ಬೆಂಗಳೂರಿನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಶೇ.51 ಪೂರ್ಣ; NDMF ಯೋಜನೆಗಳಿಗೆ ಡಿಸೆಂಬರ್ ಗಡುವು ನಿಗದಿಪಡಿಸಿದ GBA ಮುಖ್ಯ ಆಯುಕ್ತ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ (NDMF) ಅನುದಾನದಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
NDMF ಮತ್ತು ವಿಶ್ವ ಬ್ಯಾಂಕ್ ಅನುದಾನದ ಯೋಜನೆಗಳು, ವೈಟ್ ಟಾಪಿಂಗ್ ಹಾಗೂ ಬಫರ್ ರಸ್ತೆ ಕಾಮಗಾರಿಗಳ ಪ್ರಗತಿ ಕುರಿತು ನಡೆದ ವರ್ಚುವಲ್ ಸಭೆಯಲ್ಲಿ ಮಹೇಶ್ವರ್ ರಾವ್ ಪರಿಶೀಲನೆ ನಡೆಸಿ, ಬಾಕಿ ಕಾಮಗಾರಿಗಳಿಗೆ ವೇಗ ನೀಡುವಂತೆ ನಿರ್ದೇಶಿಸಿದರು.
NDMF ಅಡಿ ₹237.25 ಕೋಟಿ ವೆಚ್ಚದಲ್ಲಿ ಒಟ್ಟು 20 ಪ್ಯಾಕೇಜ್ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈವರೆಗೆ ಶೇ.55ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳನ್ನು ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ನಗರದಲ್ಲಿ ವಿಶ್ವ ಬ್ಯಾಂಕ್ನ ₹2,000 ಕೋಟಿ ಅನುದಾನದಡಿ ಒಟ್ಟು 16 ಪ್ಯಾಕೇಜ್ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 15 ಪ್ಯಾಕೇಜ್ಗಳಲ್ಲಿ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಒಟ್ಟಾರೆ ಶೇ.13ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಕಾಮಗಾರಿಗಳಿಗೆ ಮತ್ತಷ್ಟು ವೇಗ ನೀಡಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮಹೇಶ್ವರ್ ರಾವ್ ಸೂಚಿಸಿದರು.
ನಗರದ 120.69 ಕಿ.ಮೀ. ಉದ್ದದ ರಸ್ತೆಗಳಲ್ಲಿ ಒಟ್ಟು ₹1,700 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ₹800 ಕೋಟಿ ಮತ್ತು ₹900 ಕೋಟಿ ಮೊತ್ತದ ಯೋಜನೆಗಳು ಸೇರಿವೆ. ಈವರೆಗೆ 61.43 ಕಿ.ಮೀ. ರಸ್ತೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಒಟ್ಟಾರೆ ಪ್ರಗತಿ ಶೇ.51ರಷ್ಟಿದೆ. ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
ವೈಟ್ ಟಾಪಿಂಗ್ ಕೈಗೊಳ್ಳುವ ರಸ್ತೆಗಳಲ್ಲಿ ಬೆಂಗಳೂರು ಜಲಮಂಡಳಿ ಪೈಪ್ಲೈನ್ ಅಳವಡಿಸಲು ಉದ್ದೇಶಿಸಿರುವ ಕಡೆಗಳಲ್ಲಿ ಪೈಪ್ಲೈನ್ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು ಎಂದು ಮಹೇಶ್ವರ್ ರಾವ್ ಸೂಚಿಸಿದರು. ಅಗತ್ಯವಿರುವ ಕಡೆ ಪಾದಚಾರಿ ಮಾರ್ಗದಲ್ಲಿರುವ ಬೆಸ್ಕಾಂನ ರಿಂಗ್ ಮೇನ್ ಯೂನಿಟ್ಗಳನ್ನು ಸ್ಥಳಾಂತರಿಸುವಂತೆಯೂ ನಿರ್ದೇಶಿಸಿದರು.
ಕಾಮಗಾರಿ ಆರಂಭಿಸಲು ಸಂಚಾರ ಪೊಲೀಸರ ಅನುಮತಿ ಅಗತ್ಯವಿರುವ ಸ್ಥಳಗಳಲ್ಲಿ ಸಂಬಂಧಪಟ್ಟ ಸಂಚಾರ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಅನುಮತಿ ಪಡೆದು ವಿಳಂಬವಿಲ್ಲದೆ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ನಗರದಲ್ಲಿ ನಡೆಯುತ್ತಿರುವ ಬಫರ್ ರಸ್ತೆ ಕಾಮಗಾರಿಗಳನ್ನೂ ಪರಿಶೀಲಿಸಿದ ಮಹೇಶ್ವರ್ ರಾವ್, ಭೂಸ್ವಾಧೀನ ಸಮಸ್ಯೆಗಳಿರುವ ಕಡೆ ಸಂಬಂಧಪಟ್ಟ ನಗರ ಪಾಲಿಕೆಗಳ ಅಧಿಕಾರಿಗಳು ಅವುಗಳನ್ನು ಬಗೆಹರಿಸಬೇಕು ಎಂದು ಸೂಚಿಸಿದರು. ಯೋಜನೆಗಳಿಗೆ ಅಗತ್ಯವಿರುವ ಜಾಗದ ವಿವರಗಳನ್ನು ಕೂಡಲೇ ಸಲ್ಲಿಸುವಂತೆಯೂ ನಿರ್ದೇಶಿಸಿದರು.
ವಿಶೇಷ ಆಯುಕ್ತ ನಿತೀಶ್, ನಗರ ಪಾಲಿಕೆ ಆಯುಕ್ತ ಜಗದೀಶ್, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್. ಪ್ರಹ್ಲಾದ್, ಮುಖ್ಯ ಅಭಿಯಂತರರಾದ ಮಾದೇಶ್ ಮತ್ತು ರಾಜೇಶ್, ಕಾರ್ಯಪಾಲಕ ಅಭಿಯಂತರರು ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
