ಜಪಾನ್ ಪ್ರವಾಸದ ವೇಳೆ ರೈಲಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ವಿಡಿಯೋ ಗ್ರ್ಯಾಬ್.
ಜಪಾನ್: ಜಪಾನ್ನಲ್ಲಿ ರೈಲು ಪ್ರಯಾಣದ ಅನುಭವ ಹಂಚಿಕೊಂಡ ವಿಡಿಯೋದಲ್ಲಿ, ಕರ್ನಾಟಕದಲ್ಲೂ ಕನಿಷ್ಠ ಒಂದು ಕಡೆ ಜಪಾನ್ ಮಾದರಿಯ ಅತ್ಯಾಧುನಿಕ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎಂದು ನವೆಂಬರ್ 24ರ ಪ್ರಕಟಣೆ ತಿಳಿಸಿದೆ.
ಜಪಾನ್ನ ರೈಲ್ವೆ ನಿಲ್ದಾಣಗಳ ಸ್ವಚ್ಛತೆ, ಆಧುನಿಕ ಸೌಲಭ್ಯಗಳು ಮತ್ತು ರೈಲುಗಳ ವೇಗ ಹಾಗೂ ಸಮಯಪಾಲನೆಗೆ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
“ಜಪಾನ್ನ ರೈಲ್ವೆ ನಿಲ್ದಾಣಗಳನ್ನು ನೋಡಿದಾಗ ವಿಶೇಷ ಅನುಭವವಾಗುತ್ತದೆ. ಪ್ರತಿ ನಿಲ್ದಾಣದಲ್ಲೂ ಕೆಳಭಾಗ ಮತ್ತು ಮೇಲ್ಭಾಗದಲ್ಲಿ ದೊಡ್ಡ ಶಾಪಿಂಗ್ ಸೆಂಟರ್ಗಳು, ಪಂಚತಾರಾ ಹೋಟೆಲ್ಗಳಿವೆ. ವಿಮಾನ ನಿಲ್ದಾಣಗಳನ್ನು ಹೇಗೆ ಸ್ವಚ್ಛವಾಗಿ ನಿರ್ವಹಿಸುತ್ತಾರೋ ಅದೇ ರೀತಿ ರೈಲುಗಳು ಮತ್ತು ನಿಲ್ದಾಣಗಳನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಂಡಿದ್ದಾರೆ. ಇಂತಹ ಮಾದರಿಯನ್ನು ನಮ್ಮ ಕರ್ನಾಟಕದಲ್ಲೂ ಕನಿಷ್ಠ ಒಂದು ಕಡೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕೆಂಬ ಆಸೆ ಇದೆ” ಎಂದು ಅವರು ಹೇಳಿದರು.
ಅಲ್ಲಿನ ರೈಲುಗಳ ವೇಗ, ಸ್ವಚ್ಛತೆ ಮತ್ತು ಪ್ರಯಾಣಿಕರ ಸೌಲಭ್ಯಗಳು ಅದ್ಭುತವಾಗಿವೆ, ಒಂದು ನಿಮಿಷವೂ ವ್ಯತ್ಯಯವಾಗದಂತೆ ರೈಲುಗಳ ಆಗಮನ-ನಿರ್ಗಮನ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂದು ಅವರು ಹೇಳಿದರು. ವಿವಿಧ ರೈಲ್ವೆ ನಿಲ್ದಾಣಗಳು ಮತ್ತು ಪ್ಲಾಟ್ಫಾರ್ಮ್ಗಳನ್ನು ವೀಕ್ಷಿಸುವ ಅವಕಾಶವೂ ಸಿಕ್ಕಿದೆ ಎಂದರು.
“ಇಂತಹ ಅನೇಕ ಹೊಸ ಪ್ರಯತ್ನಗಳಿಗೆ ನಾವು ಕೈಹಾಕಬೇಕು. ನಮ್ಮ ದೇಶ ಅಭಿವೃದ್ಧಿಯ ಹಾದಿಯಲ್ಲಿ ಇನ್ನಷ್ಟು ವೇಗವಾಗಿ ಮುನ್ನಡೆಯಲು ಇಂತಹ ಅತ್ಯುತ್ತಮ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು. ಜಪಾನ್ ಪ್ರವಾಸ ನನ್ನ ಜೀವನದಲ್ಲಿ ಹೊಸ ಅನುಭವ ನೀಡಿದೆ” ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:
