ನವೆಂಬರ್ 24, 2026ರಂದು ಆರ್ಎಂವಿ 2ನೇ ಹಂತದಲ್ಲಿ ಸೀಲ್ ಮಾಡಲಾದ ವಾಣಿಜ್ಯ ಸಂಸ್ಥೆ. ಚಿತ್ರ: ಬೆಂಗಳೂರು ಉತ್ತರ ನಗರ ಪಾಲಿಕೆ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಆದೇಶ ಮತ್ತು ಲೋಕಾಯುಕ್ತದಲ್ಲಿ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಆರ್ಎಂವಿ 2ನೇ ಹಂತದಲ್ಲಿ ವಸತಿ ಕಟ್ಟಡಗಳಲ್ಲಿ ನಡೆಯುತ್ತಿದ್ದ 15 ವಾಣಿಜ್ಯ ಸಂಸ್ಥೆಗಳನ್ನು ಬೆಂಗಳೂರು ಉತ್ತರ ನಗರ ಪಾಲಿಕೆ ನವೆಂಬರ್ 24ರಂದು ಸೀಲ್ ಮಾಡಿದೆ ಎಂದು ಪಾಲಿಕೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರ ನಿರ್ದೇಶನದಂತೆ, ಪಾಲಿಕೆಯ ಎಂಜಿನಿಯರಿಂಗ್, ನಗರ ಯೋಜನೆ (ಎಡಿಟಿಪಿ), ಆರೋಗ್ಯ, ಶಿಕ್ಷಣ ಮತ್ತು ಪಶುಸಂಗೋಪನೆ ವಿಭಾಗಗಳ ಅಧಿಕಾರಿಗಳು ಜಂಟಿಯಾಗಿ, ವಸತಿ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವ ಮೂಲಕ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದರು.
ಸೀಲ್ ಮಾಡಲಾದ ಸಂಸ್ಥೆಗಳಲ್ಲಿ ಟೆಕ್ಸಾಮ್ ಎಂಜಿನಿಯರಿಂಗ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್, ಆದರ್ಶ ಅಂಡ್ ಕಂಪನಿ, ಶಾಮ್ ಫಾರ್ಮರ್ಸ್ ಲಿಮಿಟೆಡ್, ಡಿಜಿಟಲ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್, ಎಚ್ಎನ್ಆರ್ ರಿಯಾಲ್ಟಿ ಅಂಡ್ ಡೆವಲಪರ್ಸ್, ಆರ್.ಎ.ಎಂ.ಪಿ. (ಬೂಟಿಕ್), ಲೈವ್ ಆಡಿಯೋ ಲಿಮಿಟೆಡ್, ದೇವರ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಟೆಪ್ ಆಟೊಮೇಷನ್ ಪ್ರೈವೇಟ್ ಲಿಮಿಟೆಡ್ ಸೇರಿವೆ.
ವಸತಿ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆ ನಡೆಸುವ ಸಂಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲೂ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
