ಬುಧವಾರ ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ನಡೆದ ಪರಿಶೀಲನಾ ಸಭೆ. ಫೋಟೋ: ಜಿಬಿಎ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ನೇತೃತ್ವದಲ್ಲಿ ಡಿಸೆಂಬರ್ 4ರಿಂದ 13ರವರೆಗೆ ನಡೆಯಲಿರುವ ‘ಬೆಂಗಳೂರು ಜಾತ್ರೆ’ಯನ್ನು ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅದ್ಧೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಬುಧವಾರ ನಡೆದ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ವಾರ್ಡ್ ಒನ್ ಅಭಿಯಾನದ ಪ್ರಗತಿ, ರಸ್ತೆ ಗುಂಡಿ ದುರಸ್ತಿ, ಅನಧಿಕೃತ ಕಟ್ಟಡಗಳ ತೆರವು, ಜಂಕ್ಷನ್ ಅಭಿವೃದ್ಧಿ, ಬಿಡಾಡಿ ವಾಹನಗಳ ತೆರವು ಹಾಗೂ ಸಾರ್ವಜನಿಕ ದೂರುಗಳ ವಿಲೇವಾರಿ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು.
ಜಾತ್ರೆಯ ಸಿದ್ಧತೆ
ಜಾತ್ರೆಯ ಅಂಗವಾಗಿ ಮೆಗಾ, ಮೀಡಿಯಂ ಹಾಗೂ ಮಿನಿ ಈವೆಂಟ್‌ಗಳನ್ನು ಆಯೋಜಿಸಲಾಗುವುದು. ಮೀಡಿಯಂ ಈವೆಂಟ್‌ಗಳನ್ನು ಐಟಿಐ ಲಿಮಿಟೆಡ್ ಹಾಗೂ ಪಟ್ಟಂದೂರು ಅಗ್ರಹಾರದ ದಸರಾ ಮೈದಾನದಲ್ಲಿ ನಡೆಸಲು ಸ್ಥಳ ಗುರುತಿಸಲಾಗಿದೆ. ಮಿನಿ ಈವೆಂಟ್‌ಗಳನ್ನು 10 ಸ್ಥಳಗಳಲ್ಲಿ ಆಯೋಜಿಸಲು ಉದ್ದೇಶಿಸಿದ್ದು, ಕೆ.ಆರ್. ಪುರ ಮತ್ತು ಮಹದೇವಪುರ ವಲಯಗಳಲ್ಲಿ ತಲಾ ಐದು ಸ್ಥಳ ಆಯ್ಕೆ ಮಾಡುವಂತೆ ಆಯುಕ್ತರು ಸೂಚಿಸಿದರು.
ಪ್ರತಿ ಮಿನಿ ಈವೆಂಟ್ ಸ್ಥಳದಲ್ಲಿ ಒಂದು ದಿನದ ಕಾರ್ಯಕ್ರಮ ಆಯೋಜಿಸಿ ವೇದಿಕೆ, ಧ್ವನಿವರ್ಧಕ, ದೀಪಾಲಂಕಾರ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಜಿಬಿಎ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರ ತಂಡಗಳು ಭಾಗವಹಿಸಲಿದ್ದು, ಸ್ಥಳೀಯ ಕಲಾವಿದರನ್ನು ಗುರುತಿಸಿ ಗೌರವಧನ ನಿಗದಿಪಡಿಸಬೇಕು. ವಾಕ್‌ಥಾನ್, ಸೈಕ್ಲೋಥಾನ್, ಕ್ರೀಡಾಕೂಟ, ರಂಗೋಲಿ ಸ್ಪರ್ಧೆ ಹಾಗೂ ಆಹಾರ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ರೂಪಿಸಬೇಕು. ಸ್ಥಳೀಯರು, ಕಾಲೇಜುಗಳು ಹಾಗೂ ಸ್ಥಳೀಯ ಗಣ್ಯರನ್ನು ತೊಡಗಿಸಿಕೊಂಡು ಜನಸಹಭಾಗಿತ್ವಕ್ಕೆ ಆದ್ಯತೆ ನೀಡಬೇಕು. ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿ ಪಾಲಿಕೆಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ರಸ್ತೆ ಗುಂಡಿ, ಬಿಡಾಡಿ ವಾಹನ ಮತ್ತು ಅನಧಿಕೃತ ಕಟ್ಟಡ
ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳನ್ನು ರಸ್ತೆ ಗುಂಡಿ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಈ ಬಗ್ಗೆ ಸಭೆ ನಡೆದು ನಾಲ್ಕು ತಿಂಗಳು ಕಳೆದರೂ ಒಂದೇ ಒಂದು ವಾರ್ಡ್ ಅನ್ನು ಗುಂಡಿ ಮುಕ್ತ ಎಂದು ಘೋಷಿಸದಿರುವುದಕ್ಕೆ ಆಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಇನ್ನೂ ಗುಂಡಿಗಳಿರುವುದನ್ನು ಗಮನಿಸಿದ ಅವರು, ಕನಿಷ್ಠ ಗುಂಡಿಗಳಿರುವ ವಾರ್ಡ್‌ಗಳನ್ನೇ ಆಯ್ಕೆ ಮಾಡಿಕೊಂಡಿದ್ದರೂ ದುರಸ್ತಿ ವಿಳಂಬವೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಅಧಿಕಾರಿಗಳು ಖುದ್ದಾಗಿ ರಸ್ತೆಗಳನ್ನು ಪರಿಶೀಲಿಸಿ ಗುಂಡಿಗಳನ್ನು ತಕ್ಷಣ ಮುಚ್ಚಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 53 ಬಿಡಾಡಿ ವಾಹನಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಮೂರನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಉಳಿದವನ್ನು ನಿಯಮಾನುಸಾರ ಸ್ಕ್ರಾಪ್ ಮಾಡಬೇಕು; ವರ್ಷಗಳಿಂದ ನಿಂತಿರುವ ವಾಹನಗಳನ್ನು ಅಧಿಕಾರಿಗಳೇ ಸ್ವಯಂಪ್ರೇರಿತರಾಗಿ ಗುರುತಿಸಿ ತೆರವುಗೊಳಿಸಬೇಕು, ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಸಿದರು.
ಎಂಟು ಉಪವಿಭಾಗಗಳ ಪೈಕಿ ಆರರಲ್ಲಿ ಮಾತ್ರ ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಿರುವುದಕ್ಕೆ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು; ನೋಟಿಸ್ ನೀಡಿದ ನಂತರವೂ ತೆರವು ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದರು. ಅನಧಿಕೃತ ಕಟ್ಟಡ ಹಾಗೂ ಪಿಜಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು, ನಿರ್ಮಾಣ ಹಂತದ ಕಟ್ಟಡಗಳನ್ನೂ ಗುರುತಿಸಬೇಕು ಎಂದು ಹೇಳಿದ ಅವರು, ಎಲ್ಲ ಕಾರ್ಯನಿರ್ವಾಹಕ ಅಭಿಯಂತರರು ತಮ್ಮ ವ್ಯಾಪ್ತಿಯ ತೆರವು ಕಾರ್ಯಾಚರಣೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಕಾಮಗಾರಿ, ದೂರು ಮತ್ತು ತ್ಯಾಜ್ಯ ನಿರ್ವಹಣೆ
ಸಿಎಂಐಡಿಪಿ ಅಡಿಯ ಡಾಂಬರೀಕರಣ ಹಾಗೂ ಸಿಸಿ ರಸ್ತೆ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ಈ ತಿಂಗಳೊಳಗೆ ಎಲ್ಲ ವಿಭಾಗಗಳ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಕಾಮಗಾರಿ ಮುಗಿದ ನಂತರ ಬಿಲ್ ಸಲ್ಲಿಸಬೇಕು, ಪ್ರಗತಿ ವಿವರವನ್ನು ಸ್ಪ್ರೆಡ್‌ಶೀಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಚರಂಡಿ ಕಾಮಗಾರಿ, ಪಾದಚಾರಿ ಮಾರ್ಗ ಅಭಿವೃದ್ಧಿ, ಒತ್ತುವರಿ ತೆರವು ಸೇರಿದಂತೆ ಯಾವುದೇ ಸಿವಿಲ್ ಕಾಮಗಾರಿ ಬಾಕಿ ಉಳಿಯಬಾರದು ಎಂದರು.
ಸಹಾಯ ಆಪ್‌ನಲ್ಲಿ ಸಾರ್ವಜನಿಕರು ದಾಖಲಿಸಿದ ದೂರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ವಾರ್ಡ್, ಉಪವಿಭಾಗ ಹಾಗೂ ವಲಯವಾರು ವರದಿ ಲಭ್ಯವಾಗಬೇಕು; ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲಾಗಿನ್‌ಗಳಲ್ಲಿ ಬಾಕಿ ಪ್ರಕರಣ ಸ್ಪಷ್ಟವಾಗಿ ಕಾಣಬೇಕು. ಈ ಸಂಬಂಧ ನವೆಂಬರ್ 12ರಂದು ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಸಂಬಂಧಿತ ಎಲ್ಲ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಲಾಯಿತು.
ವಾರ್ಡ್ ಒನ್ ಅಭಿಯಾನದಡಿ ರಸ್ತೆ ಗುಂಡಿ ದುರಸ್ತಿ, ಬ್ಲ್ಯಾಕ್ ಸ್ಪಾಟ್ ತೆರವು, ರಸ್ತೆ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ, ಚರಂಡಿ ಹೂಳೆತ್ತುವಿಕೆ ಹಾಗೂ ಕಟ್ಟಡ ತ್ಯಾಜ್ಯ ತೆರವು ಪ್ರಗತಿ ಪರಿಶೀಲಿಸಲಾಯಿತು; ಪೂರ್ಣಗೊಂಡ ಮತ್ತು ಬಾಕಿ ಕಾಮಗಾರಿಗಳ ಸಂಪೂರ್ಣ ವಿವರ ಸಲ್ಲಿಸುವಂತೆ ಸೂಚಿಸಲಾಯಿತು. ತ್ಯಾಜ್ಯ ನಿರ್ವಹಣೆ ಕುರಿತು ಹಸಿ-ಒಣ ಕಸ ವಿಂಗಡಣೆ, ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದನ್ನು ತಡೆಯುವುದು ಹಾಗೂ ಕಟ್ಟಡ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲು ಐಇಸಿ ಅಭಿಯಾನ ರೂಪಿಸುವಂತೆ ಆಯುಕ್ತರು ನಿರ್ದೇಶನ ನೀಡಿದರು.
ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಮಹದೇವಪುರ ವಲಯದ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ ಕೆ., ಕೆ.ಆರ್. ಪುರ ವಲಯದ ಜಂಟಿ ಆಯುಕ್ತರಾದ ಡಾ. ಯತೀಶ್ ಉಳ್ಳಾಲ್, ಮುಖ್ಯ ಅಭಿಯಂತರರಾದ ಎಂ. ಲೋಕೇಶ್, ವಿಶ್ವನಾಥ್ ಜೆ. ಸೇರಿದಂತೆ ವಲಯ ಹಾಗೂ ವಿಭಾಗ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
