ಬೆಂಗಳೂರಿಗೆ ಬಂದಿದ್ದ ಬಿಹಾರ ಮೂಲದ ವೃದ್ಧ ದಂಪತಿ ದುರಂತ ಅಂತ್ಯ; ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಶಂಕೆ
ಬೆಂಗಳೂರು, ಜೂನ್ 23: ಮಗನ ಮನೆಗೆ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ವೃದ್ಧ ದಂಪತಿಯ ಸಾವಿನ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಸುಮಿತ್ರ ಪ್ರಸಾದ್ (77) ಹಾಗೂ ಅವರ ಪತಿ ಶಿವಾನಂದಂ ಪ್ರಸಾದ್ (73) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಬಿಹಾರ ಮೂಲದ ಈ ದಂಪತಿ ಕೆಲ ದಿನಗಳ ಹಿಂದೆ ತಮ್ಮ ಮಗನ ಮನೆಗೆ ಬೆಂಗಳೂರಿಗೆ ಬಂದಿದ್ದರು. ಇಬ್ಬರೂ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸುಮಿತ್ರ ಪ್ರಸಾದ್ ಅವರಿಗೆ ಕಣ್ಣಿನ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದು, ಆರೋಗ್ಯ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ವಾಗ್ವಾದ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿ ಊಟ ಮುಗಿಸಿದ ಬಳಿಕ ದಂಪತಿ ತಮ್ಮ ಕೋಣೆಗೆ ತೆರಳಿದ್ದರು. ರಾತ್ರಿ ವೇಳೆ ಇಬ್ಬರ ನಡುವೆ ಮತ್ತೆ ಜಗಳ ನಡೆದಿದ್ದು, ಈ ವೇಳೆ ಶಿವಾನಂದಂ ಪ್ರಸಾದ್ ಅವರು ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬಳಿಕ ಅವರು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ನಂತರ ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಘಟನೆಯ ಸಂಪೂರ್ಣ ಹಿನ್ನೆಲೆ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.