ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ನಡೆದ ವಿಶೇಷ ಸ್ವಚ್ಛತಾ ಕಾರ್ಯಾಚರಣೆಯ ಚಿತ್ರಗಳು. ಫೋಟೋ: ಜಿಬಿಎ
ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಚಾಮರಾಜಪೇಟೆ ವಿಭಾಗದ ಕೆ.ಆರ್. ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನವೆಂಬರ್ 8ರಿಂದ 11ರವರೆಗೆ ನಾಲ್ಕು ದಿನ ನಡೆದ ವಿಶೇಷ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಒಟ್ಟು 150 ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಬುಧವಾರ ತಿಳಿಸಿದೆ.
ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಹೂವು, ಹಣ್ಣು, ತರಕಾರಿ, ಪ್ಲಾಸ್ಟಿಕ್ ಹಾಗೂ ಬಿಸಾಡಿದ ಪೂಜಾ ಸಾಮಗ್ರಿ ಸೇರಿದಂತೆ ಹಬ್ಬಕ್ಕೆ ಸಂಬಂಧಿಸಿದ ಭಾರಿ ಪ್ರಮಾಣದ ತ್ಯಾಜ್ಯವನ್ನು ತ್ವರಿತವಾಗಿ ತೆರವುಗೊಳಿಸಲು ವಿಶೇಷ ತಂಡಗಳು ಹಾಗೂ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿತ್ತು ಎಂದು ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ವೆಂಕಟಾ ಚಲಪತಿ ಆರ್. ತಿಳಿಸಿದ್ದಾರೆ.
ದಿನವಾರು ತೆರವಾದ ತ್ಯಾಜ್ಯ
ಮೊದಲ ದಿನ 30 ಟನ್, ಎರಡನೇ ದಿನ 35 ಟನ್, ಮೂರನೇ ದಿನ 45 ಟನ್ ಹಾಗೂ ನಾಲ್ಕನೇ ದಿನ 40 ಟನ್ ತ್ಯಾಜ್ಯ ತೆರವುಗೊಳಿಸುವ ಮೂಲಕ ಒಟ್ಟು 150 ಟನ್ ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಹೇಳಿದೆ.
ಪ್ರತಿದಿನ ಒಂದು ಜೆಸಿಬಿ ಯಂತ್ರ ಹಾಗೂ ಹೆಚ್ಚುವರಿ ಕಾಂಪ್ಯಾಕ್ಟರ್ ವಾಹನಗಳನ್ನು ನಿಯೋಜಿಸಲಾಗಿತ್ತು. ಮೊದಲ ದಿನ ಮೂರು, ಎರಡನೇ ದಿನ ಮೂರು, ಮೂರನೇ ದಿನ ನಾಲ್ಕು ಹಾಗೂ ನಾಲ್ಕನೇ ದಿನ ಮೂರು ಕಾಂಪ್ಯಾಕ್ಟರ್ ವಾಹನಗಳನ್ನು ತ್ಯಾಜ್ಯ ಸಂಗ್ರಹ ಮತ್ತು ಸಾಗಾಟಕ್ಕೆ ಬಳಸಲಾಯಿತು.
ಸಹಾಯಕ ಪ್ರಧಾನ ವ್ಯವಸ್ಥಾಪಕರು, ಮಾರ್ಷಲ್ ಮೇಲ್ವಿಚಾರಕರು, ಮಾರ್ಷಲ್‌ಗಳು, ಕಿರಿಯ ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕ ಮೇಲ್ವಿಚಾರಕರು ಹಾಗೂ ಪೌರಕಾರ್ಮಿಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು; ಮಾರುಕಟ್ಟೆಯಲ್ಲಿ ಸಂಗ್ರಹವಾದ ತ್ಯಾಜ್ಯ ತೆರವಿಗೆ ಆದ್ಯತೆ ನೀಡಲು ಹಲವು ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಪಾಲಿಕೆ ತಿಳಿಸಿದೆ.
ಹಬ್ಬದ ತ್ಯಾಜ್ಯ ತೆರವಿನ ಜೊತೆಗೆ ಮುಂದಿನ ದಿನಗಳಲ್ಲೂ ಸ್ವಚ್ಛತೆ ಕಾಪಾಡಲು ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ನಿಗದಿತ ಸ್ಥಳಗಳಲ್ಲಿ ಮಾತ್ರ ಕಸ ಹಾಕಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದೆ ಸ್ವಚ್ಛತಾ ಕಾರ್ಯಾಚರಣೆಗೆ ಸಹಕರಿಸುವಂತೆ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ವೆಂಕಟಾ ಚಲಪತಿ ಅವರು ಮನವಿ ಮಾಡಿದ್ದಾರೆ.
