ಬೆಂಗಳೂರಿನಲ್ಲಿ ಶೇ.20ರಷ್ಟು ಖಾಲಿ ನಿವೇಶನ ಮಾಲೀಕರಿಂದ ಮಾತ್ರ ಸ್ವಚ್ಛತೆ; ಪಾಲಿಕೆಯಿಂದ ಸ್ವಚ್ಛಗೊಳಿಸಿ ಆಸ್ತಿ ತೆರಿಗೆ ಮೂಲಕ ವೆಚ್ಚ ವಸೂಲಿ
ಬೆಂಗಳೂರು, ಆಗಸ್ಟ್ 24: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಗಡುವಿನೊಳಗೆ ಕೇವಲ ಶೇ.20ರಷ್ಟು ಖಾಲಿ ನಿವೇಶನಗಳ ಮಾಲೀಕರು ಮಾತ್ರ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿದ್ದು, ಉಳಿದ ಸ್ವಚ್ಛಗೊಳಿಸದ ನಿವೇಶನಗಳನ್ನು ಗುರುತಿಸಿ ಪಾಲಿಕೆಗಳೇ ಸ್ವಚ್ಛಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ಆಸ್ತಿ ತೆರಿಗೆ ಮೂಲಕ ವಸೂಲಿ ಮಾಡುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.
ನಗರದ ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಕುರಿತು ಸೋಮವಾರ ನಡೆದ ವರ್ಚುವಲ್ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದರು.
ಖಾಲಿ ನಿವೇಶನಗಳ ಮಾಲೀಕರು ಸ್ವತಃ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಆಗಸ್ಟ್ 22ರವರೆಗೆ ಗಡುವು ನೀಡಲಾಗಿತ್ತು. ಆದರೆ, ಕೆಲವು ಪ್ರದೇಶಗಳಲ್ಲಿ ಶೇ.20ರಷ್ಟು ನಿವೇಶನಗಳ ಮಾಲೀಕರು ಮಾತ್ರ ಸ್ವತಃ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ ಎಂದು ಸಚಿವರು ತಿಳಿಸಿದರು. ಉಳಿದ ಖಾಲಿ ನಿವೇಶನಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಐದೂ ನಗರ ಪಾಲಿಕೆಗಳು ಅಗತ್ಯ ಸಿದ್ಧತೆ ಮಾಡಿಕೊಂಡು ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿದರು.
ಖಾಸಗಿ ಖಾಲಿ ನಿವೇಶನಗಳನ್ನು ಪಾಲಿಕೆ ವತಿಯಿಂದ ಸ್ವಚ್ಛಗೊಳಿಸಲು ತಗಲುವ ವೆಚ್ಚವನ್ನು ಸಂಬಂಧಪಟ್ಟ ಆಸ್ತಿ ತೆರಿಗೆ ಮೂಲಕ ವಸೂಲಿ ಮಾಡಬೇಕು ಎಂದು ಕೃಷ್ಣ ಬೈರೇಗೌಡ ನಿರ್ದೇಶಿಸಿದರು.
ಸ್ವಚ್ಛಗೊಳಿಸಬೇಕಾದ ಖಾಲಿ ನಿವೇಶನಗಳನ್ನು ಕಂದಾಯ ಅಧಿಕಾರಿಗಳು ಗುರುತಿಸಿ ಪಟ್ಟಿ ಸಿದ್ಧಪಡಿಸಬೇಕು. ಗುರುತಿಸಲಾದ ನಿವೇಶನಗಳಿಗೆ ಮಾರ್ಷಲ್ಗಳು ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರು ನೋಟಿಸ್ ಅಂಟಿಸಬೇಕು. ಬಳಿಕ ಸಂಬಂಧಪಟ್ಟ ಪಾಲಿಕೆಯ ವತಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.
ಎಲ್ಲಾ ನಗರ ಪಾಲಿಕೆಗಳಲ್ಲೂ ಗುರುವಾರದಿಂದ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯ ಆರಂಭಿಸಿ, ಮುಂದಿನ ಸೋಮವಾರದಿಂದ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
ನಗರದಾದ್ಯಂತ ಕಾರ್ಯಾಚರಣೆ ನಡೆಸಲು ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್ ಹಾಗೂ ಅಗತ್ಯ ಸಿಬ್ಬಂದಿ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಿರುವ ಏಜೆನ್ಸಿಗಳನ್ನು ಗುರುತಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.
ಪ್ರತಿ ಖಾಲಿ ನಿವೇಶನವನ್ನು ಸ್ವಚ್ಛಗೊಳಿಸುವ ಮೊದಲು ಮತ್ತು ನಂತರದ ಸ್ಥಿತಿಯನ್ನು ಜಿಯೋ-ಲೊಕೇಷನ್ ಸಹಿತ ವೀಡಿಯೋದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಈ ವೀಡಿಯೋ ದಾಖಲೆಗಳ ಆಧಾರದ ಮೇಲೆಯೇ ಗುತ್ತಿಗೆದಾರರಿಗೆ ಹಣ ಪಾವತಿಸಬೇಕು ಎಂದು ನಿರ್ದೇಶಿಸಿದರು.
ಸ್ವಚ್ಛತಾ ಕಾರ್ಯದ ವೇಳೆ ಸಂಗ್ರಹವಾಗುವ ತ್ಯಾಜ್ಯ ಮತ್ತು ಭಗ್ನಾವಶೇಷಗಳನ್ನು ರಸ್ತೆ ಬದಿ ಅಥವಾ ಇತರ ಖಾಲಿ ಜಾಗಗಳಲ್ಲಿ ಸುರಿಯಬಾರದು. ಪಾಲಿಕೆ ಗುರುತಿಸಿರುವ ಅಧಿಕೃತ ಸ್ಥಳಗಳಲ್ಲಿಯೇ ಅವುಗಳನ್ನು ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಸ್ವಚ್ಛತಾ ಕಾರ್ಯಕ್ಕಾಗಿ ಅಭಿವೃದ್ಧಿಪಡಿಸಿರುವ ‘Clear It’ ತಂತ್ರಾಂಶದಲ್ಲಿ ಪ್ರತಿ ಕಾರ್ಯಾಚರಣೆಯ ಆರಂಭದಿಂದ ಅಂತ್ಯದವರೆಗಿನ ಸಂಪೂರ್ಣ ಮಾಹಿತಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸ್ವಚ್ಛಗೊಳಿಸದ ಖಾಲಿ ನಿವೇಶನಗಳ ಕುರಿತು ನಾಗರಿಕರು ‘Clear It’ ತಂತ್ರಾಂಶದ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಅಗತ್ಯ ವ್ಯವಸ್ಥೆಯನ್ನು ತಂತ್ರಾಂಶದಲ್ಲಿ ಕೂಡಲೇ ಅಭಿವೃದ್ಧಿಪಡಿಸುವಂತೆ ಕೃಷ್ಣ ಬೈರೇಗೌಡ ಸೂಚಿಸಿದರು.
ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್ ಮತ್ತು ಡಾ. ರಾಜೇಂದ್ರ ಕೆ.ವಿ., ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಸಿಇಒ ಕರೀಗೌಡ, ಅಪರ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
