ಮದ್ಯಪಾನ ಮಾಡಬೇಡಿ ಎಂದು ಹೇಳಿದ್ದಕ್ಕೆ ಪಿಜಿ ಮಾಲಿಕನ ಹತ್ಯೆ; ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಕೊಂದ ಆರೋಪದಲ್ಲಿ ಇಬ್ಬರ ಬಂಧನ
ಬೆಂಗಳೂರು, ಜೂನ್ 23: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಪಿಜಿ ಮಾಲಿಕನೊಬ್ಬನನ್ನು ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರದ ಓಎಂಬಿಆರ್ ಲೇಔಟ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಮಾಧವ (41) ಎಂದು ಗುರುತಿಸಲಾಗಿದ್ದು, ಅವರು ಸಿಎಮ್ಆರ್ ಕಾಲೇಜು ಸಮೀಪ ಪಿಜಿ (Paying Guest) ವಸತಿ ನಿಲಯವನ್ನು ನಡೆಸುತ್ತಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾರ, ಶನಿವಾರ ರಾತ್ರಿ ಪಿಜಿ ಮುಂಭಾಗದಲ್ಲಿ ಇಬ್ಬರು ಯುವಕರು ಮದ್ಯಪಾನ ಮಾಡುತ್ತಾ ಗಲಾಟೆ ನಡೆಸುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಮಾಧವ ಅವರು ಹೊರಬಂದು, “ಇಲ್ಲಿ ಮದ್ಯಪಾನ ಮಾಡಬೇಡಿ, ಬೇರೆ ಕಡೆಗೆ ಹೋಗಿ” ಎಂದು ಸೂಚಿಸಿದ್ದಾರೆ.
ಇದರಿಂದ ಕೋಪಗೊಂಡ ಆರೋಪಿಗಳು ಮಾಧವ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮಾಧವ ಅವರು ಬ್ಯಾಟ್ ಹಿಡಿದು ಅವರನ್ನು ಓಡಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಆದರೆ ಆರೋಪಿಗಳು ಬ್ಯಾಟ್ ಅನ್ನು ಕಸಿದುಕೊಂಡು ಮಾಧವ ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ತಲೆಗೆ ಬಲವಾದ ಹೊಡೆತ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಪೊಲೀಸರು, ಕಮ್ಮನಹಳ್ಳಿಯ ಡಾನ್ ಬೈಟ್ಸ್ ಅಲಿಯಾಸ್ ಡಾನ್ ಹಾಗೂ ಜೀವನಹಳ್ಳಿಯ ರಾಕೇಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪಿಜಿ ಮತ್ತು ಕಾಲೇಜು ಸಮೀಪವೇ ಬಾರ್ ಇದ್ದು, ಈ ಭಾಗದಲ್ಲಿ ಮದ್ಯಪಾನ ಮಾಡಿ ಗಲಾಟೆ ಮಾಡುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೇ ರೀತಿಯ ಕಿರಿಕಿರಿಯಿಂದ ಬೇಸತ್ತಿದ್ದ ಮಾಧವ ಅವರು ಆರೋಪಿಗಳಿಗೆ ಬುದ್ಧಿವಾದ ಹೇಳಿದ್ದು, ಅದು ಕೊನೆಗೆ ಹತ್ಯೆಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಆರೋಪಿಗಳ ಪಾತ್ರದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.