ಬೆಂಗಳೂರು SIR ಕರಡು ಪಟ್ಟಿಯಲ್ಲಿ 56.99 ಲಕ್ಷ ಮತದಾರರು; 46.88 ಲಕ್ಷ ಮಂದಿ ASDD ಪಟ್ಟಿಯಲ್ಲಿ, ಸೆಪ್ಟೆಂಬರ್ 23ರವರೆಗೆ ಹಕ್ಕು-ಆಕ್ಷೇಪಣೆಗೆ ಅವಕಾಶ
ಬೆಂಗಳೂರು, ಆಗಸ್ಟ್ 24: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)-2026ರಡಿ ಪ್ರಕಟಿಸಲಾದ ಬೆಂಗಳೂರು ನಗರದ ಕರಡು ಮತದಾರರ ಪಟ್ಟಿಯಲ್ಲಿ 56,99,660 ಮತದಾರರಿದ್ದು, ಜೂನ್ 16ರ ಕರಡು ಪಟ್ಟಿಯಲ್ಲಿದ್ದ 46,88,703 ಮತದಾರರನ್ನು ನಾಪತ್ತೆ, ಸ್ಥಳಾಂತರ, ಮರಣ, ನಕಲು ಹಾಗೂ ಇತರೆ (ASDD) ವರ್ಗಗಳಲ್ಲಿ ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ 27,69,866 ಪುರುಷರು, 29,29,092 ಮಹಿಳೆಯರು ಹಾಗೂ 702 ಇತರೆ ಮತ್ತು ತೃತೀಯ ಲಿಂಗದ ಮತದಾರರು ಸೇರಿದ್ದಾರೆ.
ಕರಡು ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಸಲ್ಲಿಸಬಹುದು. ಹಕ್ಕು ಮತ್ತು ಆಕ್ಷೇಪಣೆಗಳಿಗೆ ನೋಟಿಸ್ ನೀಡುವ ಹಾಗೂ ವಿಲೇವಾರಿ ಪ್ರಕ್ರಿಯೆ ಅಕ್ಟೋಬರ್ 22ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27, 2026ರಂದು ಪ್ರಕಟಿಸಲಾಗುವುದು.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಕರಡು ಪಟ್ಟಿಯನ್ನು ಸಾರ್ವಜನಿಕರ ಪರಿಶೀಲನೆಗೆ ಪ್ರಕಟಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿ-ಕರ್ನಾಟಕ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ಜಾಲತಾಣಗಳಲ್ಲಿಯೂ ಮತದಾರರು ತಮ್ಮ ಹೆಸರು ಪರಿಶೀಲಿಸಬಹುದು.
ಜೂನ್ 16, 2026ರ ಕರಡು ಪಟ್ಟಿಯಲ್ಲಿ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ 1,03,88,363 ಮತದಾರರಿದ್ದರು. ಇವರಲ್ಲಿ 56,99,660 ಮಂದಿ, ಅಂದರೆ ಶೇ.54.87ರಷ್ಟು ಮತದಾರರ ಡಿಜಿಟಲೀಕರಣ ಪೂರ್ಣಗೊಂಡಿದ್ದು, 46,88,703 ಮಂದಿ, ಅಂದರೆ ಶೇ.45.13ರಷ್ಟು ಮತದಾರರನ್ನು ASDD ವರ್ಗದಲ್ಲಿ ಗುರುತಿಸಲಾಗಿದೆ.
28 ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಟ್ಟೆಗಳ ಪುನರ್ವಿಂಗಡಣೆ ಬಳಿಕ ಮತಗಟ್ಟೆಗಳ ಸಂಖ್ಯೆ 8,972ರಿಂದ 9,008ಕ್ಕೆ ಏರಿದ್ದು, 36 ಹೊಸ ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ.
2026ರ ಅಕ್ಟೋಬರ್ 1ನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ 18 ವರ್ಷ ಮೇಲ್ಪಟ್ಟ ಅರ್ಹ ನಾಗರಿಕರು ನಮೂನೆ-6 ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು. ಆನ್ಲೈನ್ ಮೂಲಕವೂ ಚುನಾವಣಾ ಆಯೋಗದ Voters Portal ಹಾಗೂ ಮೊಬೈಲ್ ಅಪ್ಲಿಕೇಶನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಹೊಸ ನೋಂದಣಿಗೆ ವಯಸ್ಸಿನ ಪುರಾವೆ, ಸಾಮಾನ್ಯ ನಿವಾಸದ ಪುರಾವೆ, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಬಣ್ಣದ ಛಾಯಾಚಿತ್ರ ಹಾಗೂ ಹಿಂದಿನ SIRಗೆ ಸಂಬಂಧಿಸಿದ ಘೋಷಣಾ ನಮೂನೆಯ ವಿವರಗಳನ್ನು ಸಲ್ಲಿಸಬೇಕು. ಹಿಂದಿನ SIR ವಿವರಗಳು ಲಭ್ಯವಿಲ್ಲದಿದ್ದರೆ ಘೋಷಣಾ ನಮೂನೆಯಲ್ಲಿ ಸೂಚಿಸಿರುವ ಪರ್ಯಾಯ ದಾಖಲೆಗಳನ್ನು ಪರಿಶೀಲನೆ ವೇಳೆ ಹಾಜರುಪಡಿಸಬೇಕು. ಹೊಸ ಸೇರ್ಪಡೆಗಾಗಿ ನಮೂನೆ-6ರೊಂದಿಗೆ Form-D ಅನ್ನು ಮತದಾರರ ನೋಂದಣಾಧಿಕಾರಿ ಅಥವಾ ಬಿಎಲ್ಒಗೆ ಸಲ್ಲಿಸಬಹುದು.
ಬೆಂಗಳೂರಿನ ನಾಲ್ಕು ಅಪರ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಒಟ್ಟು 24,05,044 ASDD ಅಥವಾ ಅಸಂಗತ ಪ್ರಕರಣಗಳಿದ್ದು, ಸಂಬಂಧಪಟ್ಟ ಚುನಾವಣಾಧಿಕಾರಿಗಳು ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಿದ್ದಾರೆ. ವಿಚಾರಣೆಗೆ ಒಳಪಡುವ ಮತದಾರರು ನಿಗದಿತ ದಿನ ಮತ್ತು ಸಮಯಕ್ಕೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮುಂದುವರಿಸಲು ಅವಕಾಶ ಪಡೆಯಲಿದ್ದಾರೆ. ವಿಚಾರಣೆಗೆ ಮತದಾರರ ಹಾಜರಾತಿ ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿ, ದೂರು, ಸಲಹೆ ಅಥವಾ ಆಕ್ಷೇಪಣೆಗಳಿಗಾಗಿ ಮತದಾರರು ಜಿಲ್ಲಾ ಸಹಾಯವಾಣಿ 1950 ಅಥವಾ 1800-4255-1950ಕ್ಕೆ ಕರೆ ಮಾಡಬಹುದು.
