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಹಲವು ಇಲಾಖೆಗಳ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅಪರ ಆಯುಕ್ತರು ತಿಳಿಸಿದರು. ಸಾರ್ವಜನಿಕರ ದೂರುಗಳನ್ನು ಪರಿಶೀಲಿಸಿ ತ್ವರಿತವಾಗಿ ಪರಿಹರಿಸಲು ಸೂಚಿಸಿದರು.
ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಕಾರ ಪಡೆಯಬೇಕು. ಅಭಿಯಾನದ ಉದ್ದೇಶ ಮತ್ತು ಕೈಗೊಳ್ಳುವ ಕಾರ್ಯಗಳ ಬಗ್ಗೆ ನಿವಾಸಿಗಳಿಗೆ ಮಾಹಿತಿ ನೀಡುವಂತೆಯೂ ಅಧಿಕಾರಿಗಳಿಗೆ ತಿಳಿಸಲಾಯಿತು.
ಅಭಿಯಾನದ ದಿನ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು, ತಮ್ಮ ಜವಾಬ್ದಾರಿಯ ಕೆಲಸಗಳನ್ನು ನಿರ್ವಹಿಸಿ ದೂರುಗಳಿಗೆ ಸ್ಪಂದಿಸಬೇಕು. ಪಾಲಿಕೆಯ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
