ದೇವನಹಳ್ಳಿಯಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 71ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಸಾಂಸ್ಕೃತಿಕ ಪ್ರದರ್ಶನ. ಚಿತ್ರ: ಒದಗಿಸಲಾಗಿದೆ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 62,854 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ರೈತರಿಗೆ ಪರಿಹಾರ ನೀಡಲು ₹52.88 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಸಮಾಜ ಕಲ್ಯಾಣ ಸಚಿವರು, ಜಿಲ್ಲೆಯ ಯೋಜನೆಗಳ ಪ್ರಗತಿಯ ಮಾಹಿತಿ ನೀಡಿದರು.
ದೇವನಹಳ್ಳಿ ಸಮೀಪ ಕನ್ನಡ ಭವನ ನಿರ್ಮಾಣಕ್ಕೆ 1.20 ಎಕರೆ ಜಾಗ ಗುರುತಿಸಲಾಗಿದ್ದು, ₹15 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಹೆಚ್ಚುವರಿಯಾಗಿ ₹7 ಕೋಟಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.
ನಾಡಪ್ರಭು ಕೆಂಪೇಗೌಡರ ಮೂಲಸ್ಥಳವಾದ ದೇವನಹಳ್ಳಿಯ ಆವತಿ ಬಳಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಿಸಲು 10 ಎಕರೆ ಜಾಗ ಗುರುತಿಸಲಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ 1,192 ಗ್ರಾಮಗಳ ಪೈಕಿ 1,134 ಗ್ರಾಮಗಳಲ್ಲಿ ಕಾಮಗಾರಿ ಕೈಗೊಂಡು 845 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, 1.84 ಲಕ್ಷ ಕುಟುಂಬಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯ 32 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿಗೆ ಆಯ್ಕೆ ಮಾಡಲಾಗಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ 2,20,292 ಮಹಿಳೆಯರಿಗೆ ಮಾಸಿಕ ₹2,000ರಂತೆ ಒಟ್ಟು ₹1,238.34 ಕೋಟಿ ಜಮೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3,39,080 ಕುಟುಂಬಗಳಿಗೆ ಉಚಿತ ವಿದ್ಯುತ್ ಕಲ್ಪಿಸಲಾಗಿದ್ದು, ₹564 ಕೋಟಿ ಸಹಾಯಧನ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 2,25,633 ಬಿಪಿಎಲ್ ಕುಟುಂಬಗಳ ಫಲಾನುಭವಿಗಳಿಗೆ 10 ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರು 13.90 ಕೋಟಿ ಬಾರಿ ಉಚಿತವಾಗಿ ಪ್ರಯಾಣಿಸಿದ್ದು, ₹310 ಕೋಟಿ ರಿಯಾಯಿತಿ ನೀಡಲಾಗಿದೆ ಎಂದು ಮುನಿಯಪ್ಪ ತಿಳಿಸಿದರು.
ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯಿಂದ ಆಯ್ಕೆಯಾದ ಚಲನಚಿತ್ರ ಕ್ಷೇತ್ರದ ಅಶೋಕ್, ಸಂಗೀತ ಕ್ಷೇತ್ರದ ವಿ. ಮುರಳಿ ಹಾಗೂ ರಂಗಭೂಮಿ ಕ್ಷೇತ್ರದ ಕೆಂಪಣ್ಣ ಅವರನ್ನು ಸಚಿವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ 16 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೊಲೀಸ್ ತುಕಡಿಗಳಿಂದ ಪಥ ಸಂಚಲನ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ, ಜಿಲ್ಲಾ ಪಂಚಾಯತ್ ಸಿಇಒ ಡಾ. ವಾಸಂತಿ ಅಮರ್, ಎಸ್ಪಿ ಚಂದ್ರಕಾಂತ್ ಎಂ.ವಿ., ಅಪರ ಜಿಲ್ಲಾಧಿಕಾರಿ ರಂಗನಾಥ್ ಉಪಸ್ಥಿತರಿದ್ದರು.
